ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಜಾಲದ ನಂಟಿನ ಆರೋಪದ ಕುರಿತ ವಿಚಾರಣೆಗೆ ನಟಿ ದೀಪಿಕಾ ಪಡುಕೋಣೆ ಎನ್ ಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿದ್ದು, ಏತನ್ಮಧ್ಯೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕುರಿತು ದೀಪಿಕಾ ಅಭಿಪ್ರಾಯವ್ಯಕ್ತಪಡಿಸಿದ್ದ ಹಳೆ ವಿಡಿಯೋ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ರಾಹುಲ್ ಬಗ್ಗೆ ದೀಪಿಕಾ ಹೇಳಿದ್ದೇನು?
ರಾಹುಲ್ ಗಾಂಧಿ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ದೀಪಿಕಾ ಪಡುಕೋಣೆ, ರಾಹುಲ್ ಗಾಂಧಿ ನಮ್ಮ ದೇಶಕ್ಕೆ ಕ್ಲಾಸಿಕ್ ಉದಾಹರಣೆಯಾಗಬಲ್ಲ ನಾಯಕ, ಅವರು ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆಂಬ ಭರವಸೆ ಇದ್ದಿರುವುದಾಗಿ ಅಭಿಪ್ರಾಯವ್ಯಕ್ತಪಡಿಸಿದ್ದು ಇದೀಗ ಈ ಹಳೇ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ.
ವಿಡಿಯೋದಲ್ಲಿ, ರಾಹುಲ್ ಗಾಂಧಿ ನಮ್ಮ ದೇಶಕ್ಕಾಗಿ ಏನು ಮಾಡುತ್ತಿದ್ದಾರೋ ಅದರಿಂದ ಅವರನ್ನು ಕ್ಲಾಸಿಕ್ ಉದಾಹರಣೆಯನ್ನಾಗಿ ರೂಪಿಸಿದೆ. ಅವರು ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆಂಬ ನಿರೀಕ್ಷೆ ಇದೆ ಎಂಬುದಾಗಿ ದಾಖಲಾಗಿದೆ.
ನನ್ನ ಆಲೋಚನೆ ಪ್ರಕಾರ ರಾಹುಲ್ ಯುವ ಸಮುದಾಯದ ಜತೆ ಹೆಚ್ಚು ಸಂಪರ್ಕ ಸಾಧಿಸುತ್ತಿದ್ದಾರೆ. ಅವರ ಆಚಾರ, ವಿಚಾರ ಸಾಂಪ್ರದಾಯಿಕವಾಗಿದೆ. ಆದರೆ ಭವಿಷ್ಯದಲ್ಲಿಯೂ ಹೀಗೆಯೇ ಇರಬೇಕಾಗುತ್ತದೆ ಎಂದು ದೀಪಿಕಾ ಪ್ರತಿಕ್ರಿಯೆ ನೀಡಿದ್ದರು.
ಎನ್ ಸಿಬಿ ಅಧಿಕಾರಿಗಳು ದೀಪಿಕಾ ಪಡುಕೋಣೆಯನ್ನು ವಿಚಾರಣೆಗೊಳಪಡಿಸಿದ ನಂತರ ವಿಡಿಯೋ ವೈರಲ್ ಆಗಿದೆ. 2017ರಲ್ಲಿ ದೀಪಿಕಾ ತನ್ನ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ಜತೆ ನಡೆಸಿದ್ದ ಡ್ರಗ್ಸ್ ಚಾಟ್ ಗೆ ಸಂಬಂಧಿಸಿದಂತೆ ಎನ್ ಸಿಬಿ ಈಕೆಯನ್ನು ವಿಚಾರಣೆಗೆ ಒಳಪಡಿಸಿತ್ತು.