ಬೆಂಗಳೂರು: ಈದ್ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಾಣಿ ಮಾಂಸತ್ಯಾಜ್ಯ ಪ್ರಮಾಣ ಹೆಚ್ಚಾಗಿದ್ದು, ಇದರ ವಿಲೇವಾರಿ ಸರ್ಮಪಕವಾಗಿ ನಡೆಯದಿರುವುದು ಬೆಳಕಿಗೆ ಬಂದಿದೆ. ಕಳೆದ ಒಂದು ವಾರದಿಂದ ಬಿಬಿಎಂಪಿ ಈದ್ ಸಂಭ್ರಮಾಚರಣೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ಪ್ರಾಣಿ ಮಾಂಸ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ, ಮಸೀದಿಗಳಲ್ಲಿ ಸಭೆ ಸೇರಿ ಮಾಹಿತಿ ಮತ್ತು ಪ್ರಾಣಿ ಮಾಂಸ ತ್ಯಾಜ್ಯವನ್ನು ಯಾವುದೇ ಕಾರಣಕ್ಕೂ ಖಾಸಗಿ ವಾಹನದಲ್ಲಿ ಸಾಗಿಸಬಾರದು ಹಾಗೂ ತ್ಯಾಜ್ಯವನ್ನು ಬಿಬಿಎಂಪಿಗೇ ನೀಡಬೇಕು ಎಂದು ಸಾರ್ವಜನಿಕರಿಗೆ ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದರು.
ಬಿಬಿಎಂಪಿ ಇಷ್ಟೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ರಾಜಕಾಲುವೆ, ಕೆರೆ ಭಾಗಗಳಲ್ಲಿ ಮತ್ತು ಖಾಲಿ ನಿವೇಶನಗಳಲ್ಲಿ ಪ್ರಾಣಿ ಮಾಂಸ ತ್ಯಾಜ್ಯ ಎಸೆಯುವುದು ನಿಂತಿಲ್ಲ. ಮಂಗಳವಾರ ಟೌನ್‌ಹಾಲ್ ಮಾರ್ಗವಾಗಿ ಕೊಳೆತ ಪ್ರಾಣಿ ಮಾಂಸ ತ್ಯಾಜ್ಯವನ್ನು ಖಾಸಗಿ ವಾಹನದಲ್ಲಿ ಸಾಗಿಸಲಾಗಿದೆ.
200ಟನ್ ಪ್ರಾಣಿ ಮಾಂಸ ತ್ಯಾಜ್ಯ ಉತ್ಪತ್ತಿ: ಸೋಮವಾರ ನಗರದಲ್ಲಿ 200ಟನ್ ಪ್ರಾಣಿ ಮಾಂಸ ತ್ಯಾಜ್ಯ ಉತ್ಪತ್ತಿಯಾಗಿದ್ದು, ಇದನ್ನು ಕೋಗಿಲುಬಂಡೆ ಹಾಗೂ ಸಿಂಗಾಪುರದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಿ ಮಾಂಸ ತ್ಯಾಜ್ಯವನ್ನು ಖಾಸಗಿ ವಾಹನದಲ್ಲಿ ಸಾಗಿಸುವುದಕ್ಕೆ ಅವಕಾಶವಿಲ್ಲ. ಈ ರೀತಿ ಎಲ್ಲೆಂದರಲ್ಲಿ ಪ್ರಾಣಿ ಮಾಂಸ ತ್ಯಾಜ್ಯ ಎಸೆಯುವವರ ಮೇಲೆ ಒಂದು ಲಕ್ಷದವರೆಗೆ ದಂಡ ವಿಧಿಸಲಾಗುತ್ತಿದೆ. ಖಾಸಗಿ ವಾಹನದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.
-ಸರ್ಫರಾಜ್ ಖಾನ್, ಬಿಬಿಎಂಪಿ (ಘನತ್ಯಾಜ್ಯ ನಿರ್ವಹಣೆ) ಜಂಟಿ ಆಯುಕ್ತ