ನವದೆಹಲಿ:ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಮತಎಣಿಕೆ ಬುಧವಾರ (ಡಿಸೆಂಬರ್ 07) ಬೆಳಗ್ಗೆ ಆರಂಭಗೊಂಡಿದ್ದು, ಸದ್ಯದ ಟ್ರೆಂಡ್ ಪ್ರಕಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ಫಲಿತಾಂಶದಲ್ಲಿ ತೀವ್ರ ಪೈಪೋಟಿ ನಡೆದಿದೆ.
ಇದನ್ನೂ ಓದಿ:ಕನ್ನಡಕ್ಕೆ ಬಂದ್ರು ಕಬೀರ್ ಬೇಡಿ: ಕರಿ ಹೈದ ಕರಿ ಅಜ್ಜ ಚಿತ್ರದಲ್ಲಿ ರಾಜನಾಗಿ ಮಿಂಚು
ದೆಹಲಿ ಮಹಾನಗರ ಪಾಲಿಕೆಯ 250 ಸ್ಥಾನಗಳಲ್ಲಿ ಆಮ್ ಆದ್ಮಿ ಪಕ್ಷ 130 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 104 ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ತೃತೀಯ ಸ್ಥಾನದಲ್ಲಿದೆ.
ದೆಹಲಿ ಮಹಾನಗರ ಪಾಲಿಕೆ(ಎಂಸಿಡಿ)ಯ 250 ವಾರ್ಡ್ ಗಳಿಗೆ ಸುಮಾರು 1,349 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ದ್ವಾರಕಾ, ಓಕ್ಲಾ, ಮಂಗಲ್ಪುರಿ, ಪಿತಾಂಪುರ, ಅಲಿಪುರ್, ಮೊಡೆಲ್ ಟೌನ್, ಶಾಸ್ತ್ರಿ ಪಾರ್ಕ್, ಯಮುನಾ ವಿಹಾರ್, ಮಯೂರ್ ವಿಹಾರ್ ಮತ್ತು ನಂದ ನಗರಿಯಲ್ಲಿ ಮತಎಣಿಕೆ ನಡೆಯುತ್ತಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಂತರದ ಮತಗಟ್ಟೆ ಸಮೀಕ್ಷೆ ಪ್ರಕಾರ, ಆಮ್ ಆದ್ಮಿ ಪಕ್ಷ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಜಯಭೇರಿ ಗಳಿಸಲಿದೆ ಎಂದು ತಿಳಿಸಿತ್ತು. ಇದರೊಂದಿಗೆ ಕಳೆದ 15 ವರ್ಷಗಳಿಂದ ಮಹಾನಗರ ಪಾಲಿಕೆಯ 15 ವರ್ಷಗಳ ಬಿಜೆಪಿ ಆಡಳಿತ ಕೊನೆಗೊಳ್ಳಲಿದೆ ಎಂದು ವರದಿ ತಿಳಿಸಿತ್ತು.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 149ರಿಂದ 171 ಸ್ಥಾನಗಳಲ್ಲಿ ಜಯ ಗಳಿಸಲಿದ್ದು, ಬಿಜೆಪಿ 69-71 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿತ್ತು. ಕಾಂಗ್ರೆಸ್ ಕೇವಲ 5ರಿಂದ 9 ವಾರ್ಡ್ ಗಳಲ್ಲಿ ಜಯ ಗಳಿಸಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿತ್ತು.