Advertisement

ಡೆಲ್ಲಿ ಟಾಪರ್‌; ಮೇಲೇಳದ ಹೈದರಾಬಾದ್‌

11:13 PM Sep 22, 2021 | Team Udayavani |

ದುಬಾೖ: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಬುಧವಾರದ ಮುಖಾಮುಖೀಯನ್ನು 8 ವಿಕೆಟ್‌ಗಳಿಂದ ಕಳೆದುಕೊಂಡ ಸನ್‌ರೈಸರ್ ಹೈದರಾಬಾದ್‌ ಯುಎಇಯಲ್ಲೂ ಸೋಲಿನ ನಂಟನ್ನು ಮುಂದುವರಿಸಿದೆ. ಡೆಲ್ಲಿ ಪಡೆ 7ನೇ ಜಯ ಸಾಧಿಸಿ ಮರಳಿ ಅಗ್ರಸ್ಥಾನ ಅಲಂಕರಿಸಿತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಹೈದರಾಬಾದ್‌ 9 ವಿಕೆಟಿಗೆ ಕೇವಲ 134 ರನ್‌ ಗಳಿಸಿದರೆ, ಡೆಲ್ಲಿ 17.5 ಓವರ್‌ಗಳಲ್ಲಿ 2 ವಿಕೆಟಿಗೆ 139 ರನ್‌ ಬಾರಿಸಿತು. ಶಿಖರ್‌ ಧವನ್‌ 42, ತಂಡಕ್ಕೆ ಮರಳಿದ ಶ್ರೇಯಸ್‌ ಅಯ್ಯರ್‌ ಔಟಾಗದೆ 47 ಹಾಗೂ ನಾಯಕ ರಿಷಭ್‌ ಪಂತ್‌ ಅಜೇಯ 35 ರನ್‌ ಬಾರಿಸಿದರು. ಹೋಲ್ಡರ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಅಯ್ಯರ್‌ ಡೆಲ್ಲಿ ಜಯವನ್ನು ಸಾರಿದರು.ಪೃಥ್ವಿ ಶಾ ಮಾತ್ರ ಅಗ್ಗಕ್ಕೆ ಔಟಾದರು (11).

ಇದು ಮೊದಲ 8 ಪಂದ್ಯಗಳಲ್ಲಿ ಹೈದರಾಬಾದ್‌ ಅನುಭವಿಸಿದ 7ನೇ ಸೋಲು.

ಆಘಾತಕಾರಿ ಆರಂಭ:

ಸನ್‌ರೈಸರ್ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. ಪಂದ್ಯದ 3ನೇ ಎಸೆತದಲ್ಲೇ ಅನ್ರಿಚ್‌ ನೋರ್ಜೆ ಮಾಜಿ ನಾಯಕ ಡೇವಿಡ್‌ ವಾರ್ನರ್‌ ಅವರನ್ನು ಶೂನ್ಯಕ್ಕೆ ವಾಪಸ್‌ ಕಳುಹಿಸಿದರು. ವಾರ್ನರ್‌ 2016ರ ಬಳಿಕ ಐಪಿಎಲ್‌ನಲ್ಲಿ ಖಾತೆ ತೆರೆಯದೆ ನಿರ್ಗಮಿಸಿದ ಮೊದಲ ನಿದರ್ಶನ ಇದಾಗಿದೆ.

Advertisement

ಮತ್ತೆ ಆರಂಭಿಕನಾಗಿ ಇಳಿದ ವೃದ್ಧಿಮಾನ್‌ ಸಾಹಾ, ವೇಗಿ ರಬಾಡ ಅವರಿಗೆ ಸಿಕ್ಸರ್‌ ಮೂಲಕ ಸ್ವಾಗತ ಕೋರಿದರು. ಆದರೆ ಅದೇ ಓವರಿನ ಅಂತಿಮ ಎಸೆತದಲ್ಲಿ ರಬಾಡ ಸೇಡು ತೀರಿಸಿಕೊಂಡರು. ಸಾಹಾ ಗಳಿಕೆ 18 ರನ್‌. ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಮನೀಷ್‌ ಪಾಂಡೆ ಜೋಡಿಯಿಂದಲೂ ತಂಡವನ್ನು ಆಧರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. 3ನೇ ವಿಕೆಟಿಗೆ ಇವರಿಂದ ಒಟ್ಟುಗೂಡಿದ್ದು 31 ರನ್‌ ಮಾತ್ರ. ಅಕ್ಷರ್‌ ಪಟೇಲ್‌ ಈ ಜೋಡಿಯನ್ನು ಬೇರ್ಪಡಿಸಿದರು. 18 ರನ್‌ ಮಾಡಿದ ವಿಲಿಯಮ್ಸನ್‌ ಹೆಟ್‌ಮೈರ್‌ಗೆ ಕ್ಯಾಚ್‌ ನೀಡಿ ವಾಪಸಾದರು. ಎದುರಿಸಿದ್ದು 26 ಎಸೆತ. ಹೊಡೆದದ್ದು ಒಂದೇ ಬೌಂಡರಿ.

ಒಂದು ರನ್‌ ಆಗುವಷ್ಟರಲ್ಲಿ ಮನೀಷ್‌ ಪಾಂಡೆ (17) ವಿಕೆಟ್‌ ಕೂಡ ಉರುಳಿತು. ಅವರು ರಬಾಡಗೆ ರಿಟರ್ನ್ ಕ್ಯಾಚ್‌ ನೀಡಿ ನಿರ್ಗಮಿಸಿದರು. ಕೇದಾರ್‌ ಜಾಧವ್‌ (3) ಅವರಿಂದಲೂ ತಂಡವನ್ನು ಆಧರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. 74 ರನ್‌ ಆಗುವಷ್ಟರಲ್ಲಿ ಅರ್ಧದಷ್ಟು ಮಂದಿಯ ಆಟ ಮುಗಿದಿತ್ತು. ಪವರ್‌ ಪ್ಲೇ ಅವಧಿಯಲ್ಲಿ 2ಕ್ಕೆ 32 ರನ್‌ ಮಾಡಿದ ಹೈದರಾಬಾದ್‌, 10 ಓವರ್‌ಗಳ ಮುಕ್ತಾಯಕ್ಕೆ 4ಕ್ಕೆ 66 ರನ್‌ ಗಳಿಸಿತ್ತು. ಡೆತ್‌ ಓವರ್‌ ಆರಂಭವಾಗುವ ವೇಳೆ ಸ್ಕೋರ್‌ 5 ವಿಕೆಟಿಗೆ 90 ರನ್‌ ಆಗಿತ್ತು. ಆದರೆ 16ನೇ ಓವರಿನ ಮೊದಲ ಎಸೆತದಲ್ಲೇ ದೊಡ್ಡ ಬೇಟೆಯಾಡಿದ ಅಕ್ಷರ್‌ ಪಟೇಲ್‌, ಅಪಾಯಕಾರಿ ಹೋಲ್ಡರ್‌ಗೆ (9) ಬಲೆ ಬೀಸಿದರು.

ಅಬ್ದುಲ್‌ ಸಮದ್‌, ರಶೀದ್‌ ಖಾನ್‌ ಕೊನೆಯ ಹಂತದಲ್ಲಿ ದಿಟ್ಟ ಆಟವಾಡಿದ್ದರಿಂದ ತಂಡದ ಮೊತ್ತ 130ರ ಗಡಿ ದಾಟಿತು. 21 ಎಸೆತಗಳಿಂದ 28 ರನ್‌ (2 ಬೌಂಡರಿ, 1 ಸಿಕ್ಸರ್‌).

Advertisement

Udayavani is now on Telegram. Click here to join our channel and stay updated with the latest news.

Next