ಹೊಸದಿಲ್ಲಿ : ದಿಲ್ಲಿ ಬಿಜೆಪಿ ವಕ್ತಾರ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಆಪ್ ಮುಖ್ಯಸ್ಥ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹೆಸರಿನಲ್ಲಿ “ದೇಶದ ಮಹಾ ಸುಳ್ಳುಗಾರ’ ಪ್ರಶಸ್ತಿಯನ್ನು ಆರಂಭಿಸಿದ್ದಾರೆ.
ಕೇಜ್ರಿವಾಲ್ ಅವರು ದೊಡ್ಡ ದೊಡ್ಡ ಭರವಸೆಗಳನ್ನು ಕೊಡುವ ಆದರೆ ಅವ್ಯಾವುದನ್ನೂ ಈಡೇರಿಸದ ಮಹಾ ಸುಳ್ಳುಗಾರನಾಗಿದ್ದಾರೆ ಎಂದು ಬಗ್ಗಾ ಆರೋಪಿಸಿದ್ದಾರೆ.
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೆಸರಿನಲ್ಲಿ “ದೇಶದ ಮಹಾ ಸುಳ್ಳುಗಾರ’ ಪ್ರಶಸ್ತಿಯನ್ನು ಆರಂಭಿಸಿರುವುದಾಗಿ ಬಗ್ಗಾ ಅವರು ಕಳೆದ ಮಾರ್ಚ್ 22ರಂದು ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಅರವಿಂದ ಕೇಜ್ರಿವಾಲ್ ಅವರು ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಯಾವುದೇ ಪುರಾವೆಗಳಿಲ್ಲದೆ ಅನೇಕ ನಿರಾಧಾರ ಮತ್ತು ಸುಳ್ಳು ಆರೋಪಗಳನ್ನು ಮಾಡುತ್ತಾ ಬಂದಿರುವುದರಿಂದ ಅವರು ವಿಶ್ವದ ಮಹಾ ಸುಳ್ಳುಗಾರನಾಗಿದ್ದಾರೆ ಎಂದು ಬಗ್ಗಾ ಹೇಳಿದ್ದಾರೆ.
ಬಗ್ಗಾ ಅವರು ಸಾರ್ವಜನಿಕರಿಗೆ ಈ ಮಹಾ ಸುಳ್ಳುಗಾರ ಪ್ರಶಸ್ತಿಗಾಗಿ ತಮ್ಮ ಮಹಾ ಸುಳ್ಳಿನ ಪುರಾವೆಯೊಂದಿಗೆ 9115929292 ವಾಟ್ಸಾಪ್ ನಂಬರ್‌ಗೆ ಅರ್ಜಿಯನ್ನು ಗುಜರಾಯಿಸಿ ತಮ್ಮ ಹೆಸರು ಮತ್ತು ಸ್ಥಳವನ್ನು ತಿಳಿಸುವಂತೆ ಕೋರಿದ್ದಾರೆ.
ಅತೀ ದೊಡ್ಡ ಸುಳ್ಳುಗಾರನೆಂದು ಪರಿಗಣಿಸಲ್ಪಡುವ ವ್ಯಕ್ತಿಗೆ 5,100 ರೂ. ನಗದು ಬಹುಮಾನದೊಂದಿಗೆ ಕೇಜ್ರಿವಾಲ್ ಮಹಾ ಸುಳ್ಳುಗಾರ ಪ್ರಶಸ್ತಿಯನ್ನು ನೀಡಲಾಗುವುದೆಂದು ಬಗ್ಗಾ ತಿಳಿಸಿದ್ದಾರೆ.
ಕೇಜ್ರಿವಾಲ್ ನೀಡಿದ್ದ ಹಲವು ಭರವಸೆಗಳಲ್ಲಿ ಕೆಲವು ಹೀಗಿವೆ : ಉಚಿತ ವೈಫೈ ಒದಗಣೆ, ಡಿಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ವಿಶೇಷ ರಕ್ಷಣೆ, 500 ಹೊಸ ಶಾಲೆಗಳ ಸ್ಥಾಪನೆ ಮತ್ತು ದಿಲ್ಲಿಯಲ್ಲಿ ಕನಿಷ್ಠ 20 ಕಾಲೇಜುಗಳ ಆರಂಭ. ಕೇಜ್ರಿವಾಲ್ ಇವುಗಳಲ್ಲಿ ಯಾವ ಭರವಸೆಯನ್ನೂ ಈ ತನಕ ಈಡೇರಿಸಿಲ್ಲ ಎಂದು ಬಗ್ಗಾ ಹೇಳಿದರು.