Advertisement

IPL 2020: ಡೆಲ್ಲಿಗೆ ತೆರೆಯಿತು ಮೊದಲ ಫೈನಲ್‌ ಬಾಗಿಲು

11:34 PM Nov 08, 2020 | mahesh |

ಅಬುಧಾಬಿ: ಡೆಲ್ಲಿ ಕ್ಯಾಪಿಟಲ್ಸ್‌ ಐಪಿಎಲ್‌ ಕೂಟದಲ್ಲೇ ಮೊದಲ ಸಲ ಪ್ರಶಸ್ತಿ ಸುತ್ತಿಗೆ ನೆಗೆದು ಇತಿಹಾಸ ನಿರ್ಮಿಸಿದೆ. ರವಿವಾರದ ದ್ವಿತೀಯ ಕ್ವಾಲಿಫೈಯರ್‌ ಪಂದ್ಯದಲ್ಲಿ ಅಯ್ಯರ್‌ ಪಡೆ ಹೈದರಾಬಾದನ್ನು 17 ರನ್ನುಗಳಿಂದ ಮಣಿಸಿ ಕೂಟದಿಂದ ಹೊರದಬ್ಬಿತು. ಮಂಗಳವಾರ ಮುಂಬೈ ಮತ್ತು ಡೆಲ್ಲಿ ಪ್ರಶಸ್ತಿ ಸಮರಕ್ಕೆ ಇಳಿಯಲಿವೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಡೆಲ್ಲಿ 3 ವಿಕೆಟಿಗೆ 189 ರನ್‌ ಪೇರಿಸಿದರೆ, ಹೈದರಾಬಾದ್‌8 ವಿಕೆಟಿಗೆ 172ರ ತನಕ ಬಂದು ಶರಣಾಯಿತು.

Advertisement

ದೊಡ್ಡ ಮೊತ್ತದ ಚೇಸಿಂಗ್‌ ವೇಳೆ ಹೈದರಾಬಾದ್‌ ತನ್ನ ನಾಯಕ ವಾರ್ನರ್‌ ಅವರನ್ನು ಎರಡೇ ರನ್ನಿಗೆ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಪ್ರಿಯಂ ಗರ್ಗ್‌ (17), ಮನೀಷ್‌ ಪಾಂಡೆ (21) ಕೂಡ ಬೇಗನೇ ನಿರ್ಗಮಿಸಿದರು. ಹೋಲ್ಡರ್‌ ಬ್ಯಾಟಿಂಗಿನಲ್ಲೂ ಕೈಕೊಟ್ಟರು. ಆದರೆ ಕೇನ್‌ ವಿಲಿಯಮ್ಸನ್‌ ಮತ್ತು ಅಬ್ದುಲ್‌ ಸಮದ್‌ ಸೇರಿಕೊಂಡು ಹೋರಾಟವನ್ನು ಜಾರಿಯಲ್ಲಿರಿಸಿದರು. 45 ಎಸೆತಗಳಿಂದ 67 ರನ್‌ ಮಾಡಿದ ವಿಲಿಯಮ್ಸನ್‌ (5 ಬೌಂಡರಿ, 4 ಸಿಕ್ಸರ್‌) ಔಟಾಗುವುದರೊಂದಿಗೆ ಡೆಲ್ಲಿ ಕೈ ಮೇಲಾಯಿತು.

19ನೇ ಓವರ್‌ನಲ್ಲಿ ರಬಾಡ ಬೆನ್ನು ಬೆನ್ನಿಗೆ ಸಮದ್‌, ರಶೀದ್‌ ಖಾನ್‌ ಮತ್ತು ಗೋಸ್ವಾಮಿ ವಿಕೆಟ್‌ ಕಿತ್ತು ಹೈದರಾಬಾದ್‌ನ ಫೈನಲ್‌ ಬಾಗಿಲನ್ನು ಬಂದ್‌ ಮಾಡಿದರು. ರಬಾಡ ಸಾಧನೆ 29ಕ್ಕೆ 4 ವಿಕೆಟ್‌.

ಓಪನಿಂಗ್‌ ಸುಂಟರಗಾಳಿ
ಮೊದಲ ಕ್ವಾಲಿಫೈಯರ್‌ ಕದನದಲ್ಲಿ ಮುಂಬೈ ವಿರುದ್ಧ ಮಂಕು ಬಡಿದಂತೆ ಆಡಿದ್ದ ಡೆಲ್ಲಿ, ಇಲ್ಲಿ ಬ್ಯಾಟಿಂಗ್‌ ಲಯಕ್ಕೆ ಮರಳಿ ಪ್ರಚಂಡ ಪ್ರದರ್ಶನ ನೀಡಿತು. ಘಾತಕವಾಗಿ ಕಂಡುಬಂದಿದ್ದ ಹೈದರಾಬಾದ್‌ ಬೌಲಿಂಗ್‌ ಇಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.

ಪೃಥ್ವಿ ಶಾ ಬದಲು ಸ್ಟೋಯಿನಿಸ್‌ ಅವರನ್ನು ಆರಂಭಿಕನನ್ನಾಗಿ ಇಳಿಸಿದ ಡೆಲ್ಲಿ ಇದರಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತು. ಇಬ್ಬರೂ ಹತ್ತರ ಸರಾಸರಿಯಲ್ಲಿ ರನ್‌ ಪೇರಿಸತೊಡಗಿದರು. 9ನೇ ಓವರ್‌ ತನಕ ಈ ಜೋಡಿಯನ್ನು ಅಲುಗಾಡಿಸಲು ಹೈದರಾಬಾದ್‌ ಬೌಲರ್‌ಗಳಿಂದ ಸಾಧ್ಯವಾಗಲಿಲ್ಲ. ಧವನ್‌-ಸ್ಟೋಯಿನಿಸ್‌ ಸೇರಿಕೊಂಡು 8.2 ಓವರ್‌ಗಳಿಂದ 86 ರನ್‌ ಸೂರೆಗೈದರು.

Advertisement

3ನೇ ಓವರ್‌ನಲ್ಲಿ ಹೋಲ್ಡರ್‌ ಕೈಯಲ್ಲಿ ಜೀವದಾನ ಪಡೆದ ಸ್ಟೋಯಿನಿಸ್‌ ಇದರ ಭರ್ಜರಿ ಲಾಭವೆತ್ತಿದರು. ಹೋಲ್ಡರ್‌ ಪಾಲಾದ ಮುಂದಿನ ಓವರಿನಲ್ಲೇ 18 ರನ್‌ ಬಾಚಿದರು. ಪವರ್‌ ಪ್ಲೇಯಲ್ಲಿ ಡೆಲ್ಲಿ 65 ರನ್‌ ಪೇರಿಸಿ ದೊಡ್ಡ ಮೊತ್ತದ ಸೂಚನೆ ನೀಡಿತು.

9ನೇ ಓವರಿನಲ್ಲಿ ಸ್ಟೋಯಿನಿಸ್‌ ಅವರನ್ನು ಬೌಲ್ಡ್‌ ಮಾಡಿದ ರಶೀದ್‌ ಖಾನ್‌ ಹೈದರಾಬಾದ್‌ಗೆ ಮೊದಲ ಯಶಸ್ಸು ತಂದಿತ್ತರು. ಅವರ 38 ರನ್‌ 27 ಎಸೆತಗಳಿಂದ ಬಂತು. ಇದರಲ್ಲಿ 5 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು.

ಸ್ಟೋಯಿನಿಸ್‌ ಟಿ20 ಕ್ರಿಕೆಟ್‌ನಲ್ಲಿ ಆರಂಭಿಕನಾಗಿ ಇಳಿದದ್ದು ಇದೇನೂ ಮೊದಲ ಸಲವಲ್ಲ. ಇದಕ್ಕೂ ಮೊದಲು 44 ಬಾರಿ ಇನ್ನಿಂಗ್ಸ್‌ ಆರಂಭಿಸಿದ್ದ ಅವರು ಭರ್ತಿ ಒಂದೂವರೆ ಸಾವಿರ ರನ್‌ ಹೊಡೆದಿದ್ದಾರೆ. ಇದರಲ್ಲಿ ಒಂದು ಶತಕವೂ ಸೇರಿದೆ (ಅಜೇಯ 147).

ಧವನ್‌ 600 ರನ್‌
50 ಎಸೆತ ನಿಭಾಯಿಸಿದ ಶಿಖರ್‌ ಧವನ್‌ 78 ರನ್‌ ಬಾರಿಸಿ ಮಿಂಚಿದರು (6 ಬೌಂಡರಿ, 2 ಸಿಕ್ಸರ್‌). ಈ ಮೆರೆದಾಟದ ವೇಳೆ ಅವರು ಪ್ರಸಕ್ತ ಐಪಿಎಲ್‌ನಲ್ಲಿ 600 ರನ್‌ ಪೂರೈಸಿದರು. ಅವರು ಈ ಸಾಧನೆಗೈದ ಡೆಲ್ಲಿಯ 2ನೇ ಕ್ರಿಕೆಟಿಗ. 2018ರಲ್ಲಿ ರಿಷಭ್‌ ಪಂತ್‌ 684 ರನ್‌ ಕಲೆ ಹಾಕಿದ್ದರು.

ಆರಂಭದಲ್ಲಿ ತುಸು ನಿಧಾನ ಗತಿಯಲ್ಲಿದ್ದ ಧವನ್‌ ಬಳಿಕ ಎಂದಿನ ಸ್ಫೋಟಕ ಆಟಕ್ಕೆ ಮುಂದಾದರು. ಹೀಗಾಗಿ 10 ಓವರ್‌ಗಳಲ್ಲೇ ತಂಡದ ಮೊತ್ತ ನೂರರ ಗಡಿ ದಾಟಿತು. ಧವನ್‌ 26 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದರು.

ಸ್ಕೋರ್‌ ಪಟ್ಟಿ
ಡೆಲ್ಲಿ ಕ್ಯಾಪಿಟಲ್ಸ್‌
ಮಾರ್ಕಸ್‌ ಸ್ಟೋಯಿನಿಸ್‌ ಬಿ ರಶೀದ್‌ 38
ಶಿಖರ್‌ ಧವನ್‌ ಎಲ್‌ಬಿಡಬ್ಲ್ಯು ಬಿ ಸಂದೀಪ್‌ 78
ಶ್ರೇಯಸ್‌ ಅಯ್ಯರ್‌ ಸಿ ಪಾಂಡೆ ಬಿ ಹೋಲ್ಡರ್‌ 21
ಹೆಟ್‌ಮೈರ್‌ ಔಟಾಗದೆ 42
ರಿಷಭ್‌ ಪಂತ್‌ ಔಟಾಗದೆ 2

ಇತರ 8
ಒಟ್ಟು(20 ಓವರ್‌ಗಳಲ್ಲಿ 3 ವಿಕೆಟಿಗೆ) 189
ವಿಕೆಟ್‌ ಪತನ: 1-86, 2-126, 3-178.

ಬೌಲಿಂಗ್‌
ಸಂದೀಪ್‌ ಶರ್ಮ 4-0-30-1
ಜಾಸನ್‌ ಹೋಲ್ಡರ್‌ 4-0-50-1
ಶಾಬಾಜ್‌ ನದೀಮ್‌ 4-0-48-0
ರಶೀದ್‌ ಖಾನ್‌ 4-0-26-1
ಟಿ. ನಟರಾಜನ್‌ 4-0-32-0
ಸನ್‌ರೈಸರ್ ಹೈದರಾಬಾದ್‌
ಪ್ರಿಯಂ ಗರ್ಗ್‌ ಬಿ ಸ್ಟೋಯಿನಿಸ್‌ 17
ಡೇವಿಡ್‌ ವಾರ್ನರ್‌ ಬಿ ರಬಾಡ 2
ಮನೀಷ್‌ ಪಾಂಡೆ ಸಿ ನೋರ್ಜೆ ಬಿ ಸ್ಟೋಯಿನಿಸ್‌ 21
ಕೇನ್‌ ವಿಲಿಯಮ್ಸನ್‌ ಸಿ ರಬಾಡ ಬಿ ಸ್ಟೋಯಿನಿಸ್‌ 67
ಜಾಸನ್‌ ಹೋಲ್ಡರ್‌ ಸಿ ದುಬೆ ಬಿ ಅಕ್ಷರ್‌ 11
ಅಬ್ದುಲ್‌ ಸಮದ್‌ ಸಿ ಪೌಲ್‌ ಬಿ ರಬಾಡ 33
ರಶೀದ್‌ ಖಾನ್‌ ಸಿ ಅಕ್ಷರ್‌ ಬಿ ರಬಾಡ 11
ಗೋಸ್ವಾಮಿ ಸಿ ಸ್ಟೋಯಿನಿಸ್‌ ಬಿ ರಬಾಡ 0
ಶಾಬಾಜ್‌ ನದೀಮ್‌ ಔಟಾಗದೆ 2
ಸಂದೀಪ್‌ ಶರ್ಮ ಔಟಾಗದೆ 2

ಇತರ 6
ಒಟ್ಟು (20 ಓವರ್‌ಗಳಲ್ಲಿ 8 ವಿಕೆಟಿಗೆ) 172
ವಿಕೆಟ್‌ ಪತನ: 1-12, 2- 43, 3-44, 4-90, 5-147, 6-167, 7-167, 8-168.

ಬೌಲರ್‌
ಆರ್‌. ಅಶ್ವಿ‌ನ್‌ 3-0-33-0
ಕಾಗಿಸೊ ರಬಾಡ 4-0-29-4
ಆನ್ರಿಚ್‌ ನೋರ್ಜೆ 4-0-36-0
ಮಾರ್ಕಸ್‌ ಸ್ಟೋಯಿನಿಸ್‌ 3-0-26-3
ಅಕ್ಷರ್‌ ಪಟೇಲ್‌ 4-0-33-1
ಪ್ರವೀಣ್‌ ದುಬೆ 2-0-14-0

Advertisement

Udayavani is now on Telegram. Click here to join our channel and stay updated with the latest news.

Next