ಬೆಂಗಳೂರು: ದಿಲ್ಲಿಯ ಬಾಂಗ್ಲಾವಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡ ಹಲವರಿಗೆ ಕೋವಿಡ್-19 ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಅಲ್ಲಿ ಪಾಲ್ಗೊಂಡ ಇತರರ ಮೇಲೂ ಕಣ್ಣಿಡಲಾಗಿದೆ. ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಇದುವರೆಗೆ ಕರ್ನಾಟಕದ 300 ಜನರು ಭಾಗವಹಿಸಿದ್ದರು ಎಂದು ಆರೋಗ್ಯ ಸಚಿವ ಬಿ ಶ್ರಿರಾಮುಲು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು ಈ ಮಾಹಿತಿಗಳನ್ನು ನೀಡಿದ್ದಾರೆ.
ನಿಜಾಮುದ್ದೀನ್ ಜಮಾತ್ ಮಸೀದಿಯ ಪ್ರಾರ್ಥನೆಯಲ್ಲಿ ಕರ್ನಾಟಕ ಮೂಲದ 300 ಜನರು ಭಾಗವಹಿಸಿದ್ದರು. ಅದರಲ್ಲಿ 40 ಜನರನ್ನು ಪತ್ತೆ ಹಚ್ಚಿ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದೆ. ಇದರಲ್ಲಿ 12 ಜನರ ವರದಿ ನೆಗೆಟಿವ್ ಬಂದಿದೆ ಎಂದು ಸಚಿವರು ಟ್ವೀಟ್ ಮಾಡಿದ್ದಾರೆ.
ದಿಲ್ಲಿ ಪ್ರಾರ್ಥನೆಯಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಮಲೇಶಿಯಾದ 62 ಪ್ರಜೆಗಳು ಕರ್ನಾಟಕಕ್ಕೆ ಬಂದ ಮಾಹಿತಿ ಲಭಿಸಿದೆ. ಇದರಲ್ಲಿ 12 ಜನರನ್ನ ಪತ್ತೆ ಹಚ್ಚಿ ಕ್ವಾರಂಟೈನ್ ನಲ್ಲಿ ಮಾಡಲಾಗುತ್ತಿದೆ. ತಮ್ಮ ದೇಶಕ್ಕೆ ಹಿಂತಿರುಗದೆ ಇಲ್ಲೇ ಉಳಿದಿರುವವರನ್ನು ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಕಾರ್ಯಾಚರಣೆ ನಡೆಸಿ, ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುವುದು ಎಂದು ಬಿ ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.