Advertisement

ಕಾಡಂಚಿನ ರೈತರ ಅರಣ್ಯರೋದನ; ಬೇರೆಯವರ ಜಮೀನಿನಲ್ಲಿ ದುಡಿಯಬೇಕಾದ ಸ್ಥಿತಿ

05:34 PM Nov 15, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ತಾಲೂಕಿನಲ್ಲಿ ಹರಡಿಕೊಂಡಿರುವ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿ ಹಲಗಲಿ ಗ್ರಾಮಸ್ಥರ ಜಮೀನುಗಳಿದ್ದು, ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಲು ಅರಣ್ಯಾಧಿ ಕಾರಿಗಳು ಸ್ವಾತಂತ್ರ್ಯ ನೀಡುತ್ತಿಲ್ಲ. ಇದರಿಂದ ರೈತರು ಬೇಸತ್ತಿದ್ದು ನಮಗೆ ಪರ್ಯಾಯ ವ್ಯವಸ್ಥೆಯಾದರೂ ಮಾಡಿಕೊಡಿ ಎಂದು ಇಲಾಖೆ ಬಾಗಿಲು ಬಡಿದರೂ ಪ್ರಯೋಜನವಾಗುತ್ತಿಲ್ಲ. ಸ್ವಂತ ಜಮೀನಿನಲ್ಲಿ ಕೃಷಿ ಮಾಡಲು ಸಾಧ್ಯವಾಗದೆ ಬೇರೆಯವರ ಜಮೀನಿಗೆ ದುಡಿಯಲು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಅರಣ್ಯ ಮಧ್ಯದಲ್ಲಿರುವ ಜಮೀನು:
ಮುಧೋಳ ತಾಲೂಕಿನ ಕಿಶೋರಿ, ಮೆಳ್ಳಿಗೇರಿ, ಹಲಗಲಿ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿ ನೂರಾರು ಎಕರೆ ರೈತರ ಜಮೀನುಗಳಿವೆ. ಆದರೆ ಅರಣ್ಯ ಸೂಕ್ಷ್ಮ ಪ್ರದೇಶ ಆಗಿದ್ದರಿಂದ ಸಾರ್ವಜನಿಕರಿಗೆ ಸ್ವೇಚ್ಛಾಚಾರ ಪ್ರವೇಶ ನಿಷೇಧಿ ಸಲಾಗಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಲು, ಉತ್ತಲು ಬಿತ್ತಲು ಮಾಡಲು ಹಲವಾರು ತೊಂದರೆ ಉಂಟಾಗುತ್ತಿವೆ. ಗ್ರಾಮದಿಂದ ಜಮೀನು ಎರಡೂ¾ರು ಕಿ.ಮೀ ದೂರವಿದ್ದರೆ ಅಲ್ಲಿಗೆ ವಾಹನ ತೆಗೆದುಕೊಂಡೇ ಹೋಗಬೇಕು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ವಾಹನ ಸಂಚಾರಕ್ಕೆ ಹತ್ತಾರು ಷರತ್ತು ವಿಧಿಸುತ್ತಾರೆ. ಇದರಿಂದ ಕೃಷಿ ಕಾರ್ಯಕ್ಕೆ ಹೆಚ್ಚಿನ ತೊಂದರೆ ಉುಂಟಾಗುತ್ತದೆ ಎನ್ನುತ್ತಾರೆ ರೈತರು.

ಕಾಡುಪ್ರಾಣಿಗಳ ಹಾವಳಿ:ಅರಣ್ಯ ಇಲಾಖೆ ಎಲ್ಲ ಷರತ್ತಿಗೂ ಒಗ್ಗಿಕೊಂಡು ಹಲವು ರೈತರು ಬಿತ್ತನೆ ಮಾಡಿದರೂ ಬೆಳೆ ರೈತರ ಕೈ ಸೇರುವ ನಿಶ್ಚಿತತೆ ಇಲ್ಲದಂತಾಗಿದೆ. ನಿತ್ಯ ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಯಾಗುತ್ತಿದ್ದು ರೈತರು ಪ್ರತಿ ವರ್ಷ ನಷ್ಟ
ಅನುಭವಿಸುವಂತಾಗಿದೆ.

ಮನವಿಗೆ ಸ್ಪಂದಿಸದ ಇಲಾಖೆ:ಅರಣ್ಯ ಮಧ್ಯಭಾಗದಲ್ಲಿರುವ ಜಮೀನಿನಲ್ಲಿ ಕೃಷಿ ಕಾರ್ಯ ಕಷ್ಟಸಾಧ್ಯ ಎಂಬುದನ್ನರಿತ ರೈತರು ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ, ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅರ್ಜಿ ಪಡೆದ ರೈತರು ಇದುವರೆಗೆ ನಮ್ಮ ಕಷ್ಟ ಆಲಿಸಲು ಬಂದಿಲ್ಲ. ಅರಣ್ಯ ಇಲಾಖೆಯವರು ನಮ್ಮ ಜಮೀನು ಪಡೆದು ನಮಗೆ ಬೇರೆಡೆ ಜಮೀನು ನೀಡಿದರೆ ಕೃಷಿ ಕಾರ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.

ಬೋರ್‌ವೆಲ್‌ ಕೊರೆಯಿಸಲು ಅಡಚಣೆ: ಹಲವು ರೈತರು ಅರಣ್ಯದ ಮಧ್ಯದಲ್ಲಿರುವ ತಮ್ಮ ಜಮೀನುಗಳಲ್ಲಿ ಬೋರ್‌ವೆಲ್‌ ಕೊರೆಸಿ ನೀರಾವರಿ ಕೃಷಿ ಕೈಗೊಳ್ಳುವ ಉದ್ದೇಶದಿಂದ ಹಲವು ಬಾರಿ ಮೌಖಿಕವಾಗಿ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಜಮೀನಿನಿಂದ ಯಾವುದೇ ಪ್ರಯೋಜನವಾಗದೆ ಅರಣ್ಯ ರೋದನೆಯ ನೋವು ಅನುಭವಿಸುತ್ತಿದ್ದಾರೆ.

Advertisement

ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದ ಮಧ್ಯದಲ್ಲಿ ನಮ್ಮ ಜಮೀನಿದೆ. ನಮಗೆ ಬಿತ್ತನೆ ಮಾಡಲು ಅರಣ್ಯ ಇಲಾಖೆಯಿಂದ
ಕಿರಿಕಿರಿ ಉಂಟಾಗುತ್ತಿದೆ. ನಮ್ಮ ಜಮೀನಿನ ಬದಲಿಗೆ ಪರ್ಯಾಯ ಜಮೀನು ನೀಡಿದರೆ ಹೆಚ್ಚಿನ ಅನುಕೂಲವಾಗುತ್ತದೆ.
ಶಿವಪ್ಪ ಡೊಳ್ಳಿ, ಹಲಗಲಿಯ ಯಡಹಳ್ಳಿ

ಚೀಂಕಾರ ರಕ್ಷಿತಾರಣ್ಯದಲ್ಲಿ ಜಮೀನು ಹೊಂದಿದ ರೈತ

ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯದಲ್ಲಿ ಜಮೀನು ಹೊಂದಿರುವ ರೈತರ ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಪರ್ಯಾಯ ಮಾರ್ಗದ ಕುರಿತು ಕ್ರಮ ಕೈಗೊಳ್ಳಲಾಗುವುದು.
ರುಥೈನ್‌, .ಪಿ., ಡಿಎಫ್‌ಒ, ಬಾಗಲಕೋಟ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next