ನವದೆಹಲಿ: ಫೆಬ್ರವರಿ 8ಕ್ಕೆ ವಿಧಾನ ಸಭಾ ಚುನಾವಣೆಯ ದಿನ ಸಮೀಪಿಸುತ್ತಿರುವಂತೆ ಕಣದಲ್ಲಿರುವ ಅಭ್ಯರ್ಥಿಗಳ ಪ್ರಚಾರದ ಅಬ್ಬರ ಜೋರಾಗಿದೆ.
ಇನ್ನೊಂದೆಡೆ ಮತದಾರರಿಗೆ ಆಮಿಷ ಒಡ್ಡುವ ಕೆಲಸವೂ ತೆರೆಮರೆಯಲ್ಲಿ ಭರ್ಜರಿಯಾಗಿಯೇ ನಡೆಯುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿಚಕ್ಷಣಾ ದಳದ ಅಧಿಕಾರಿಗಳು ವಿವಿಧ ಕಡೆ ನಡೆಸಿರುವ ದಾಳಿಯಲ್ಲಿ ಅಪಾರ ಪ್ರಮಾಣದ ನಗದು, ಮದ್ಯ, ಮಾದಕ ದ್ರವ್ಯಗಳು, ಬೆಲೆ ಬಾಳುವ ಒಡವೆಗಳು, ಉಚಿತವಾಗಿ ವಿತರಿಸಲು ತಂದಿರಿಸಿದ್ದ ಲ್ಯಾಪ್ ಟಾಪ್, ಕುಕ್ಕರ್ ಮತ್ತು ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವೆಲ್ಲದರ ಒಟ್ಟು ಮೊತ್ತ 38.64 ಕೋಟಿ ರೂಪಾಯಗಳಷ್ಟಿದೆ ಎಂದು ಚುನಾವಣಾ ಆಯೋಗ ಇಂದು ತಿಳಿಸಿದೆ.
ಇದರಲ್ಲಿ 7.39 ಕೋಟಿ ರೂಪಾಯಿಗಳ ನಗದು, 24.74 ಕೋಟಿ ರೂಪಾಯಿಗಳ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಸೇರಿವೆ. ಇನ್ನು 390 ಎಫ್.ಐ.ಆರ್. ಹಾಗೂ 12 ನಿತ್ಯ ಡೈರಿ ಎಂಟ್ರಿ ಸಹಿತ 402 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.