ನವದೆಹಲಿ:ಕಳೆದ ವರ್ಷ ಜೂನ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನ ಕಥೆಯನ್ನಾಧರಿಸಿದ “ನ್ಯಾಯ್; ದಿ ಜಸ್ಟೀಸ್ ಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂಬ ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ(ಜೂನ್ 10) ನಿರಾಕರಿಸಿದೆ.
ಇದನ್ನೂ ಓದಿ:ಇನ್ಮುಂದೆ ವಾಟ್ಸಾಪ್ ಮೂಲಕವೂ ಜಿಯೋ ರೀಚಾರ್ಜ್ ಮಾಡಿಕೊಳ್ಳಬಹುದು
ಬಾಲಿವುಡ್ ನ ನ್ಯಾಯ್; ದಿ ಜಸ್ಟೀಸ್ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಸುಶಾಂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ಸಿನಿಮಾ ನಿರ್ಮಿಸುವ ಮೊದಲು ಕುಟುಂಬದ ಒಪ್ಪಿಗೆ ಪಡೆದಿಲ್ಲ ಹಾಗೂ ಆತ್ಮಹತ್ಯೆಯಲ್ಲಿ ವಿಶ್ವಾಸಿಗರ ಪಾತ್ರವಿದೆ ಎಂಬುದಾಗಿ ಚಿತ್ರೀಕರಿಸಲ್ಪಟ್ಟಿದೆ ಎಂದು ಕಿಶೋರ್ ಸಿಂಗ್ ಅರ್ಜಿಯಲ್ಲಿ ಆರೋಪಿಸಿದ್ದರು.
ಸಿನಿಮಾ ಹೊಣೆಗಾರಿಕೆ ಬಗ್ಗೆ ಜವಾಬ್ದಾರಿಯಿಂದ ಇರುವಂತೆ ನಿರ್ಮಾಪಕರಿಗೆ ನ್ಯಾಯಮೂರ್ತಿ ಸಂಜೀವ್ ನರುಲಾ ನೇತೃತ್ವದ ಪೀಠ ಸೂಚನೆ ನೀಡಿದೆ. ಸುಶಾಂತ್ ಪ್ರಕರಣದ ಕುರಿತಂತೆ ಸಿನಿಮಾ ಮಾಡುವ ಬಗ್ಗೆ ವಿವಿಧ ಚಲನಚಿತ್ರ ನಿರ್ಮಾಪಕರಲ್ಲಿ ಹೈಕೋರ್ಟ್ ಏಪ್ರಿಲ್ ನಲ್ಲಿ ಪ್ರತಿಕ್ರಿಯೆಯನ್ನು ಕೇಳಿತ್ತು. ತನ್ನ ಮಗನ ಹೆಸರು ಅಥವಾ ಹೋಲಿಕೆಯನ್ನು ಬಳಸಿಕೊಂಡು ಸಿನಿಮಾ ನಿರ್ಮಾಣ ಮಾಡಬಾರದು ಎಂದು ಸುಶಾಂತ್ ತಂದೆ ಹೈಕೋರ್ಟ್ ಮೆಟ್ಟಿಲೇರಿದ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿತ್ತು.
ಚಲನಚಿತ್ರ ನಿರ್ಮಾಪಕರು ಪರಿಸ್ಥಿತಿಯನ್ನು ಬಳಸಿಕೊಂಡು ಲಾಭ ಮಾಡಿಕೊಳ್ಳಲು ಸಿನಿಮಾ, ನಾಟಕ, ವೆಬ್ ಸರಣಿಗಳು, ಸಂದರ್ಶನಗಳನ್ನು ನಡೆಸುವ ಸಾಧ್ಯತೆ ಇದೆ. ಈ ರೀತಿ ಸಿನಿಮಾ, ಸಂದರ್ಶನ ಪ್ರಕಟವಾಗುವ ಮೂಲಕ ತನ್ನ ಮಗನ ಮತ್ತು ಕುಟುಂಬದ ಪ್ರತಿಷ್ಠೆಗೆ ಧಕ್ಕೆ ತಂದಂತೆ ಆಗಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು ಎಂದು ವರದಿ ತಿಳಿಸಿದೆ.