ಹೊಸದಿಲ್ಲಿ: “ದಿಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ ಕೇಜ್ರಿವಾಲ್ ರಾಜೀನಾಮೆ ನೀಡಿರುವುದು ನೋವಿನ ವಿಚಾರ. ಅವರನ್ನು ಮತ್ತೆ ಸಿಎಂ ಹುದ್ದೆಯಲ್ಲಿ ಕೂರಿಸುವುದೇ ನನ್ನ ಗುರಿ’ ಎಂದು ಆಪ್ ಶಾಸಕಾಂಗ ಪಕ್ಷದ ನಾಯಕಿ ಆತಿಷಿ ಮರ್ಲೆನಾ ಸಿಂಗ್ ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಮಂಗಳವಾರ ಆಪ್ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಆತಿಷಿ, ಕೇಜ್ರಿವಾಲ್‌ರನ್ನು “ನನ್ನ ಗುರು’ ಎಂದರಲ್ಲದೇ, “ಕೇಜ್ರಿವಾಲ್ ನನ್ನ ಮೇಲೆ ನಂಬಿಕೆ ಇರಿಸಿದ್ದಾರೆ. ಹೀಗಾಗಿಯೇ ನನಗೆ ಮುಖ್ಯಮಂತ್ರಿ ಎಂಬ ದೊಡ್ಡ ಹೊಣೆ ಲಭಿಸಿದೆ. ದಿಲ್ಲಿಗೆ ಇರುವುದು ಏಕೈಕ ಮುಖ್ಯಮಂತ್ರಿ. ಅವರೇ ಕೇಜ್ರಿವಾಲ್. ಮುಂದಿನ ವರ್ಷದ ಫೆಬ್ರವರಿಯಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ನಮ್ಮ ನಾಯಕನ ವಿರುದ್ಧ ಬಿಜೆಪಿ ಸಂಚು ರೂಪಿಸಿದೆ. ದಿಲ್ಲಿಯ ಮತದಾರರು ನಿಮ್ಮ ಮಗ, ಸಹೋದರನಾಗಿರುವ ಕೇಜ್ರಿವಾಲ್‌ರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದ್ದಾರೆ.
10 ವರ್ಷದ ಬಳಿಕ ದಿಲ್ಲಿಗೆ ಮಹಿಳಾ ಸಿಎಂ
ಸಿಎಂ ಆಗಿ ಆತಿಷಿ ನೇಮಕದ ಮೂಲದ ದಿಲ್ಲಿ ಯಲ್ಲಿ ಬರೋಬ್ಬರಿ 10 ವರ್ಷಗಳ ಬಳಿಕ ಮಹಿಳೆಯೊಬ್ಬರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದಂತಾಗಿದೆ. ಬಿಜೆಪಿಯ ದಿ| ಸುಷ್ಮಾ ಸ್ವರಾಜ್, ಕಾಂಗ್ರೆಸ್‌ನ ದಿ| ಶೀಲಾ ದೀಕ್ಷಿತ್ ಬಳಿಕ 3ನೇ ಮಹಿಳಾ ಸಿಎಂ ಎಂಬ ಖ್ಯಾತಿಗೆ ಆತಿಶಿ ಪಾತ್ರರಾಗಿದ್ದಾರೆ. ಕಾಲ್ಕಾಜಿ ಕ್ಷೇತ್ರದ ಶಾಸಕಿಯಾಗಿರುವ ಆತಿಶಿ ಅವರು ಕೇಜ್ರಿವಾಲ್‌ರ ನಂಬಿಕಸ್ಥ ನಾಯಕಿ. ಕೇಜ್ರಿವಾಲ್ ಜೈಲಲ್ಲಿದ್ದಾಗ ರಾಜ್ಯದ ಅಷ್ಟೂ ಆಡಳಿತ ನಿರ್ವಹಿಸಿದ ಹೆಗ್ಗಳಿಕೆ ಆತಿಷಿಯವರದ್ದು. ಶಿಕ್ಷಣ, ಲೋಕೋಪಯೋಗಿ, ಸಂಸ್ಕೃತಿ, ಪ್ರವಾಸೋದ್ಯಮ, ಮಹಿಳಾ- ಮಕ್ಕಳ ಕಲ್ಯಾಣ ಸೇರಿ 14 ಖಾತೆಗಳನ್ನು ಅವರು ನಿಭಾಯಿಸಿದ್ದಾರೆ. 1981ರ ಜೂ.8ಕ್ಕೆ ಜನಿಸಿದ ಆತಿಷಿ ದೆಹ ಲಿಯ ಸಂತ ಸ್ಟೀಫನ್ ಕಾಲೇಜಿನಿಂದ ಪದವಿ, ಆಕ್ಸ್‌ಫರ್ಡ್ ವಿವಿಯಿಂದ ಇತಿಹಾ ಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜಕೀಯ ಪ್ರವೇಶದ ಮೊದಲು ಆಂಧ್ರಪ್ರದೇಶದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. 2013ರಲ್ಲಿ ಆಪ್ ಸೇರಿದ ಅವರು, 2015ರಲ್ಲಿ ಡಿಸಿಎಂ ಆಗಿದ್ದ ಸಿಸೋಡಿಯಾಗೆ ಸಲಹೆಗಾರ್ತಿಯಾದರು. ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿ ಮಾರ್ಕ್ಸ್ ಮತ್ತು ಲೆನಿನ್ ಹೆಸರು ಗಳನ್ನು ಸೇರಿಸಿ “ಮರ್ಲೆನಾ’ ಎಂಬುದನ್ನು ತಮ್ಮ ಹೆಸರಿನ ಮುಂದೆ ಸೇರಿಸಿಕೊಂಡಿದ್ದಾರೆ. ದಿಲ್ಲಿಯ ಶಿಕ್ಷಣ ಕಾಯ್ದೆ ರೂಪಿಸುವಲ್ಲಿ ಆತಿಷಿ ಪಾತ್ರ ಮಹತ್ವದ್ದು. ಅವರ ಪತಿ ಪ್ರವೀಣ್ ಸಿಂಗ್ 2012ರಿಂದ ಆಪ್‌ಗಾಗಿ ಕೆಲಸ ಮಾಡುತ್ತಿದ್ದಾರೆ.
ಆತಿಷಿ ಆಯ್ಕೆ ಏಕೆ?
ಕೇಜ್ರಿ ಬಂಧನದ ಬಳಿಕ ಆಪ್ ಸರಕಾರ ಮುನ್ನಡೆಸುವಲ್ಲಿ ಪ್ರಧಾನ ಪಾತ್ರ.
ಏಕೈಕ ಮಹಿಳಾ ಸಚಿವೆ. ಶಿಕ್ಷಣ, ಹಣಕಾಸು,ಲೋಕೋಪಯೋಗಿ ಸೇರಿ 14 ಪ್ರಮುಖ ನಿರ್ವಹಣೆ.
ಸರಕಾರಿ ಶಾಲೆಗಳಲ್ಲಿ ಮೂಲಸೌರ್ಯ ಬಲಪಡಿಸುವಲ್ಲಿ ದೊಡ್ಡ ಕೊಡುಗೆ.
ಲೋಕಸಭೆ ಚುನಾವಣೆ ವೇಳೆ ಪ್ರಚಾರದ ಹೊಣೆ ನಿರ್ವಹಣೆ.
ಹರಿಯಾಣದಿಂದ ನೀರು ಪೂರೈಕೆಗಾಗಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಖ್ಯಾತಿ
ಉನ್ನತ ಶಿಕ್ಷಣ ಪಡೆದಿರುವ ವಿದ್ಯಾ ವಂತೆ. ನಗರ ಪ್ರದೇಶದವರ, ಮಧ್ಯಮ ವರ್ಗದ ಮತ ಸೆಳೆಯಲು ನೆರವು