ಔರಾದ: ಮಹಾರಾಷ್ಟ್ರದ ದೇಗಲೂರ ವಿಧಾನಸಭೆ ಉಪ ಚುನಾವಣೆ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಗುರುವಾರ ದೇಗಲೂರಿಗೆ ತೆರಳಿ, ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಪ್ರಚಾರ ನಡೆಸಿದರು.
ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರ ಕರೆಯ ಮೇರೆಗೆ ಮತ್ತು ಕಾರ್ಯಕರ್ತರ ಒತ್ತಾಸೆಯಂತೆ ನಾಂದೇಡ ಜಿಲ್ಲೆಯ ಸಂಸದ ಪ್ರತಾಪರಾವ ಪಾಟೀಲ ಚಿಕ್ಲಿಕರ್, ಮುಖೇಡ ಶಾಸಕ ತುಷಾರ ಗೋವಿಂದ ರಾಠೊಡ್, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟರಾವ ಪಾಟೀಲ ಮತ್ತು ಪಕ್ಷದ ಅಭ್ಯರ್ಥಿ ಸುಭಾಷ ಸಾಬನೆ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಶತಾಯಗತಾಯ ಗೆಲ್ಲಿಸುವ ನಿಟ್ಟಿನಲ್ಲಿ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
ಔರಾದ ತಾಲೂಕಿಗೆ ಹತ್ತಿರದಲ್ಲಿರುವ ಹಣೆಗಾಂವ್ ಹಾಗೂ ಮರಖೇಲ್ ಮಹಾಶಕ್ತಿ ಕೇಂದ್ರಗಳಲ್ಲಿ ಸಚಿವರ ಪ್ರಭಾವ ಇದೆ. ಈ ಮುಂಚೆ ಉದಗೀರ್, ಮುಖೇಡ್‌ನಲ್ಲಿ ಪ್ರಭಾರಿಯಾಗಿ ಕೆಲಸ ನಿರ್ವಹಿಸಿದ ಅನುಭವವಿದೆ. ಈ ಭಾಗದ ಜನರ ಸಮಸ್ಯೆಗಳನ್ನು ಅರಿತಿದ್ದಾರೆ. ಹಾಗಾಗಿ ಸಚಿವರನ್ನು ಮಹಾರಾಷ್ಟ್ರ ನಾಯಕರು ಕರೆಸಿದ್ದರಿಂದ ಸಿಂದಗಿ ಉಪಚುನಾವಣೆ ಪ್ರಚಾರ ಬಿಟ್ಟು ಮಹಾರಾಷ್ಟ್ರ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಈ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಿನ ಸಮ್ಮಿಶ್ರ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲಗೊಂಡಿದೆ.
ಈ ಸರ್ಕಾರದ ದುರಾಡಳಿತ ಹಾಗೂ ಹಿಂದೆ ಬಿಜೆಪಿ ನೇತೃತ್ವದ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳು ಬಿಜೆಪಿಗೆ ವರದಾನವಾಗಿ ಪರಿಣಮಿಸಲಿವೆ. ಕ್ಷೇತ್ರದಲ್ಲಿ ಬಿಜೆಪಿ ಬಗ್ಗೆ ಜನರಲ್ಲಿ ಸಕಾರಾತ್ಮಕ ಭಾವನೆಯಿದೆ. ಹಾಗೆಯೇ ಅಭಿವೃದ್ಧಿ ಪರ ಚಿಂತನೆಯುಳ್ಳ ಸುಭಾಷ ಸಾಬನೆ ಅವರನ್ನು ಪಕ್ಷವು ಅಭ್ಯರ್ಥಿಯನ್ನಾಗಿ ಮಾಡಿರುವುದರಿಂದ ಬಿಜೆಪಿ ಅಭ್ಯರ್ಥಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವಸಂತ ವಕೀಲ್, ದೋಂಡಿಬಾ ನರೋಟೆ, ಕೇರಬಾ ಪವಾರ, ಸಂಜೀವ ವಡೆಯರ್, ಶಿವಕುಮಾರ ಪಾಂಚಾಳೆ, ಮಹಾದೇವ ತರನಳ್ಳೆ ಇತರರಿದ್ದರು.