Advertisement

Bhimgad: ಬೆಳಗಾವಿ- ಭೀಮಗಡ ತೊರೆದು ನಾಡಿನತ್ತ ಮುಖಮಾಡಿದ ವನವಾಸಿಗಳು!

06:14 PM Jul 11, 2024 | Team Udayavani |

ಉದಯವಾಣಿ ಸಮಾಚಾರ 
ಬೆಳಗಾವಿ: ಖಾನಾಪುರ ತಾಲೂಕಿನ ಭೀಮಗಡ ಅಭಯಾರಣ್ಯದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಹತ್ತಾರು ಸಂಕಷ್ಟಗಳ ನಡುವೆ ದಶಕಗಳಿಂದ ಜೀವನ ಸಾಗಿಸುತ್ತಿದ್ದ ಅರಣ್ಯವಾಸಿಗಳನ್ನು ನಾಡಿಗೆ ಕರೆತರುವ ಕಾಲ ಸನ್ನಿಹಿತವಾಗಿದೆ. ಮಳೆಗಾಲದಲ್ಲಿ ಗೋವಾ, ಉಳಿದ ಅವಧಿಯಲ್ಲಿ ಕರುನಾಡಿನಲ್ಲಿ ನೆಲೆಸುವ ಒಟ್ಟು 13 ಹಳ್ಳಿಗಳ ಜನರನ್ನು ನಾಡಿಗೆ ಸ್ಥಳಾಂತರಿಸಿ ಪುನರ್‌ವಸತಿ ಕಲ್ಪಿಸಬೇಕು ಎಂಬ ದಶಕದ ಹಿಂದಿನ ಯೋಜನೆ ಫಲ ನೀಡುತ್ತಿದೆ.

Advertisement

ಸರ್ಕಾರದ ಪ್ಯಾಕೇಜ್‌ ಒಪ್ಪಿ ತಳೇವಾಡಿ ಗ್ರಾಮದ ಜನತೆ ನಗರಕ್ಕೆ ಸ್ಥಳಾಂತರಗೊಳ್ಳಲು ಒಪ್ಪಿಗೆ ಸೂಚಿಸಿದ್ದು, ಇನ್ನುಳಿದ 12 ಗ್ರಾಮಗಳ ಜನರ ಮನವೊಲಿಕೆ ನಡೆಯುತ್ತಿದೆ. ಈ 13 ಹಳ್ಳಿಗಳಲ್ಲಿ ತಲೆತಲಾಂತರದಿಂದ ಗ್ರಾಮಸ್ಥರು ವಾಸಿಸುತ್ತಿದ್ದಾರೆ. ಸ್ವಂತ ಮನೆ ಹಾಗೂ ಜಮೀನು ಹೊಂದಿದ್ದಾರೆ. ಸುಮಾರು 3000 ಜನಸಂಖ್ಯೆ ಇದೆ. 1,500 ಜಾನುವಾರುಗಳಿವೆ. ದಟ್ಟ ಕಾಡಿನಲ್ಲಿ ಜನ-ಜಾನುವಾರುಗಳಿಗೆ ಕಾಡುಪ್ರಾಣಿಗಳ ದಾಳಿಯ ಆತಂಕ ನಿರಂತರವಾಗಿದೆ. ನೆರೆಯ ಗೋವಾದ ಮೇಲೆ ಹೆಚ್ಚು ಅವಲಂಬನೆಯಾಗಿದ್ದಾರೆ. ಮಳೆಗಾಲದ 4 ತಿಂಗಳು ಗೋವಾದಲ್ಲೇ ಇವರ ವಾಸ.

ಪುನರ್ವಸತಿ ಯೋಜನೆ: ಇನ್ನು ಭೀಮಗಡದಲ್ಲಿ ಅಂದಾಜು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದಟ್ಟವಾದ ಅರಣ್ಯ ಪ್ರದೇಶವಿದೆ. “ಸುರಕ್ಷಿತ ವನ್ಯಧಾಮ’ ಎಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪರಿಸರಕ್ಕೆ ಹಾನಿಕರ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. ಹೀಗಾಗಿ ಶಾಲೆ, ರಸ್ತೆ, ಆಸ್ಪತ್ರೆ ಸೇರಿದಂತೆ ಯಾವುದೇ ಮೂಲಸೌಕರ್ಯ ಇಲ್ಲ. ಬೆಳೆ ಬೆಳೆದರೂ ಕಾಡು ಪ್ರಾಣಿಗಳ ಪಾಲು. ಹೀಗಾಗಿ ಹಲವು ಗ್ರಾಮಸ್ಥರು ಸ್ವ ಇಚ್ಛೆಯಿಂದ ನಾಡಿಗೆ ಬರಲು ಮುಂದಾಗಿದ್ದರು. ಇದಕ್ಕೆ ಪೂರಕವಾಗಿ ಪುನರ್ವಸತಿ ಪ್ಯಾಕೇಜ್‌ ರೂಪಿಸಬೇಕು ಎಂದು 2016ರಲ್ಲಿ ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆಗಿನ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ರಾಜ್ಯ ಸರ್ಕಾರವೂ 2015-16ರ ಬಜೆಟ್‌ದಲ್ಲಿ ಪುನರ್ವಸತಿ ಯೋಜನೆ ಪ್ರಕಟಿಸಿತ್ತು. ಭೀಮಗಡ ವ್ಯಾಪ್ತಿಯ ಗವಾಳಿ, ತಳೇವಾಡಿ,
ಕೊಂಗಳಾ, ಪಾಸ್ತೋಲಿ, ಕಳಲೆ, ಕೃಷ್ಣಾಪುರ, ಹೊಳ್ಳಾ, ದೇಗಾಂವ, ಮೆಂಡಿಲ್‌, ಚಾಮಗಾಂವ, ಹೆಮ್ಮಡಗಾ- ಪಾಳಿ, ಅಬನಾಳಿ ಹಾಗೂ ಆಮಗಾಂವ್‌ ಹಳ್ಳಿಗಳಲ್ಲಿ ಸಮೀಕ್ಷೆ ನಡೆಸಿದ್ದರು. ಆದರೆ ಸ್ಥಳಾಂತರ ಪ್ರಾರಂಭವಾಗಲಿಲ್ಲ. ಈಗ ಅರಣ್ಯ ಇಲಾಖೆ ಅಧಿಕಾರಿಗಳ ಮನವೊಲಿಕೆ ಫಲ ನೀಡಿದೆ. ತಳೇವಾಡಿ ಗ್ರಾಮದ ಜನರು ಅರಣ್ಯ ಬಿಟ್ಟು ಬರಲು ಸಿದ್ಧರಾಗಿದ್ದಾರೆ. ವಿಶೇಷವಾಗಿ ಯುವ ಸಮುದಾಯ ಸ್ಥಳಾಂತರಕ್ಕೆ ಮನಸ್ಸು ಮಾಡಿದೆ. ಪುನರ್ವಸತಿ ಯೋಜನೆಯಂತೆ 18 ವರ್ಷ ದಾಟಿದ ಪ್ರತಿಯೊಬ್ಬ ವ್ಯಕ್ತಿಗೆ ತಲಾ 18 ಲಕ್ಷ ಪರಿಹಾರ ಸಿಗಲಿದೆ.

Advertisement

ಏನಿದು ಪುನರ್‌ ವಸತಿ ಪ್ಯಾಕೇಜ್‌?
*ಖಾನಾಪುರ ತಾಲೂಕಿನ ದಟ್ಟಾರಣ್ಯದಲ್ಲಿ ವಾಸಿಸುತ್ತಿರುವ 13 ಗ್ರಾಮಗಳ ಜನರು
*3 ಸಾವಿರ ಜನ, 1500 ಜಾನುವಾರು ವಾಸ *ಮಳೆಗಾಲದ 4 ತಿಂಗಳು ಗೋವಾ, ಇನ್ನುಳಿದ 8 ತಿಂಗಳು ಕರ್ನಾಟಕದಲ್ಲಿ ವಾಸ
*ಪುನರ್‌ವಸತಿಗೆ ತಳ್ಳೇವಾಡಿ ಜನ ಒಪ್ಪಿಗೆ, ಉಳಿದ 12 ಗ್ರಾಮದವರ ಮನವೊಲಿಕೆ

ಸೌಲಭ್ಯ ಹಾಗೂ ನೆಮ್ಮದಿಯ ಜೀವನದ ದೃಷ್ಟಿಯಿಂದ ಅರಣ್ಯ ಪ್ರದೇಶ ಸುರಕ್ಷಿತವಲ್ಲ ಎಂಬುದು 13 ಹಳ್ಳಿಗಳ ಜನರಿಗೆ ಅರಿವಾಗಿದೆ. ಯುವಕರು ಸ್ಥಳಾಂತರಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ತಳೇವಾಡಿ ಗ್ರಾಮದ ಜನರು ಸಂಪೂರ್ಣ ಒಪ್ಪಿದ್ದು ಇನ್ನೂ ಐದಾರು ಹಳ್ಳಿಗಳ ಜನರೂ ಸ್ಥಳಾಂತರಕ್ಕೆ ಒಲವು ತೋರಿಸಿದ್ದಾರೆ.
●ಮಹೇಶ ಮರೆನ್ನವರ,
ಆರ್‌ಎಫ್‌ಒ, ಖಾನಾಪುರ

ಅರಣ್ಯ ಪ್ರದೇಶದ 13 ಗ್ರಾಮಗಳ ಜನರ ಸ್ಥಳಾಂತರಕ್ಕೆ ನಿರಂತರ ಪ್ರಯತ್ನ ಮಾಡುತ್ತಲೇ ಇದ್ದೇವೆ. ಈಗ ಒಂದು ಗ್ರಾಮದ ಜನರು ಕಾಡಿನಿಂದ ಹೊರಗಡೆ ಬರಲು ಒಪ್ಪಿಕೊಂಡಿ ದ್ದಾರೆ. ಇದೇ ರೀತಿ ಉಳಿದ ಗ್ರಾಮಗಳ ಜನರ ಮನವೊಲಿಸುವ ಪ್ರಯತ್ನ ನಡೆದಿದೆ.
●ವಿಠಲ ಹಲಗೇಕರ, ಶಾಸಕ, ಖಾನಾಪುರ

■ ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next