ಸಹರಾನ್ಪುರ (ಉ.ಪ್ರ.): ಉತ್ತರಪ್ರದೇಶದ ಸಹರಾನ್ಪುರ ಜಿಲ್ಲಾಡಳಿತ 5,400 ಸೈಕಲ್‌ಗಳನ್ನು ಹರಾಜು ಹಾಕಿ 21.2 ಲಕ್ಷ ರೂ. ಸಂಗ್ರಹಿಸಿದೆ!
ಈ ಘಟನೆಯ ಹಿನ್ನೆಲೆ ಬಹಳ ವಿಶೇಷವಾಗಿದೆ. 2020ರಲ್ಲಿ ಇಡೀ ದೇಶ ಕೊರೊನಾದಿಂದ ಕಂಗಾಲಾಗಿತ್ತು. ಆಗ ದೇಶದ ವಿವಿಧ ಭಾಗಗಳಿಗೆ ವಲಸೆ ಹೋಗಿದ್ದ ಜನರು ದಿಢೀರನೆ ತಂತಮ್ಮ ಮೂಲನೆಲೆಗಳಿಗೆ ಹೊರಟರು. ಅಂತಹದ್ದೊಂದು ಪರಿಸ್ಥಿತಿಯಲ್ಲಿ ಸಹರಾನ್‌ಪುರಕ್ಕೆ ಎಲ್ಲ ಕಡೆಗಳಿಂದ ವಲಸಿಗ ನೌಕರರು ಸೈಕಲ್‌ನಲ್ಲಿ ಬಂದರು. ಈ ಪ್ರದೇಶ ಪಂಜಾಬ್, ಉತ್ತರಾಖಂಡ, ಹಿಮಾಚಲಪ್ರದೇಶಗಳಿಗೆ ತೆರಳುವ ಕೇಂದ್ರವಾಗಿದ್ದೇ ಇದಕ್ಕೆ ಕಾರಣ.
ಇಲ್ಲಿ ಬಂದವರ ಸೈಕಲ್‌ಗಳಿಗೆ ಟೋಕನ್ ಸಂಖ್ಯೆ ನೀಡಿ, ಸರ್ಕಾರವು ನೌಕರರನ್ನು ಬಸ್‌ಗಳಲ್ಲಿ ಅವರವರ ಊರುಗಳಿಗೆ ಕಳುಹಿಸಿತು.
ಕಾಲಕ್ರಮೇಣ 14,600 ನೌಕರರು ವಾಪಸ್ ಮರಳಿ ಸೈಕಲ್‌ಗಳನ್ನು ಹಿಂಪಡೆದರು. ಉಳಿದ 5,400 ಸೈಕಲ್‌ಗಳು ಹಾಗೆಯೇ ಖಾಲಿ ಬಿದ್ದು ತುಕ್ಕು ಹಿಡಿಯುವ ಸ್ಥಿತಿ ತಲುಪಿದ್ದವು. ಆದ್ದರಿಂದಲೇ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿತು.