ಹೊಸದಿಲ್ಲಿ: ಇದುವರೆಗೆ ಕೇರಳ ರಾಜ್ಯದಲ್ಲಿ ಮಾತ್ರ ವರದಿಯಾಗಿದ್ದ ಮಂಕಿಪಾಕ್ಸ್ ಪ್ರಕರಣ ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕಂಡು ಬಂದಿದೆ. ಭಾನುವಾರ ದೆಹಲಿಯಲ್ಲಿ ಮಂಕಿಪಾಕ್ಸ್ ನ ಮೊದಲ ಪ್ರಕರಣ ವರದಿಯಾಗಿದೆ. ರೋಗಿಯನ್ನು ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ರೋಗಿಯು 31 ವರ್ಷದ ವ್ಯಕ್ತಿಯಾಗಿದ್ದು, ಈತನಿಗೆ ಯಾವುದೇ ವಿದೇಶಿ ಪ್ರಯಾಣದ ಇತಿಹಾಸವಿಲ್ಲ. ಜ್ವರ ಮತ್ತು ಚರ್ಮದ ಗಾಯಗಳೊಂದಿಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಪ್ರಕರಣದೊಂದಿಗೆ, ದೇಶದ ಒಟ್ಟು ಮಂಕಿಪಾಕ್ಸ್ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೇರಿದೆ. ಇದುವರೆಗಿನ ಮೂರು ಪ್ರಕರಣಗಳು ಕೇರಳದಲ್ಲೇ ಪತ್ತೆಯಾಗಿದೆ.
ಇದನ್ನೂ ಓದಿ:ಹೊಸಬಂತು ‘ಅನ್‌ಲಾಕ್ ರಾಘವ’ ಟೈಟಲ್ ಪೋಸ್ಟರ್
ದೆಹಲಿಯ ವ್ಯಕ್ತಿ ಇತ್ತೀಚೆಗೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸ್ಟಾಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ಅಧಿಕೃತ ಮೂಲಗಳನ್ನು ಉದ್ದೇಶಿಸಿ ಪಿಟಿಐ ವರದಿ ಮಾಡಿದೆ.
ಪಶ್ಚಿಮ ದೆಹಲಿಯ ನಿವಾಸಿಯಾಗಿರುವ ವ್ಯಕ್ತಿಯನ್ನು ಮೂರು ದಿನಗಳ ಹಿಂದೆ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮಾದರಿಗಳನ್ನು ಶನಿವಾರ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ಗೆ ಕಳುಹಿಸಲಾಗಿದ್ದು, ಅಲ್ಲಿ ಪಾಸಿಟಿವ್ ವರದಿಯಾಗಿದೆ ಎಂದು ಸಂಸ್ಥೆ ತಿಳಿಸಿದೆ.