Advertisement

Heatwave: ದಿಲ್ಲಿ ಸುತ್ತ ಉಷ್ಣಮಾರುತ: 15 ಸಾವು; 12 ಮಂದಿಗೆ ಐಸಿಯು ಚಿಕಿತ್ಸೆ

12:58 AM Jun 20, 2024 | Team Udayavani |

ಹೊಸದಿಲ್ಲಿ: ಕಳೆದ 2 -3 ದಿನಗಳ ಅವಧಿಯಲ್ಲಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿ ಹಾಗೂ ಅದರ ಸುತ್ತಮುತ್ತಲ ಸ್ಥಳಗಳಲ್ಲಿ ಉಷ್ಣಮಾರುತದ ಹೊಡೆತಕ್ಕೆ 15 ಮಂದಿ ಮೃತಪಟ್ಟಿದ್ದಾರೆ. ಇದರ ಜತೆಗೆ 12 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿ ಗಳು ತಿಳಿಸಿದ್ದಾರೆ. ಈ ಮಧ್ಯೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಅವರು ಬುಧವಾರ ಅಧಿಕಾರಿಗಳ ಸಭೆಯನ್ನು ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

Advertisement

ಕಳೆದ ಎರಡು ದಿನದಲ್ಲಿ ಸರಕಾರಿ ಸ್ವಾಮ್ಯದ ಆರ್‌ಎಂಎಲ್‌ ಹಾಸ್ಪಿಟಲ್‌ಗೆ 22 ರೋಗಿಗಳು ದಾಖಲಾಗಿದ್ದು, ಐವರು ಮೃತ ಪಟ್ಟಿದ್ದಾರೆ ಮತ್ತು 12ರಿಂದ 13 ಜನರಿಗೆ ವೆಂಟಿಲೇಟರ್‌ ನೆರವು ಒದಗಿಸಲಾಗಿದೆ. ಅದೇ ರೀತಿ ಸಫ‌ªರ್‌ಗಂಜ್‌ ಹಾಸ್ಪಿಟಲ್‌ನಲ್ಲೂ 60 ಉಷ್ಣಾಘಾತ ಪ್ರಕರಣಗಳು ವರದಿಯಾಗಿವೆ.

ಈ ಪೈಕಿ 42 ಜನರು ಆಸ್ಪತ್ರೆಗೆ ದಾಖಲಾದರೆ 6 ಜನರು ಮೃತಪಟ್ಟಿದ್ದಾರೆ. ಇನ್ನು ಎಲ್‌ಜೆಪಿ ಹಾಸ್ಪಿಟಲ್‌ನಲ್ಲಿ ಉಷ್ಣಾಘಾತ ಕಾರಣದಿಂದ ನಾಲ್ವರು ರೋಗಿಗಳು ಸಾವಿಗೀಡಾಗಿದ್ದಾರೆ. ಸರ್‌ ಗಂಗಾ ರಾಮ್‌ ಹಾಸ್ಪಿಟಲ್‌ ಹೊರರೋಗಿಗಳ ವಿಭಾಗದಲ್ಲಿ ನಿತ್ಯ 30ರಿಂದ 35 ಉಷ್ಣಾಘಾತ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಸಿಗಾಳಿ ಹೊಡೆತದ ಪರಿಣಾಮ ಆಸ್ಪತ್ರೆಗಳಿಗೆ ದಾಖಲಾದವರ ಪೈಕಿ ಹೆಚ್ಚಿನವರು ಕಾರ್ಮಿಕರಾಗಿದ್ದಾರೆ.

ಬಿಸಿ ಗಾಳಿಯ ತೀವ್ರತೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ದಿಲ್ಲಿ ಮತ್ತು ಸುತ್ತಮುತ್ತ ಪ್ರದೇಶಗಳ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಬುಧವಾರ ಆದೇಶ ಹೊರಡಿಸಿದೆ.

12 ವರ್ಷಗಳಲ್ಲೇ ಜೂ. 18ರಂದು ದಿಲ್ಲಿಯಲ್ಲಿ ಗರಿಷ್ಠ “ಬಿಸಿ ರಾತ್ರಿ’
12 ವರ್ಷಗಳಲ್ಲೇ ಜೂ. 18ರಂದು ದಿಲ್ಲಿಯು ಗರಿಷ್ಠ “ಬಿಸಿ ರಾತ್ರಿ’ಗೆ ಸಾಕ್ಷಿಯಾಗಿದ್ದು, 35.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ದಾಖಲೆಗಳ ಪ್ರಕಾರ ಇದು ಸಾಮಾನ್ಯಕ್ಕಿಂತ 8 ಡಿಗ್ರಿ ಸೆ. ಹೆಚ್ಚು. ದಿನದಲ್ಲಿ ಗರಿಷ್ಠ 43.6 ಡಿ.ಸೆ. ತಾಪದಾಖಲಾಗಿದ್ದರೆ ಈ ಋತುವಿನ ಸಾಮಾನ್ಯ ಉಷ್ಣಾಂಶಕ್ಕಿಂತ 4.8ಕ್ಕಿಂತ ಹೆಚ್ಚು ಎಂದು ತಿಳಿಸಿದೆ.

Advertisement

11 ರಾಜ್ಯಗಳಲ್ಲಿ ಸರಾಸರಿ 45 ಡಿ.ಸೆ. ತಾಪ
ಹೊಸದಿಲ್ಲಿ: ಭಾರತದ ಉತ್ತರ ಹಾಗೂ ಪೂರ್ವ ದಿಕ್ಕಿನ ರಾಜ್ಯಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಪಂಜಾಬ್‌, ಹರಿಯಾಣ, ಹೊಸದಿಲ್ಲಿ, ಉತ್ತರ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಹಿಮಾಚಲ ಪ್ರದೇಶ, ಒಡಿಶಾ, ಝಾರ್ಖಂಡ್‌, ಜಮ್ಮು, ಬಿಹಾರ ರಾಜ್ಯಗಳಲ್ಲಿ ಸರಾಸರಿ 43-45 ಡಿ.ಸೆ. ತಾಪಮಾನ ದಾಖಲಾಗಿದೆ. ಹರಿಯಾಣದ ನೂಹ್‌ನಲ್ಲಿ 45.3 ಡಿಗ್ರಿ ಸೆ., ಗುರುಗ್ರಾಮ, ಫ‌ರೀದಾಬಾದ್‌ನಲ್ಲಿ 45 ಡಿಗ್ರಿ ಸೆ. ತಾಪಮಾನ ದಾಖಲಾಗಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next