Advertisement

ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಸಿಎಂ ಬಳಿ ನಿಯೋಗ

06:37 PM Feb 24, 2021 | Team Udayavani |

ಬೀದರ: ಜಿಲ್ಲೆಯ ಅತಿ ದೊಡ್ಡ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಉಳಿಯಬೇಕು ಎಂಬುದು ಜಿಲ್ಲೆಯ ಶಾಸಕರ ಸೇರಿ ಎಲ್ಲರ ಆಶಯವೂ ಆಗಿದೆ. ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಚರ್ಚಿಸಲು, ಎಲ್ಲ ಶಾಸಕರು ಸೇರಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೋಯೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಹೇಳಿದರು.

Advertisement

ನಗರದ ಜಿ.ಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ರೆçಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ರೈತರ ಜೀವನಾಡಿ ಬಿಎಸ್‌ಎಸ್ಕೆ ಪುನಾರಂಭಕ್ಕೆ ಮೊದಲು ಒತ್ತು ಕೊಡಬೇಕು. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು.

ಆರ್ಥಿಕ ಸಂಕಷ್ಟ ಇದ್ದರೂ ರೈತರ ಹಿತ ಕಾಪಾಡುವ ಮೂಲಕ ವಿಶ್ವಾಸ ಉಳಿಸಿಕೊಳ್ಳಬೇಕು. ಸಹಕಾರ, ಇನ್ನಿತರ ಇಲಾಖೆಗೆ ಡಿಸಿ ಅಗತ್ಯ ಪ್ರಸ್ತಾವನೆ
ಕಳುಹಿಸಲಿ ಎಂದು ಶಾಸಕರಾದ ರಾಜಶೇಖರ ಪಾಟೀಲ, ಈಶ್ವರ ಖಂಡ್ರೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಜೆಟ್‌ನಲ್ಲಿ ಕಾರ್ಖಾನೆ
ಪುನಶ್ಚೇತನಕ್ಕಾಗಿ ಪೂರಕ ಅನುದಾನಕ್ಕಾಗಿ ಸಿಎಂಗೆ ಪ್ರಸ್ತಾವನೆ ಸಲ್ಲಿಸೋಣ ಎಂದರು.

ಪುನಶ್ಚೇತನಕ್ಕೆ ಹೆಚ್ಚಿನ ಹಣ ಬೇಕು: ಡಿಸಿ
ರಾಮಚಂದ್ರನ್‌ ಆರ್‌. ಮಾತನಾಡಿ, ಕಾರ್ಖಾನೆಯು ಬಹಳಷ್ಟು ದುರಸ್ತಿಯಾಗಬೇಕಿದೆ. ಕಬ್ಬು ಪೂರೈಸಿದ ರೈತರಿಗೆ ಹಣ, ಕಾರ್ಮಿಕರಿಗೆ ವೇತನ ಪಾವತಿ ಬಾಕಿ ಇದ್ದು, ಇದಕ್ಕಾಗಿ 18.30 ಕೋಟಿ ರೂ. ಬೇಕಾಗುತ್ತದೆ. ಆದರೆ, ಈಗ ಕಾರ್ಖಾನೆಯಲ್ಲಿನ ಸಕ್ಕರೆ ಮಾರಾಟದಿಂದ 94 ಲಕ್ಷ ರೂ. ಬರಬಹುದು ಎಂದು ಅಂದಾಜಿಸಲಾಗಿದೆ.

ಕಾರ್ಮಿಕರ ವೇತನ ಬಾಕಿ, ರೈತರಿಗೆ ಹಣ ಕೊಡುವುದು ಮತ್ತು ಇನ್ನೀತರ ಖರ್ಚು ಭರಿಸಲು ಸಕ್ಕರೆ ಮಾರಾಟಕ್ಕೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಾರ್ಖಾನೆಯನ್ನು ಪುನಃ ಆರಂಭಿಸಲು ಬಹಳಷ್ಟು  ಹಣ ಬೇಕಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.

Advertisement

ಸಕ್ಕರೆ ಮಾರಾಟ ಬಳಿಕ ಮೊದಲು ರೈತರಿಗೆ ಹಣ ನೀಡಿ, ಬಳಿಕ ಕಾರ್ಮಿಕರ ವೇತನ ಪಾವತಿಸಿ, ನಂತರ ಬೇರೆಯವರಿಗೆ ಹಣ ನೀಡಲು ಚರ್ಚೆಯಾದ ಬಗ್ಗೆ
ಈ ಸಭೆಯಲ್ಲಿ ಸಭಾ ನಡಾವಳಿ ಮಾಡಿ ಅದರಂತೆ ಹಣ ಪಾವತಿಗೆ ಕ್ರಮ ವಹಿಸಬೇಕು ಎಂದು ಶಾಸಕ ಈಶ್ವರ ಖಂಡ್ರೆ ಅವರು ಸಲಹೆ ಮಾಡಿದರು.

ಬಿಎಸ್ಸೆಸ್ಸೆಕೆ ಚುನಾವಣೆ ರದ್ದಾಗಲಿ: ಕಾರ್ಖಾನೆಯಲ್ಲಿ ಬಹಳಷ್ಟು ಸಮಸ್ಯೆಗಳಿದ್ದರೂ, ಕಾರ್ಖಾನೆಯ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆಯ
ಚುನಾವಣೆ ನಿಗದಿಯಾಗಿರುವುದು ಸಮಂಜಸವಲ್ಲ ಎಂದು ಎಂಎಲ್‌ಸಿ ಅರವಿಂದ ಅರಳಿ ಹೇಳಿದರು. ಬಿಎಸ್‌ಎಸ್ಕೆಗೆ ಈ ಸಂದರ್ಭದಲ್ಲಿ ಚುನಾವಣೆ ಮಾಡಬಾರದು ಎಂದು ಎಲ್ಲರೂ ಸೇರಿ ಒಕ್ಕೋರಲಿನ ತೀರ್ಮಾನ ತೆಗೆದುಕಳ್ಳೋಣ ಎಂದು ಎಂಎಲ್‌ಸಿ ರಘುನಾಥ್ರಾವ್‌ ಮಲ್ಕಾಪುರೆ ಅವರು ಸಭೆಯಲ್ಲಿ ಮಂಡಿಸಿದ ಪ್ರಸ್ತಾಪಕ್ಕೆ ಸಭೆಯಲ್ಲಿದ್ದ ಎಲ್ಲ ಶಾಸಕರು ಬೆಂಬಲಿಸಿದರು. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು ಎಂದು ಡಿಸಿ ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಶಾಸಕ ರಹೀಮ್‌ ಖಾನ್‌, ಎಂಎಲ್‌ಸಿ ಡಾ| ಚಂದ್ರಶೇಖರ ಪಾಟೀಲ, ಬುಡಾ ಅಧ್ಯಕ್ಷ ಬಾಬು ವಾಲಿ, ಕೆಎಸ್‌ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಸಿಇಒ ಜಹೀರಾ ನಸಿಮ್‌, ಎಸ್‌ಪಿ ನಾಗೇಶ ಡಿ.ಎಲ್‌ ಇನ್ನಿತರ ಅಧಿಕಾರಿಗಳು ಇದ್ದರು.

ಕೊರತೆ ಹಣ ಸರ್ಕಾರ ಕೊಡಲಿ?
ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಎಲ್ಲ ಶಾಸಕರು ಮತ್ತು ಸಕ್ಕರೆ ಕಾರ್ಖಾಣೆಗಳ ಮುಖ್ಯಸ್ಥರೊಂದಿಗೆ ನಡೆದ ಸಭೆಯಲ್ಲಿ ನಿಗದಿಯಂತೆ ಕಾರ್ಖಾನೆಗಳು ಟನ್‌ ಕಬ್ಬಿಗೆ 2400 ರೂ. ಪಾವತಿಸಬೇಕು. ನಿರ್ಣಯದಂತೆ ನಡೆದುಕೊಳ್ಳದ ಕಾರ್ಖಾನೆಗಳ ಮೇಲೆ ಕ್ರಮ ವಹಿಸಿ, ಕೊರತೆಯ ಹಣವನ್ನು ಸರ್ಕಾರವೇ ಕೊಡಬೇಕು ಎಂದು ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದರು. ಈ ಹಿಂದೆ ನಡೆದ ಸಭೆಯಲ್ಲಿ ಪ್ರತಿ ಟನ್‌ ಕಬ್ಬಿಗೆ ರೈತರಿಗೆ ಪಾವತಿಸಲು 2,400 ರೂ ಬೆಲೆ ನಿಗದಿ ಮಾಡಿರುವುದು ಉತ್ತಮ ನಿರ್ಧಾರ. ಆದರೆ, ಕಾರ್ಖಾನೆಗಳು ಇದನ್ನು ಪಾಲಿಸುತ್ತಿಲ್ಲ. ಹಿಂದೆ 2014-15ರ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೊರತೆ ಹಣವನ್ನು ಪಾವತಿಸಿ ರೈತ ಹಿತ ಕಾಪಾಡಿತ್ತು ಎಂದು ಖಂಡ್ರೆ ಹೇಳಿದರು.

ಕಾರಂಜಾ ಹಿನ್ನೀರು ಸಂಕಷ್ಟ ಪರಿಹರಿಸಿ
ಕಾರಂಜಾ ಜಲಾಶಯದಲ್ಲಿ ಬಾಗಿನ ಅರ್ಪಿಸಿದರೇ ಸಾಲದು, ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ತರ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಶಾಸಕ ರಾಜಶೇಖರ ಪಾಟೀಲ ಅವರು ಸಚಿವ ಪ್ರಭು ಚವ್ಹಾಣ ವಿರುದ್ಧ ಗರಂ ಆದ ಘಟನೆ ಕೆಡಿಪಿ ಸಭೆಯಲ್ಲಿ ನಡೆಯಿತು. ಕಾರಂಜಾ ಹಿನ್ನೀರಿನಿಂದ ಹಲವು ಗ್ರಾಮಗಳ ಮನೆಗೆ ನೀರು ನುಗ್ಗುತ್ತಿದ್ದು, ಅಪಾರ ಬೆಳೆ ಹಾನಿ ಸಂಭವಿಸಿದೆ. ಭೂ ಸ್ವಾಧೀನದ ಮೂಲಕ ಸಂತ್ರಸ್ತರಿಗೆ ಆಗುತ್ತಿರುವ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ, ದ್ರೋಣ ಸರ್ವೇ ವರದಿಯಂತೆ ಭೂಸ್ವಾಧೀನ ಮಾಡಿಕೊಳ್ಳಲು ಮತ್ತು ಇದಕ್ಕೆ ಬೇಕಾಗುವ ಅನುದಾನ ಕುರಿತು ಸಭೆ ತೀರ್ಮಾನಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು ಅಗತ್ಯವಿದೆ. ಪುನರ್ವಸತಿ ಸೌಕರ್ಯ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಪ್ರಕ್ರಿಯೆ ನಡೆಸುತ್ತೇನೆ ಎಂದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next