ಬೆಂಗಳೂರು: ಲೋಕಸಭಾ ಚುನಾವಣೆಗೆ ಆಯೋಗ ಅಧಿಕೃತ ದಿನಾಂಕ ಘೋಷಣೆ ಮಾಡಿರುವುದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸ್ವಾಗತಿಸಿ ದ್ದು, ಈ ಚುನಾವಣೆಯಲ್ಲಿ ಬಿಜೆಪಿಯ ಸೋಲೇ ಪ್ರಜಾಪ್ರಭುತ್ವದ ಗೆಲುವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಿದ್ಧತೆ ಮಾಡಿಕೊಂಡಿರುವ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಟ್ವೀಟ್ ಮೂಲಕವೇ ಅಭಿನಂದನೆ ಸಲ್ಲಿಸಿರುವ ಅವರು, ಈ ಚುನಾವಣೆ ಫ್ಯಾಸಿಷ್ಟರ ವಿರುದ್ದದ ಹೋರಾಟ ಎಂದು ಕರೆದಿದ್ದಾರೆ.
ಅಲ್ಲದೇ ಈ ಚುನಾವಣೆ ಸುಳ್ಳು ಭರವಸೆಗಳಿಗೆ, ದಲಿತರ ಮೇಲಿನ ದೌರ್ಜನ್ಯ, ಕೋಮು ಭಾವನೆ ಪ್ರಚೋದನೆ ಮಾಡುವುದು, ಸೈನಿಕರ ತ್ಯಾಗವನ್ನು ದುರುಪಯೋಗ ಪಡಿಸಿಕೊಳ್ಳುವುದು, ರೈತರ ಸಮಸ್ಯೆಗಳು, ಸುಪ್ರೀಂಕೋರ್ಟ್ ದುರ್ಬಳಕೆ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ ಹಾಗೂ ದೇಶದ ಯುವಕರು ಕೇಂದ್ರ ಸರ್ಕಾರದ ವಿರುದ್ಧ ಎತ್ತಿರುವ ಪ್ರಶ್ನೆಗಳಿಗೆ ಉತ್ತರವಾಗಲಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಚುನಾವಣೆ ಕಾಂಗ್ರೆಸ್, ಬಿಜೆಪಿ ಹಾಗೂ ಇತರ ರಾಜಕೀಯ ಪಕ್ಷಗಳ ನಡುವಿನ ಸಮರವಲ್ಲ ಅಥವಾ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಹೋರಾಟವಲ್ಲ. ಇದು ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ಚುನಾವಣೆಯಾಗಲಿದ್ದು, ನಾನು ಪ್ರಜಾಪ್ರಭುತ್ವ ಗೆಲ್ಲಲು ಬಯಸುತ್ತೇನೆ. ಅಲ್ಲದೇ ಜನರು ಪ್ರಜಾಪ್ರಭುತ್ವ ಮತ್ತು ಸತ್ಯಕ್ಕಾಗಿ ಹೋರಾಟ
ಮಾಡಬೇಕು ಎಂದು ಕರೆ ನೀಡಿದ್ದಾರೆ.