Advertisement

Hindu ಧಾರ್ಮಿಕ ದತ್ತಿ ಮಸೂದೆಗೆ ಸೋಲು : ಬಿಜೆಪಿ-ಜೆಡಿಎಸ್‌ ವಿರೋಧ, ತಿರಸ್ಕೃತ

01:11 AM Feb 24, 2024 | Team Udayavani |

ಬೆಂಗಳೂರು: ಸಾಕಷ್ಟು ಹಗ್ಗಜಗ್ಗಾಟದ ಅನಂತರ “ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ಮಸೂದೆ- 2024’ಕ್ಕೆ ಮೇಲ್ಮನೆಯಲ್ಲಿ ಸೋಲಾಗಿದೆ. ಈ ಮೂಲಕ ಸರಕಾರಕ್ಕೆ ಮತ್ತೂಂದು ಹಿನ್ನಡೆ ಯಾದಂತಾಗಿದೆ. ಒಂದು ದಿನದ ಹಿಂದಷ್ಟೇ “ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ’ಗೆ ವಿರೋಧ ವ್ಯಕ್ತವಾಗಿ ಶಾಸನ ಪರಿಶೀಲನ ಸಮಿತಿಗೆ ವಹಿಸಲಾಗಿತ್ತು.

Advertisement

ಒಟ್ಟು ವಾರ್ಷಿಕ ಆದಾಯ ಒಂದು ಕೋಟಿ ರೂ. ಮೀರಿದ ಧಾರ್ಮಿಕ ಸಂಸ್ಥೆಗಳ ಸಂಬಂಧಪಟ್ಟ ನಿವ್ವಳ ಆದಾಯದ ಶೇ. 10 ರಷ್ಟು ಹಣವನ್ನು “ಸಿ’ ದರ್ಜೆಯ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ವಿನಿಯೋಗಿಸುವ ಈ ಮಸೂದೆ ವಿಧಾನಸಭೆಯಲ್ಲಿ ಅಂಗೀಕೃತಗೊಂಡು ಮೇಲ್ಮನೆಗೆ ಬಂದಿತ್ತು. ಆದರೆ ಅದರ ಕೆಲವು ಅಂಶಗಳಿಗೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಧ್ವನಿಮತಕ್ಕೆ ಹಾಕಲಾಯಿತು. ಆಗ ಸರಕಾರಕ್ಕೆ ಸೋಲುಂಟಾಯಿತು. ಬಹುಮತ ಹೊಂದಿರುವ ವಿಪಕ್ಷಗಳಾದ ಬಿಜೆಪಿ-ಜೆಡಿಎಸ್‌ ಮೇಲುಗೈ ಸಾಧಿಸಿದವು.

ಮಸೂದೆಯ ಪ್ರಸ್ತಾವನೆಗೆ ವಿರೋಧವಾಗಿರುವವರು “ಇಲ್ಲ’ ಎಂದು ಸೂಚಿಸಿದರು. ಆದರೆ ಪರವಾಗಿ ಇರುವವರು ಅಂದರೆ ಆಡಳಿತ ಪಕ್ಷದ ಸದಸ್ಯರು “ಹೌದು’ ಎಂದು ಕೂಡ ಸೂಚಿಸಲಿಲ್ಲ. ಹಾಗಾಗಿ ಮಸೂದೆ ತಿರಸ್ಕೃತಗೊಂಡಿತು. ಬೆನ್ನಲ್ಲೇ ವಿಪಕ್ಷಗಳ ಸದಸ್ಯರು ಜೈಶ್ರೀರಾಮ ಘೋಷಣೆ ಕೂಗಿದರು.

ಇದು ಆ ದೇವಸ್ಥಾನಗಳಿಗೆ ಶಾಶ್ವತ ನಿಧಿ ಆಗಲಿದೆ. ಅಲ್ಲದೆ ಸಂಯೋಜಿತ ಸಂಸ್ಥೆಯ (ಹಿಂದೂ, ಮುಸ್ಲಿಂ, ಕ್ರೈಸ್ತರೆಲ್ಲರ ಶ್ರದ್ಧಾಸ್ಥಾನಗಳು) ಸಂದರ್ಭದಲ್ಲಿ ಹಿಂದೂ ಮತ್ತು ಇತರ ಧರ್ಮಗಳಿಂದಲೂ ಸದಸ್ಯರ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಈ ಎರಡೂ ಅಂಶಗಳ ಬಗ್ಗೆ ನಮಗೆ ಆಕ್ಷೇಪ ಇದೆ. “ಸಿ’ ದರ್ಜೆಯ ದೇವಸ್ಥಾನಗಳ ನಿರ್ವಹಣೆಗೆ “ಎ’ ದರ್ಜೆಯ ದೇವಸ್ಥಾನಗಳಿಂದ ಬಂದ ಆದಾಯವನ್ನು ವಿನಿಯೋಗಿಸುವ ಅನಿವಾರ್ಯ ಏನಿದೆ? ಬಜೆಟ್‌ನಲ್ಲೇ 50 ಕೋಟಿ ರೂ. ಮೀಸಲಿಡಬಹುದಲ್ಲವೇ? ಇನ್ನು ಸದಸ್ಯರ ನೇಮಕ ವಿಚಾರವನ್ನೂ ಕೈಬಿಡಬೇಕು ಎಂದರು. ಇದಕ್ಕೆ ಉಳಿದ ಸದಸ್ಯರು ದನಿಗೂಡಿಸಿದರು.

Advertisement

ಆಗ ಸಚಿವರು ಸದಸ್ಯತ್ವ ನೇಮಕ ವಿಚಾರ ಕೈಬಿಡಲಾಗುವುದು. ಶೇ. 10ರಷ್ಟು ಹಣ ನೀಡುವ ಬಗ್ಗೆ ಆಕ್ಷೇಪವಿದ್ದರೆ ಅದನ್ನೂ ಬೇಕಾದರೆ ಕಡಿಮೆ ಮಾಡೋಣ ಎಂದು ಚೌಕಾಸಿಗಿಳಿದರು. ಆದರೆ ವಿಪಕ್ಷಗಳು ಪಟ್ಟು ಸಡಿಲಿಸಲಿಲ್ಲ. ಈ ವೇಳೆ ಸಚಿವರು ಸೋಮವಾರದ ವರೆಗೆ ಕಾಲಾವಕಾಶ ನೀಡುವಂತೆ ಉಪಸಭಾಪತಿ ಕೆ. ಪ್ರಾಣೇಶ್‌ ಅವರನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಸಭಾಪತಿಗಳು, “ಒಮ್ಮೆ ಪರ್ಯಾಲೋಚನೆಗೆ ಒಳಪಡಿಸಿದ ಅನಂತರ ಮೊಟಕುಗೊಳಿಸಲು ಬರುವುದಿಲ್ಲ. ಬೇಕಿದ್ದರೆ ಹದಿನೈದು ನಿಮಿಷಗಳ ಕಾಲಾವಕಾಶ ನೀಡಲಾಗುವುದು’ ಎಂದು ಕಲಾಪ ಮುಂದೂಡಿದರು.

ಹದಿನೈದು ನಿಮಿಷಗಳ ಅನಂತರ ಕಲಾಪ ಪುನಾರಂಭಗೊಳ್ಳುತ್ತಿದ್ದಂತೆ ಉಪ ಸಭಾಪತಿಗಳು ಮಸೂದೆಯನ್ನು ಧ್ವನಿಮತಕ್ಕೆ ಹಾಕಿದರು. ಆಗ ಬಹುಮತ ಹೊಂದಿರುವ ವಿಪಕ್ಷಗಳು ಮೇಲುಗೈ ಸಾಧಿಸಿದವು.

ಹಾಡಿ ಹೊಗಳಿದ ನಂಜುಂಡಿ
ಇದಕ್ಕೆ ಮುನ್ನ ಮಸೂದೆ ಪರ ಮಾತನಾಡಿದ ಬಿಜೆಪಿಯ ಕೆ.ಪಿ. ನಂಜುಂಡಿ, “ಧಾರ್ಮಿಕ ಸಂಸ್ಥೆಯ ವ್ಯವಸ್ಥಾಪನ ಸಮಿತಿಯಲ್ಲಿ ವಿಶ್ವಕರ್ಮ ಸಮುದಾಯದವರಿಗೂ ಅವಕಾಶ ಕಲ್ಪಿಸಲಾಗಿದೆ. ಇದು ಅತ್ಯಂತ ಖುಷಿಯ ಸಂಗತಿ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಷ್ಠಾಪನೆಗೆ 500 ವರ್ಷ ಕಾಯಬೇಕಾಯಿತು. ಅದಕ್ಕಾಗಿ ಪ್ರಧಾನಿ ಮೋದಿ ಅವರೇ ಬರಬೇಕಾಯಿತು. ಅದೇ ರೀತಿ ಈ ಮಸೂದೆಗೆ ತಿದ್ದುಪಡಿ ತರುವ ಮೂಲಕ ರಾಮಲಿಂಗಾರೆಡ್ಡಿ ಅವರೇ ವಿಶ್ವಕರ್ಮ ಸಮುದಾಯದ ನೆರವಿಗೆ ಬರಬೇಕಾಯಿತು’ ಎಂದು ಹಾಡಿ ಹೊಗಳಿದರು.

ಶಾಶ್ವತ ನಿಧಿ ಆಗಲಿದೆ: ರಾಮಲಿಂಗಾರೆಡ್ಡಿ
ಇದಕ್ಕೆ ಮುನ್ನ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಮಸೂದೆಗೆ ಸಂಬಂಧಿಸಿ ಹಗ್ಗ ಜಗ್ಗಾಟ ನಡೆಯಿತು. ಮಸೂದೆಯ ಪ್ರಸ್ತಾವನೆ ಮಂಡಿಸಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಒಂದು ಕೋಟಿ ರೂ.ಗೂ ಅಧಿಕ ಆದಾಯ ಹೊಂದಿರುವ ದೇವಸ್ಥಾನಗಳ ಒಟ್ಟು ನಿವ್ವಳ ಆದಾಯದಲ್ಲಿ ಶೇ. 10ರಷ್ಟನ್ನು “ಸಿ’ ದರ್ಜೆಯ ದೇವಸ್ಥಾನಗಳ ನಿರ್ವಹಣೆಗೆ ವಿನಿಯೋಗಿಸಲಾಗುವುದು.

ಏನಿದು ಮಸೂದೆ?
ಕೋಟಿ ರೂ.ಗೂ ಅಧಿಕ ಆದಾಯ ಹೊಂದಿ ರುವ ದೇವಸ್ಥಾನಗಳ ಒಟ್ಟು ನಿವ್ವಳ ಆದಾಯದಲ್ಲಿ ಶೇ. 10ರಷ್ಟು “ಸಿ’ ದರ್ಜೆಯ ದೇವಸ್ಥಾನಗಳ ನಿರ್ವಹಣೆಗೆ ವಿನಿಯೋಗ. ದೇಗುಲಗಳು ಹಲವು ಧರ್ಮೀಯರ ಶ್ರದ್ಧಾಸ್ಥಾನಗಳಾಗಿದ್ದರೆ ಹಿಂದೂ ಮತ್ತು ಇತರ ಧರ್ಮಗಳಿಂದಲೂ ಸದಸ್ಯರ ನೇಮಕಕ್ಕೆ ಅವಕಾಶ.

ಆಗಿದ್ದೇನು?
ವಿಧಾನಸಭೆಯಲ್ಲಿ ಈಗಾಗಲೇ ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ಅಂಗೀಕಾರ. ಶುಕ್ರ ವಾರ ವಿಧಾನ ಪರಿಷತ್‌ನಲ್ಲಿ ಮಂಡನೆ. ಧ್ವನಿ ಮತದ ವೇಳೆ ಬಿಜೆಪಿ-ಜೆಡಿಎಸ್‌ ಸದಸ್ಯರಿಂದ ವಿರೋಧ, ಮಸೂದೆಗೆ ಸೋಲು.

ಮುಂದೇನು?
ತಿರಸ್ಕೃತಗೊಂಡ ಮಸೂದೆಯು ಮತ್ತೆ ಕೆಳಮನೆಯಲ್ಲಿ ಮಂಡನೆ ಆಗಲಿದೆ. ಅಲ್ಲಿ ಅಂಗೀಕಾರಗೊಂಡ ಅನಂತರ ಮಸೂದೆ ಆಗಿ ಜಾರಿಗೆ ಬರಲಿದೆ. ಒಂದು ವೇಳೆ ಪರಿಶೀಲನ ಸಮಿತಿಗೆ ಒಳಪಡಿಸಿದರೆ ವಾಪಸ್‌ ವಿಧಾನಸಭೆಗೆ ಹೋಗಲು ಅವಕಾಶ ಇರುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next