ನವದೆಹಲಿ: ಕೇಂದ್ರದ ನೂತನ ಸೇನಾ ನೇಮಕಾತಿಯ ಅಗ್ನಿಪಥ್ ಯೋಜನೆ ವಿರುದ್ಧ ಎಂಟು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ನಡುವೆಯೇ ಅಗ್ನಿವೀರರಿಗೆ ಶೇ.10ರಷ್ಟು ಮೀಸಲಿಡುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಶನಿವಾರ (ಜೂನ್ 18) ಘೋಷಿಸಿದೆ.
ಇದನ್ನೂ ಓದಿ:ಪುತ್ತೂರು: ಕ್ಲಬ್ ಹೌಸ್ ನಲ್ಲಿ ಶ್ರೀರಾಮ-ಸೀತೆಗೆ ಅವಮಾನ; ನ್ಯಾಯವಾದಿ ಮನೆಯಲ್ಲಿ ದಾಂಧಲೆ
ಎರಡು ಅರೆಸೇನಾ ಪಡೆಗಳಲ್ಲಿನ ನೇಮಕಾತಿಗಾಗಿ ಅಗ್ನಿವೀರರಿಗೆ ನಿಗದಿಪಡಿಸಿದ ವಯೋ ಮಿತಿಯನ್ನು ಸಡಿಲಿಕೆ ಮಾಡಲಾಗುವುದು ಎಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಗ್ನಿವೀರರಿಗೆ ರಕ್ಷಣಾ ಇಲಾಖೆಯಲ್ಲಿ ಶೇ.10ರಷ್ಟು ಉದ್ಯೋಗವನ್ನು ಮೀಸಲಿಡುವುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಕರಾವಳಿ ಕಾವಲು ಪಡೆ, ನಾಗರಿಕ ರಕ್ಷಣಾ ಹುದ್ದೆ ಸೇರಿದಂತೆ ಎಲ್ಲಾ ರಕ್ಷಣಾ ಸಾರ್ವಜನಿಕ ಸೆಕ್ಟರ್ ಗಳಲ್ಲಿ ಶೇ.10ರಷ್ಟು ಉದ್ಯೋಗ ಮೀಸಲಿಡುವುದಾಗಿ ಸಚಿವಾಲಯ ಪ್ರಕಟಣೆಯಲ್ಲಿ ಹೇಳಿದೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದ ನಂತರ ಕೇಂದ್ರದಿಂದ ಮತ್ತೊಂದು ನಿರ್ಧಾರ ಹೊರಬಿದ್ದಿದೆ. ಈಗಾಗಲೇ ನೂತನ ಅಗ್ನಿಪಥ್ ನೇಮಕಾತಿ ಯೋಜನೆಯಡಿ ಆಯ್ಕೆಯಾಗುವ ಅಭ್ಯರ್ಥಿಗಳ ವಯೋ ಮಿತಿಯನ್ನು 21ರಿಂದ 23ಕ್ಕೆ ಬದಲಾವಣೆ ಮಾಡಿ ಘೋಷಣೆ ಹೊರಡಿಸಿದೆ.
ಈಗಾಗಲೇ ಅರೆಸೇನಾ ಪಡೆ, ಗಡಿಭದ್ರತಾ ಪಡೆ (ಬಿಎಸ್ ಎಫ್), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್), ಇಂಡೋ, ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಶಸ್ತ್ರ ಸೀಮಾ ಬಲ್ (ಎಸ್ ಎಸ್ ಬಿ) ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್)ಯಲ್ಲಿ 73,000ಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ ಎಂದು ವರದಿ ವಿವರಿಸಿದೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ ಸುಮಾರು 73,219 ಹುದ್ದೆಗಳು ಖಾಲಿ ಇದ್ದಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ. ಇದರ ಹೊರತಾಗಿಯೂ ಕೇಂದ್ರಾಡಳಿತ ಪ್ರದೇಶಗಳಲ್ಲಿ 18,124 ಪೊಲೀಸ್ ಹುದ್ದೆಗಳು ಖಾಲಿ ಇದ್ದಿರುವುದಾಗಿ ತಿಳಿಸಿದೆ.