ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಮಾದಕ ದ್ರವ್ಯ ಜಾಲದ ಬಗೆಗಿನ ತನಿಖೆಯಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳತೊಡಗಿದೆ. ಏತನ್ಮಧ್ಯೆ ಬಾಲಿವುಡ್ ನ ಖ್ಯಾತ ನಟಿ ದೀಪಿಕಾ ಪಡುಕೋಣೆ ಹೆಸರು ಕೂಡಾ ಕೇಳಿಬಂದಿದ್ದು, ಮೂರು ದಿನಗಳಲ್ಲಿ ಪಡುಕೋಣೆ, ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಗೆ ವಿಚಾರಣೆಗೆ ಹಾಜರಾಗುವಂತೆ ಎನ್ ಸಿಬಿ ನೋಟಿಸ್ ನೀಡಿರುವುದಾಗಿ ವರದಿ ತಿಳಿಸಿದೆ.
ಈಗಾಗಲೇ ದೀಪಿಕಾ ಪಡುಕೋನೆ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಗೆ ಎನ್ ಸಿಬಿ ನೋಟಿಸ್ ನೀಡಿದ್ದು, ಮಂಗಳವಾರ ವಿಚಾರಣೆ ನಡೆಸಲಾಗಿತ್ತು. ದೀಪಿಕಾಗೆ ಮಾದಕ ವಸ್ತುಗಳನ್ನು ಮ್ಯಾನೇಜರ್ ಪೂರೈಕೆ ಮಾಡುತ್ತಿದ್ದದ್ದು ರಿಯಾ ಚಕ್ರವರ್ತಿ ಮೊಬೈಲ್ ನಲ್ಲಿನ ವಾಟ್ಸಪ್ ಚಾಟ್ ನಿಂದ ಬಯಲಾಗಿತ್ತು.
ಡ್ರಗ್ಸ್ ಮತ್ತು ಚಿತ್ರರಂಗದ ನಡುವಿನ ಸಂಬಂಧದ ಬಗ್ಗೆ ಹೊರಬಿದ್ದ ಪ್ರಭಾವಶಾಲಿಗಳ ಹೆಸರು ಇದೀಗ ತನಿಖೆಯಲ್ಲಿ ಹೊರಬಿದ್ದಂತಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ವಿಚಾರಣೆ ಇದೀಗ ಬಾಲಿವುಡ್ ನ ಘಟನಾನುಘಟಿಗಳ ಹೆಸರು ಹೊರಬೀಳವಂತೆ ಮಾಡಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ಶ್ರುತಿ ಮೋದಿ, ಸಿಮೋನ್ ಖಾಂಬಟ್ಟಾ ಹಾಗೂ ರಾಕುಲ್ ಪ್ರೀತ್ ಗೆ ಸೆಪ್ಪೆಂಬರ್ 24ರಂದು ವಿಚಾರಣೆಗೆ ಹಾಜರಾಗುವಂತೆ ಎನ್ ಸಿಬಿ ನೋಟಿಸ್ ನೀಡಿದ್ದು, ದೀಪಿಕಾ ಪಡುಕೋಣೆಗೆ ಸೆ.25ರಂದು ಹಾಗೂ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಗೆ ಸೆ.26ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ ಎಂದು ತಿಳಿಸಿದೆ.
ಇದನ್ನೂ ಓದಿ: IPL 2020: ಶುಕ್ರವಾರ ಎದುರಾಗಲಿವೆ ಕರ್ನಾಟಕದ ಆರ್‌ಸಿಬಿ ವರ್ಸಸ್ ಕನ್ನಡಿಗರ ಪಂಜಾಬ್!
ಕರೀಷ್ಮಾ ಪ್ರಕಾಶ್ ಮೊಬೈಲ್ ಫೋನ್ ಅನ್ನು ತನಿಖೆಗೆ ಒಳಪಡಿಸಿದ್ದ ಅಧಿಕಾರಿಗಳಿಗೆ ಡಿ ಆ್ಯಂಡ್ ಕೆ ನಡುವಿನ ಸಂಭಾಷಣೆ ಬಯಲಾಗಿದ್ದು, ಇದರಲ್ಲಿ ಡ್ರಗ್ಸ್ ತರಿಸಿಕೊಳ್ಳುವ ಮಾತುಕತೆ ನಡೆದಿರುವುದಾಗಿ ವರದಿ ತಿಳಿಸಿದೆ.
ಮುಂಬೈನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದ ಅಧಿಕಾರಿಗಳಿಗೆ 59 ಗ್ರಾಂ ಮರಿಜುವಾನಾ ವಶಪಡಿಸಿಕೊಂಡ ನಂತರ ನಟಿ ರಿಯಾ ಚಕ್ರವರ್ತಿಯನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಲಾಗಿತ್ತು. ಬಾಯ್ ಫ್ರೆಂಡ್ ಸುಶಾಂತ್ ಸಿಂಗ್ ರಜಪೂತ್ ಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಪ್ರಮುಖ ಆರೋಪಿಗಳಲ್ಲಿ ರಿಯಾ ಒಬ್ಬಳಾಗಿದ್ದಾಳೆ ಎಂದು ವರದಿ ಹೇಳಿದೆ.