Advertisement
ಜಾಗತೀಕರಣವೆಂಬುದು ಪ್ರತಿನಿತ್ಯ ಕೇಳಿ ಬರುವ ಪರಿಚಿತ ಪದ. ಈ ಪ್ರಕ್ರಿಯೆ 16 ಮತ್ತು 17ನೇ ಶತಮಾನದಲ್ಲಿಯೂ ಚಲಾವಣೆಯಲ್ಲಿತ್ತು. ಆದರೆ ಅದು ಜಾಗತೀಕರಣವೆಂಬುದು ನಮಗೆ ತಿಳಿದದ್ದು ಇತ್ತೀಚೆಗಷ್ಟೇ. ಇದರ ಕುರುಹುಗಳು ಈಜಿಪ್ಟ್, ಬ್ಯಾಬಿಲೋನ್, ಗ್ರೀಕ್ ಮತ್ತು ರೋಮನ್ ನಾಗರಿಕತೆಯಲ್ಲಿ ಕಂಡುಬರುತ್ತವೆ. ತದನಂತರದ ವರುಷಗಳಲ್ಲಿ ಜಾಗತೀಕರಣದ ಹೆಜ್ಜೆ ಡಚ್ಚರು, ಬ್ರಿಟಿಷರು ಭಾರತಕ್ಕೆ ವ್ಯಾಪಾರ ಮಾಡಲು ಬರುವುದರೊಂದಿಗೆ ಪ್ರಾರಂಭಗೊಂಡಿತು. ಜನರು ಒಂದು ದೇಶದಿಂದ ಮತ್ತೂಂದು ದೇಶಕ್ಕೆ ವಲಸೆ ಹೋಗುವುದು ವ್ಯಾಪಾರದ ಉದ್ದೇಶದಿಂದ. ಬ್ರಿಟಿಷರು ಭಾರತಕ್ಕೆ ಬಂದ ಮುಖ್ಯ ಉದ್ದೇಶ ಇದೇ ಆಗಿದ್ದರೂ ನಂತರ ಅವರೇ ನಮ್ಮನ್ನು ಆಳಲು ಶುರು ಮಾಡಿದರು. ವ್ಯಾಪಾರಕ್ಕಾಗಿ, ಜತೆಗೆ ಲಾಭದ ಗಳಿಕೆಗಾಗಿ ವಸ್ತುಗಳು, ಸರಕುಗಳು, ಶ್ರಮ ಮತ್ತು ಬಂಡವಾಳಗಳು ಒಂದು ರಾಷ್ಟ್ರದಿಂದ ಮತ್ತೂಂದು ರಾಷ್ಟ್ರಕ್ಕೆ ಚಲಿಸುವುದು ಮತ್ತು ವಲಸೆ ಹೋಗುವ ಪ್ರಕ್ರಿಯೆಗೆ ಜಾಗತೀಕರಣದ ರಂಗನ್ನು ನೀಡಿದ್ದು ಇತ್ತೀಚಿನ ವರುಷಗಳಲ್ಲಷ್ಟೇ. ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಆಗುಹೋಗುಗಳಿಗೆ ನಾವಿವತ್ತು ಜಾಗತೀಕರಣದ ಬಣ್ಣವನ್ನು ಹಚ್ಚುತ್ತಿದ್ದೇವಷ್ಟೇ.
Related Articles
ಇತ್ತೀಚಿನ ದಿನಗಳಲ್ಲಿ, ಅದರಲ್ಲೂ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಬೆನ್ನಲ್ಲೇ ಅಮೆರಿಕ ಸಹಿತ ಜಗತ್ತಿನ ರಾಷ್ಟ್ರಗಳು ಶ್ರಮದ – ಕಾರ್ಮಿಕರ ವಲಸೆಗೆ ಅನೇಕ ಪ್ರತಿರೋಧಗಳನ್ನು ಒಡ್ಡುತ್ತಿರುವುದು ಹೆಚ್ಚಿದೆ. ಇತ್ತೀಚೆಗೆ ಅಮೆರಿಕ, ಬ್ರಿಟನ್, ಸಿಂಗಾಪುರದಂತಹ ಮುಂದುವರಿದ ರಾಷ್ಟ್ರಗಳು ವೀಸಾ ನಿಯಮಗಳನ್ನು ಕಠಿಣಗೊಳಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಸ್ಟ್ರೇಲಿಯದಲ್ಲೂ ವೀಸಾ ನಿಯಮ ಬಿಗಿಯಾಗಿದೆ. ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರಬಲ್ಲ ವೀಸಾ ನಿಯಮಗಳನ್ನು ಅಮೆರಿಕ, ಬ್ರಿಟನ್ ಸರಕಾರಗಳು ಜಾರಿಗೊಳಿಸಿವೆ. ಈ ನಿಲುವಿನ ಉದ್ದೇಶ ತಮ್ಮ ನಾಗರಿಕರ ಹಿತಾಸಕ್ತಿಗಳನ್ನು ಸಂರಕ್ಷಿಸುವುದು. ವಲಸೆ ನೀತಿ ಕಠಿಣವಾದರೆ ಹೊರದೇಶಗಳಿಂದ ಉದ್ಯೋಗಿಗಳು ಸಿಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸ್ಥಳೀಯರ ಮೊರೆಹೋಗಬೇಕಾಗುತ್ತದೆ. “ಮೊದಲು ಅಮೆರಿಕ’, “ಮೇಡ್ ಇನ್ ಅಮೆರಿಕವನ್ನೇ ಕೊಳ್ಳಿರಿ’, “ಅಮೆರಿಕ ಬಿಟ್ಟು ತೊಲಗಿ’ ಎಂಬೆಲ್ಲ ಘೋಷಣೆಗಳ ಮರ್ಮ ದೇಶಿಗರನ್ನು ಸಂರಕ್ಷಿಸುವುದು. ವೀಸಾ ನಿಯಮವನ್ನು ಬಿಗಿಗೊಳಿಸುವ ಮೂಲಕ ಟ್ರಂಪ್ ಆಡಳಿತವು ಭಾರತೀಯ ಐಟಿ ಉದ್ಯಮಕ್ಕೆ ಭಾರೀ ಆಘಾತ ನೀಡಿದೆ. ಸಿಂಗಾಪುರವೂ ಭಾರತೀಯ ಐಟಿ ಉದ್ಯೋಗಿಗಳಿಗೆ ಕೆಲಸದ ವೀಸಾ ನಿರಾಕರಿಸಿ ಸ್ಥಳೀಯ ಉದ್ಯೋಗಿಗಳಿಗೆ ಆದ್ಯತೆ ನೀಡಬೇಕೆಂದು ಐಟಿ ಕಂಪೆನಿಗಳಿಗೆ ಸೂಚಿಸಿದೆ. ಭಾರತದ ಎಚ್‌ಸಿಎಲ್, ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಲ್ ಆಂಡ್‌ಟಿ, ಇನ್ಫೋಟೆಕ್ ಮುಂತಾದ ಐಟಿ ಕಂಪೆನಿಗಳು ಸಿಂಗಾಪುರದಲ್ಲಿ ಕಚೇರಿಗಳನ್ನು ಹೊಂದಿವೆ. ಅಲ್ಲಿನ ಹೆಚ್ಚಿನ ಉದ್ಯೋಗಿಗಳು ಭಾರತೀಯರು. ಸಿಂಗಾಪುರ ಸರಕಾರದ ನೀತಿಯಿಂದಾಗಿ ಅಲ್ಲಿನ ಭಾರತೀಯ ಐಟಿ ಕಂಪೆನಿಗಳು ತೊಂದರೆ ಅನುಭವಿಸಲಿವೆ. ಸ್ಥಳೀಯ ಉದ್ಯೋಗಿಗಳನ್ನು ನೇಮಿಸಿಕೊಂಡು ಸಿಂಗಾಪುರದಲ್ಲಿ ಉದ್ಯಮ ನಡೆಸುವುದು ಕಷ್ಟ. ಭಾರತದ ತಂತ್ರಜ್ಞರ ಗುಣಮಟ್ಟಕ್ಕೆ ಸಮನಾಗಿ ಅವರು ಕೆಲಸ ಮಾಡುವುದಿಲ್ಲ ಎಂದು ತಜ್ಞರ ಅಭಿಪ್ರಾಯ.
Advertisement
ಆದರೆ ಸ್ಥಳೀಯರಲ್ಲಿ ಅಗತ್ಯವಿರುವ ಕೌಶಲವಿಲ್ಲದಿದ್ದರೆ ಮುಂದೊಂದು ದಿನ ಮತ್ತೆ ವಿದೇಶಿ ಉದ್ಯೋಗಿಗಳ ಮೇಲಿನ ಅವಲಂಬನೆ ಅನಿವಾರ್ಯವಾಗಲಿದೆಯೇನೋ? ಕೌಶಲವಿದ್ದರೆ ಅಮೆರಿಕ ಅಲ್ಲದಿದ್ದರೆ ಬೇರೆ ದೇಶ. ಸ್ಕಿಲ್ ಇದ್ದರೆ ನೂರಾರು ದಾರಿಗಳಿವೆ. ದೇಶದೊಳಗೆ ಸ್ಥಳೀಯ ಉದ್ಯೋಗಿಗಳಿಂದ ಅಸಾಧ್ಯವಾದುದರಿಂದಲೇ ಅಲ್ಲವೇ ಅಮೆರಿಕದಂತಹ ರಾಷ್ಟ್ರಗಳ ಕಂಪೆನಿಗಳು ವಿದೇಶಿ ಉದ್ಯೋಗಿಗಳನ್ನು ಅವಲಂಬಿಸಿದ್ದು? ಈ ಸ್ಥಿತಿಯಲ್ಲಿ ಬೇರೆ ದೇಶದ ಉದ್ಯೋಗಿಗಳ ವಲಸೆಯನ್ನು ನಿರ್ಬಂಧಿಸುವುದು ಎಷ್ಟು ಸರಿ? ಇದು ಎಷ್ಟು ದಿನ ಮುಂದುವರಿಯಬಹುದು? ಒಂದೆಡೆ ಉದಾರೀಕರಣ, ಮುಕ್ತ ವ್ಯಾಪಾರ, ನಿರ್ಬಂಧವಿಲ್ಲದ ಸರಕು ಸೇವೆಯ ವಲಸೆ ಎಂದೆಲ್ಲ ಆರ್ಥಿಕ ನೀತಿಗೆ ಉತ್ತೇಜನ. ಮತ್ತೂಂದೆಡೆ ವಲಸೆಗೆ ಕಠಿಣ ನಿಯಮಾವಳಿಗಳು- ಹೀಗೆ ಜಾಗತೀಕರಣ ತದ್ವಿರುದ್ಧ ನಡೆಯನ್ನು ಕಾಣುತ್ತಿದೆ. ಅಮೆರಿಕದಂತಹ ರಾಷ್ಟ್ರಗಳು ವೀಸಾ ನಿಯಮಾವಳಿಗಳನ್ನು ಕಠಿಣಗೊಳಿಸಿದ ಬೆನ್ನಲ್ಲೇ ಭಾರತವು ಆರ್ಥಿಕತೆಯ ವೇಗ ಹೆಚ್ಚಿಸಲು ಉದ್ಯೋಗದ ನಿಮಿತ್ತ ಪಡೆಯುವ ವೀಸಾ ನೀತಿಯನ್ನು ಸರಳಗೊಳಿಸಿ ವಿದೇಶೀ ಹೂಡಿಕೆದಾರರಿಗೆ ರತ್ನಗಂಬಳಿಯ ಸ್ವಾಗತ ಕೋರಲು ಪ್ರಯತ್ನ ನಡೆಸಿದೆ. ಮುಕ್ತ ವ್ಯಾಪಾರ, ವ್ಯಾಪಾರ ವ್ಯವಹಾರ ಸರಾಗ ಅನ್ನುವುದು ಬಾಯಿಮಾತಿನಲ್ಲಿ ಮಾತ್ರ; ಅನುಸರಣೆಯಲ್ಲಿ ಸಂರಕ್ಷಣೆಯ ಆಟ. ಜಾಗತಿಕವಾಗಿ ನಮ್ಮನ್ನು ನಾವು ತೆರೆದಿರಿಸುವಾಗ ಎದುರಾಗಬಹುದಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ದೊಡ್ಡಣ್ಣ -ಸಣ್ಣಣ್ಣ ಎಂಬ ಬೇಧವಿಲ್ಲದೆ ಜಗತ್ತಿನ ರಾಷ್ಟ್ರಗಳು ಒಂದಲ್ಲೊಂದು ಉಪಾಯವನ್ನು ಹೂಡುತ್ತಲೇ ಇರುತ್ತವೆ. ಅಂಥ ತಂತ್ರಗಳ ಪಟ್ಟಿಯಲ್ಲಿ ವಿದೇಶಿಯರನ್ನು ನಿರ್ಬಂಧಿಸುವ ವಲಸೆ ನೀತಿ ಹೊಸತಷ್ಟೇ. ಅದನ್ನು ನಾವು ಮೆಟ್ಟಿ ನಿಂತರಷ್ಟೇ ಸ್ಪರ್ಧೆಯಲ್ಲಿ ಗೆಲ್ಲಬಹುದು.
ರಾಘವೇಂದ್ರ ರಾವ್, ಬೈಲ್