Advertisement

ಬಾಕಿ 5 ಕಿ.ಮೀ. ರಸ್ತೆ ಅಭಿವೃದ್ಧಿಗೆ ಮೀನಮೇಷ 

11:53 AM Nov 17, 2018 | |

ವಿಟ್ಲ: ವಿಟ್ಲದಿಂದ ವಿಟ್ಲ ಮುಟ್ನೂರು ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಕಳೆದ 20 ವರ್ಷ ಗಳಿಂದ ಅಭಿವೃದ್ಧಿ ಕಾಣದೇ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ. ಪಕ್ಷ ಭೇದವಿಲ್ಲದೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿಯೆಂದು ಇಲ್ಲಿನ ಜನತೆ ದೂರುತ್ತಿದೆ. 9 ಕಿ.ಮೀ. ದೂರದ ಈ ರಸ್ತೆಯು ಎರಡೂ ಕಡೆಗಳಿಂದ 2 ಕಿ.ಮೀ. ದೂರ ಅಭಿವೃದ್ಧಿ ಹೊಂದಿದ್ದು, ಮಧ್ಯೆ 5 ಕಿ.ಮೀ. ದೂರ ಶೋಚನೀಯ ಸ್ಥಿತಿಯಲ್ಲಿದೆ. ಇಲ್ಲಿನ ವಾಹನ ಚಾಲಕ, ಮಾಲಕರು ಹಾಗೂ ನಾಗರಿಕರು ಇನ್ನೂ ಎಷ್ಟು ಕಾಲ ಸಂಕಷ್ಟ ಅನುಭವಿಸಬೇಕು ಎಂದು ಪ್ರಶ್ನಿಸುತ್ತಿದ್ದಾರೆ.

Advertisement

4 ಕಿ.ಮೀ. ಅಭಿವೃದ್ಧಿ
ಶಕುಂತಳಾ ಶೆಟ್ಟಿ ಅವರು ಶಾಸಕಿ ಆಗಿದ್ದಾಗ, ಕೊನೆಯ ಅವಧಿಯಲ್ಲಿ ಈ ರಸ್ತೆಗೆ 2.20 ಕೋ. ರೂ. ಅನುದಾನ ಬಂದಿತ್ತು. ಚುನಾವಣೆಗೂ ಮುನ್ನ ಶಿಲಾನ್ಯಾಸ ನಡೆದು ಕಾಮಗಾರಿಯೂ ಆರಂಭವಾಗಿತ್ತು. ಈ ಅನುದಾನದಲ್ಲಿ ಬದನಾಜೆ- ಮರುವಾಳ ವರೆಗೆ ಸುಮಾರು 2 ಕಿ.ಮೀ. ದೂರ ರಸ್ತೆ ಅಭಿವೃದ್ಧಿಯಾಗಿದೆ. ಅದೇ ರೀತಿ ಪರಿಯಾಲ್ತಡ್ಕದಿಂದ ನಾಟೆಕಲ್ಲು ವರೆಗೆ 2 ಕಿ.ಮೀ. ದೂರ ರಸ್ತೆ ಅಭಿವೃದ್ಧಿಯಾಗಿದೆ. ಮರು ವಾಳದಿಂದ ನಾಟೆಕಲ್ಲು ವರೆಗಿನ 5 ಕಿ.ಮೀ. ದೂರದ ರಸ್ತೆ ಹಿಂದಿನ ಸ್ಥಿತಿಯಲ್ಲೇ ಇದ್ದು, ಹೊಂಡಗಳು ತುಂಬಿವೆ. ಕೆಲವು ಕಡೆಗಳಲ್ಲಿ ರಸ್ತೆಯೇ ಮಾಯವಾಗಿದೆ. ಕೆಲವು ಕಡೆಗಳಲ್ಲಿ ಹೊಂಡ ತಪ್ಪಿಸುತ್ತ ಸಾಗುವ ವಾಹನಗಳು ಪರ್ಯಾಯ ಮಣ್ಣಿನ ರಸ್ತೆಯನ್ನೇ ನಿರ್ಮಾಣ ಮಾಡಿವೆ.

2 ತಾ|ಗಳ ಸಂಪರ್ಕ ರಸ್ತೆ
ಈ ರಸ್ತೆ ಬಂಟ್ವಾಳ, ಪುತ್ತೂರು ತಾ| ಗಳನ್ನು ಸಂಪರ್ಕಿಸುತ್ತದೆ. ವಿಟ್ಲಕಸಬಾ, ವಿಟ್ಲಮುಟ್ನೂರು, ಕುಳ, ಪುಣಚ, ಕೇಪು ಗ್ರಾಮ ಸಂಪರ್ಕಿಸುವ ಪ್ರಮುಖ ರಸ್ತೆ.

ಪ್ರತಿಭಟನೆ ನಡೆದಿತ್ತು
ಈ ರಸ್ತೆಯಲ್ಲಿ ಸಂಚರಿಸಲಾಗದೇ ವಾಹನ ಚಾಲಕ, ಮಾಲಕರು, ನಾಗರಿಕರು ಸೇರಿ ಕೆಲವು ಬಾರಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಸ್‌ ಸಂಚಾರ ಸ್ಥಗಿತ ಗೊಳಿಸಿ ಪ್ರತಿಭಟನೆ ನಡೆಸಲಾಗಿತ್ತು. ಮಾಲಕರು ಬಸ್‌ ಸಂಚಾರ ನಿಲ್ಲಿಸಿದ್ದರು. ಶ್ರಮದಾನ ಮೂಲಕ ತಾತ್ಕಾಲಿಕವಾಗಿ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿಸಿದರು. ಪ್ರಧಾನಿ ಮೋದಿಗೆ ಪತ್ರ ಬರೆದರು. ಅವರು ಉತ್ತರಿಸಿ, ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಆದೇಶಿಸಿದ್ದರು.

ಸಂಸದರ 10 ಕೋಟಿ ರೂ.
ವಿಧಾನಸಭೆ ಚುನಾವಣೆ ಘೋಷಣೆಯ ಕೆಲವೇ ದಿನಗಳ ಮುನ್ನ ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಈ ರಸ್ತೆಯ ಸಮಗ್ರ ಅಭಿವೃದ್ಧಿಗೆ 10 ಕೋಟಿ ರೂ. ಮಂಜೂರಾಗಿದೆ ಎಂದು ಬಿಜೆಪಿ ಮುಖಂಡರಿಗೆ ತಿಳಿಸಿದರು. ಆ ಹೇಳಿಕೆ ಪತ್ರಿಕೆಯಲ್ಲಿ ಪ್ರಕಟವಾಯಿತು. ಆದರೆ ಅನುದಾನ ಇನ್ನೂ ಬಂದಿಲ್ಲ. ಇಲಾಖಾಧಿಕಾರಿಗಳನ್ನು ವಿಚಾರಿಸಿದಾಗ ಇನ್ನೂ ಯಾವುದೇ ಅನುದಾನ ಬಂದ ಹಾಗಿಲ್ಲ ಎಂಬ ಉತ್ತರ ಸಿಗುತ್ತಿದೆ. 

Advertisement

ದೇಗುಲ ಬ್ರಹ್ಮಕಲಶ
2019ರ ಫೆಬ್ರವರಿ ತಿಂಗಳಲ್ಲಿ ಈ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶ ನಡೆಯಲಿದೆ. ಸುಮಾರು 2 ಲಕ್ಷ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಸಾವಿರಾರು ವಾಹನಗಳು ಓಡಾಡುವ ಸಾಧ್ಯತೆಯಿದೆ. ಆದುದರಿಂದ ಬ್ರಹ್ಮಕಲಶ ಸಂಭ್ರಮಕ್ಕೂ ಮುನ್ನ ಗ್ರಾಮದ ರಸ್ತೆಗಳು ಸುಸಜ್ಜಿತಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಶಯ.

ರೇವಣ್ಣಗೆ ಪತ್ರ
ಸಂಸದ ಕಟೀಲು ಅವರು ಪಿಡಬ್ಲ್ಯುಡಿ ಸಚಿವ ಎಚ್‌.ಡಿ. ರೇವಣ್ಣ ಅವರಿಗೆ ಪತ್ರ ಬರೆದು ರಾ.ಹೆ. ಇಲಾಖೆಯ ಮಂಗಳೂರು ಉಪ ವಿಭಾಗದಲ್ಲಿ ದ.ಕ. ಜಿಲ್ಲೆಗೆ ಕೇಂದ್ರ ರಸ್ತೆ ನಿಧಿಯಡಿಯಲ್ಲಿ 4 ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗಿಲ್ಲ. ಕ್ರಮ ಕೈಗೊಳ್ಳ ಬೇಕಾಗಿ ಕೋರುತ್ತೇನೆಂದು ಪತ್ರ ಬರೆದಿದ್ದಾರೆ. ಈ ರಸ್ತೆ ಅನುದಾನವೂ ಟೆಂಡರ್‌ ಹಂತದಲ್ಲಿದೆ ಎನ್ನಲಾಗುತ್ತಿದೆ. 

ಅನುದಾನ ಬಂದಿಲ್ಲ
ಬದನಾಜೆ-ಕುಂಡಡ್ಕ-ಪರಿಯಾಲ್ತಡ್ಕ ರಸ್ತೆ ಅಭಿವೃದ್ಧಿಗೆ ಸಿಆರ್‌ಎಫ್‌ ಫ‌ಂಡಿನಿಂದ ಈ ತನಕ ಯಾವುದೇ ಅನುದಾನ ಬಂದಿಲ್ಲ. ಇದಕ್ಕಿಂತ ಹಿಂದಿನ ಅನುದಾನಗಳೇ ಬಂದಿಲ್ಲ. ಟೆಂಡರ್‌ ಹಂತಕ್ಕೆ ತಲುಪಿರುವುದು ನನಗೆ ಗೊತ್ತಿಲ್ಲ.
ಸುಬ್ಬರಾಮ ಹೊಳ್ಳ,
  ಕಾರ್ಯನಿರ್ವಾಹಕ ಅಭಿಯಂತರು, ರಾ.ಹೆ. ಮಂಗಳೂರು

ಶೀಘ್ರ ನಿರೀಕ್ಷೆ
4 ಕಿ.ಮೀ. ರಸ್ತೆಗೆ ಅವಶ್ಯವಿರುವ ಅನುದಾನ ಜಿ.ಪಂ.ನಲ್ಲಿ ಕಷ್ಟಸಾಧ್ಯ. ಆದರೆ ಆ ರಸ್ತೆ ಅಭಿವೃದ್ಧಿಯನ್ನು ಪೂರ್ಣಗೊಳಿಸಬೇಕೆಂದು ಶಾಸಕರಿಗೆ, ಸಂಸದರಿಗೆ ಮನವಿ ಮಾಡಿದ್ದೇವೆ. ಇನ್ನೂ ಮಾಡುತ್ತೇವೆ. ಅವರು ಈ ಬಗ್ಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಶೀಘ್ರದಲ್ಲಿ ಆ ಕಾಮಗಾರಿ ಪೂರೈಸಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ.
– ಜಯಶ್ರೀ ಕೋಡಂದೂರು
ಜಿ.ಪಂ. ಸದಸ್ಯೆ

 ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next