Advertisement

ದೆಹಲಿ ಕರ್ನಾಟಕ ಸಂಘ:ಜನಕಪುರಿ ಮಹಿಳಾ ಮಂಡಳಿಯ ಬೆಳ್ಳಿಹಬ್ಬ

12:02 PM Oct 14, 2017 | |

ಮುಂಬಯಿ: ಇದು ನಮ್ಮ ಮಹಿಳೆಯರ, ಮಹಿಳೆಯರಿಗೋಸ್ಕರ ಮಹಿಳೆ ಯರ‌ ಕಾರ್ಯಕ್ರಮ, ಮೊದಲು ಅವರಿಗೆ ಅಭಿನಂದನೆಗಳು. ಕರ್ನಾಟಕ ಸಂಘ ನನಗೆ ತವರು ಮನೆಯ ಹಾಗೆ. ಏಕೆಂದರೆ  ಮೊದಲು ಐಎಎಸ್‌ ಮಾಡುತ್ತಿರುವಾಗ ನಾನು ಇಲ್ಲಿಯೇ ಉಳಿದುಕೊಂಡು ಐಎಎಸ್‌ ಉತ್ತೀರ್ಣಳಾಗಿದ್ದು. ಆದ್ದರಿಂದ ದೆಹಲಿ ಕರ್ನಾಟಕ ಸಂಘದಿಂದ ಯಾವಾಗಕರೆ ಬಂದರೂ ನಾನು ಎಷ್ಟೇ ಕಾರ್ಯನಿರತಳಾಗಿದ್ದರೂ ಕೂಡ ಬಂದೇ ಬರುತ್ತೇನೆ ಎಂದು ಉತ್ತರ ಪ್ರದೇಶ ಭವನದ ಆಯುಕ್ತೆ ಧನಲಕ್ಷ್ಮೀ  (ಐಎಎಸ್‌)  ನುಡಿದರು.

Advertisement

ದೆಹಲಿ ಕರ್ನಾಟಕ ಸಂಘದ ಸಹಯೋಗದೊಂದಿಗೆ ಅ. 8 ರಂದು ಸಂಘದ ಸಭಾಗೃಹದಲ್ಲಿ ನಡೆದ ಜನಕಪುರಿ ಮಹಿಳಾ ಮಂಡಳಿಯ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜನಕಪುರಿ ಮಹಿಳಾ ಮಂಡಳಿ ಬೆಳ್ಳಿ ಹಬ್ಬ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅಂದಿನಿಂದ ಇಂದಿನವರೆಗೆ ಬೆಳೆಸಿಕೊಂಡು ಬಂದಿರುವುದಕ್ಕಾಗಿ ಅದರ ಎಲ್ಲ ಕಾರಣಕರ್ತರನ್ನು ಶ್ಲಾಘಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಪತ್ನಿ ಸಬೀನಾ ಅವರು ಮಾತನಾಡಿ, ಇಂದು ಮಹಿಳೆಯರು ಎಲ್ಲ ರಂಗಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಪುರುಷರಿಗೆ ಸರಿಸಮಾನರಾಗಿ ನಿಂತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಜನಕಪುರಿ ಕನ್ನಡ ಕೂಟದಂತಹ ಮಹಿಳಾ ಮಂಡಳಿಗಳು ತೊಡಗಿ ಕೊಂಡಿರುವುದೇ ಸಾಕ್ಷಿಯಾಗಿದೆ ಎಂದು ನುಡಿದರು.
ಮಹಿಳೆಯರ ಸಬಲೀಕರಣದಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡಿರುವ ಕರಕುಶಲತೆ, ಅಡುಗೆ ಹಾಗೂ ಇನ್ನಿತರ ಕನ್ನಡ ನಾಡಿನ ಸಾಂಸ್ಕೃತಿಕ ಆಚರಣೆಗಳನ್ನು ಬೆಂಬಲಿಸುತ್ತಾ ಬಂದಿರುವ ಮಹಿಳಾ ಮಂಡಳಿಯ ಹುಟ್ಟು ಮತ್ತು ಬೆಳೆದು ಬಂದ ಕುರಿತಾಗಿ ಮಂಡಳಿಯ ಅಧ್ಯಕ್ಷೆ ಜಯಶ್ರೀ ಬಸವರಾಜು ಅವರು ವಿಸ್ತಾರವಾಗಿ ತಿಳಿಸಿದರು. ಮಹಿಳಾ ಮಂಡಳಿಯ ಕಾರ್ಯದರ್ಶಿ  ಸವಿತಾ ನೆಲ್ಲಿ ಮಾತನಾಡಿ, ಜನಕಪುರಿ ಮಹಿಳಾ ಮಂಡಳಿಯ ಅಭಿವೃದ್ಧಿಗಾಗಿ ಅನೇಕರು ಶ್ರಮಿಸಿದ್ದಾರೆ ಎಂದು ತಿಳಿಸುತ್ತ ಎಲ್ಲರಿಗೂ ಈ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸಿದರು. ಬೆಳ್ಳಿ ಹಬ್ಬವನ್ನು ಸಂಘದ ಜತೆಗೂಡಿ ಆಚರಿಸಲು ನೀಡಿದ ಸಂಘದ ಸಹಕಾರವನ್ನು ತುಂಬು ಹೃದಯದಿಂದ ಸ್ಮರಿಸಿದರು.

ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ, ದೆಹಲಿ ಕರ್ನಾಟಕ ಸಂಘಕ್ಕೆ ಎರಡು ಸಾಂಸ್ಕೃತಿಕ ಕಣ್ಣುಗಳು, ಒಂದು ದೆಹಲಿ ಸ್ನೇಹಾ ಕನ್ನಡ ಲೇಡೀಸ್‌ ಅಸೋಯೇಶನ್‌ ಇನ್ನೊಂದು ಜನಕಪುರಿ ಮಹಿಳಾ ಮಂಡಳಿ. ಇಂದು ಜನಕಪುರಿಯ ಮಹಿಳಾ ರತ್ನಗಳು ಕೂಡಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಸಂಘ ಇಂದು ಆರ್ಥಿಕವಾಗಿ ಸದೃಢವಾಗಿದೆ. ದೆಹಲಿಯ ಇತರ ಕನ್ನಡ ಸಂಘ ಸಂಸ್ಥೆಗಳಿಗೂ ಕೂಡಾ ಸಹಕಾರವನ್ನು ನೀಡಿ ಸ್ಪಂದಿಸುತ್ತಿವೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಸಂಘದ ಪ್ರ. ಕಾರ್ಯದರ್ಶಿ ಸಿ. ಎಂ. ನಾಗರಾಜ ಅವರು ಮಾತನಾಡಿ,  ಬೆಳ್ಳಿ ಹಬ್ಬದ ಆಚರಣೆಯ ಈ ಸಂದರ್ಭದಲ್ಲಿ ತಮ್ಮ ಶುಭಾಶಯವನ್ನು ಕೋರಿದರು.  ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಲಾ°ಡ್‌ ಸಹೋದರಿಯರಾದ ಕನ್ನಡ ಚಿತ್ರರಂಗದ  ಹಿನ್ನೆಲೆ ಗಾಯಕಿಯರಾದ ಮಾನಸ ಹೊಳ್ಳ ಮತ್ತು ಪ್ರಾರ್ಥನ ಕಿರಣ್‌ ಅವರಿಂದ ರಸಮಂಜರಿ ನಡೆಯಿತು. ಡಾ| ಎಸ್‌. ಎಲ್‌. ಭಂಡಾರ್‌ಕರ್‌ ನಿರ್ದೇಶನದ ದಿ| ಎಚ್‌. ಎಸ್‌. ಕುಲಕರ್ಣಿ ರಚಿತ ದೇವರು ಎದ್ದು ಬಂದಾಗ ನಾಟಕವನ್ನು ಪ್ರದರ್ಶಿಸಲಾಯಿತು. ಜನಕಪುರಿ ಮಹಿಳಾ ಮಂಡಳಿಯ ಸದಸ್ಯರು ಮತ್ತು ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ದೆಹಲಿ ಕರ್ನಾಟಕ ಸಂಘದ ಉಪಾಧ್ಯಕ್ಷೆ ಆಶಾಲತಾ ಎಂ. ಕಾರ್ಯಕ್ರಮ ನಿರೂಪಿಸಿದರು.  ಜತೆ ಕಾರ್ಯದರ್ಶಿ ಜಮುನಾ ಸಿ. ಮಠದ  ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next