ಬೆಂಗಳೂರು: ಕೋವಿಡ್ ಸಂಕಷ್ಟದ ಬಳಿಕ ಬೆಳಕಿನ ಹಬ್ಬ ದೀಪಾವಳಿ ಜವಳಿ ಉದ್ಯಮದಲ್ಲಿ “ಚೇತರಿಕೆಯ ಬೆಳಕು’ ಮೂಡಿದೆ. ಪ್ರಸ್ತುತ ಚಿಕ್ಕಪೇಟೆ ಜವಳಿ ವ್ಯಾಪಾರಿಗಳ ಮೊಗದಲ್ಲಿ ನುಗುವಿನ ಬೆಳಕು ಕಾಣಲಾರಂಭಿಸಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ದೀಪಾವಳಿ ಹಬ್ಬದ ಖರೀದಿ ಜೋರಾಗಿದ್ದು, ದಕ್ಷಿಣ ಭಾರತದಲ್ಲಿ ಹೋಲ್‌ಸೇಲ್ ಜವಳಿ ವ್ಯಾಪಾರಕ್ಕೆ ಹೆಸರು ವಾಸಿ ಆಗಿರುವ ಚಿಕ್ಕಪೇಟೆಯಲ್ಲಿ ಬಟ್ಟೆಗಳ ಖರೀದಿ ಭರಾಟೆ ಶುರುವಾಗಿದೆ.
ಈ ಹಿಂದೆ ಹೋಳಿ,ಗೌರಿ-ಗಣೇಶ ಹಬ್ಬದ ನಂತರ ಸಾಲು ಸಾಲುಹಬ್ಬಗಳು ಬಂದಿದ್ದವು. ಬಕ್ರೀದ್ ಸೇರಿದಂತೆ ಹಲವು ಹಬ್ಬಗಳು ಆಚರಿಸಲ್ಪಟ್ಟಿದ್ದವು. ಆದರೆ ಕೋವಿಡ್ ಭಯದ ಹಿನ್ನೆಲೆಯಲ್ಲಿ ಜನರು ಬಟ್ಟೆ ಅಂಗಡಿಯತ್ತ ಸುಳಿಯುತ್ತಿರಲಿಲ್ಲ. ಚಿಕ್ಕಪೇಟೆಯ ಬಟ್ಟೆ ವ್ಯಾಪಾರಸ್ಥರು ಗ್ರಾಹಕರಿಲ್ಲದೆ ಆಂತಕ್ಕೆ ಒಳಗಾಗಿದ್ದರು. ಕೆಲವರು ಊರಿಗೆ ತೆರಳಿದ್ದರು. ಅದರೆ, ದಸರಾ ಬಳಿಕ ಪರಿಸ್ಥಿತಿ ಸುಧಾರಿಸಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಚಿಕ್ಕಪೇಟೆ ಗಲ್ಲಿಗಳ ಚಿತ್ರಣವೇ ಬದಲಾಗಿದೆ.
ಮಹಿಳೆಯರಿಂದ ಹೊಸ ಬಟ್ಟೆ ಖರೀದಿ ಜೋರು: ಚಿಕ್ಕಪೇಟೆ ಗಲ್ಲಿಗಲ್ಲಿಗಳಲ್ಲಿ ದೀಪಾವಳಿಗಾಗಿ ಹೊಸಬಟ್ಟೆಯ ಹೊಳಪು ಗೋಚರಿಸುತ್ತಿದೆ. ಬೆಂಗಳೂರಿಗರಲ್ಲದೇ, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಪ್ರದೇಶ ಜನರು ಚಿಕ್ಕಪೇಟೆಗೆ ಬಂದು ಬಟ್ಟೆ ಖರೀದಿಸುತ್ತಿದ್ದಾರೆ. ಹೀಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಎಲ್ಲಾ ಅಂಗಡಿಗಳು ಗ್ರಾಹಕರ ಮಯವಾಗಿದೆ. ಅದರಲ್ಲೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ತಮಗಿಷ್ಟವಾದ ದಿರಿಸುವ ಖರೀದಿಸುತ್ತಿದ್ದಾರೆ ಎಂದು ಚಿಕ್ಕಪೇಟೆ ಬಟ್ಟೆ ವ್ಯಾಪಾರಿ ಯೋಗೇಶ್ ಶೇಟ್ ಹೇಳಿದರು. ಈ ಹಿಂದೆ ಖರೀದಿದಾರರಿಲ್ಲದೆ ಅಂಗಡಿಗಳಲ್ಲಿ ಕುಳಿತು ಕೊಳ್ಳುವುದಕ್ಕೆ ಬೇಸರವಾಗುತ್ತಿತ್ತು. ಆದರೆ, ಈಗ ಸ್ವಲ್ಪ ಮಟ್ಟಿನ ಕಳೆ ಬಂದಿದೆ ಎಂದರು.
ಹೊರ ರಾಜ್ಯಗಳಿಂದಲೂ ಬೇಡಿಕೆ: ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದಲೂ ಹೋಲ್ ಸೇಲ್ ವ್ಯಾಪಾರಿಗಳು ಬೆಂಗಳೂರಿನಲ್ಲೆ ಜವಳಿ ಉಡುಪುಗಳನ್ನು ಖರೀದಿ ಮಾಡುತ್ತಿದ್ದರು.ಆದರೆ ಕೋವಿಡ್ ಹಿನ್ನೆಲೆ ವ್ಯಾಪಾರ ಕುಸಿತವಾಗಿತ್ತು. ಇದೀಗ ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನ ವ್ಯಾಪಾರಿಗಳು ಚಿಕ್ಕಪೇಟೆಯಲ್ಲಿ ಮತ್ತೆ ಬಟ್ಟೆ ಖರೀದಿ ಮಾಡುತ್ತಿದ್ದಾರೆ ಎಂದು ಚಿಕ್ಕಪೇಟೆಯ ಡಿ.ಎಸ್.ಗಲ್ಲಿಯಲ್ಲಿರುವ ಎಂ.ವಿ.ಸುಬ್ಬರಾಮಗುಪ್ತಾ ಬಟ್ಟೆ ಅಂಗಡಿ ಮಾಲೀಕ ಗಿರೀಶ್ ಮಾಕಂ ಹೇಳಿದರು.
ಶೇ.80 ಉದ್ಯಮ ಚೇತರಿಕೆ : ಕೋವಿಡ್ ದ ಹಿನ್ನೆಲೆಯಲ್ಲಿ ಕಷ್ಟಕ್ಕೆ ಸಿಲುಕಿದ್ದ ಜವಳಿ ಉದ್ಯಮ ದಸರಾ ನಂತರ ಒಂದಿಷ್ಟು ಚೇತರಿಸಿಕೊಂಡಿತು. ಆ ವೇಳೆ ಶೇ.60 ವ್ಯಾಪಾರ ನಡೆದಿತ್ತು. ಇದೀಗ ದೀಪಾವಳಿ ಹಿನ್ನೆಲೆಯಲ್ಲಿ ಗ್ರಾಹಕರು ವಿವಿಧ ವಿನ್ಯಾಸದ ಬಟ್ಟೆಗಳಿಗೆ ಬೇಡಿಕೆಯಿಟ್ಟಿದ್ದು ಶೇ.80 ಚೇತರಿಕೆ ಕಂಡುಕೊಂಡಿದೆ. ಜತೆಗೆ ನಗರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಗ್ರಾಹಕರ ಆರ್ಡರ್ ಬರುತ್ತಿವೆ ಎಂದು ಬೆಂಗಳೂರು ಹೋಲ್ ಸೇಲ್‌ಕ್ಲಾತ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಹೇಳಿದ್ದಾರೆ.
ಹೊರ ರಾಜ್ಯದಿಂದ ಬಟ್ಟೆ ಆಗಮನ : ಚಿಕ್ಕಪೇಟೆಗೆಕೋಲ್ಕತ್ತಾದಿಂದ ಪುಟಾಣಿಗಳು ಧರಿಸುವ ಬಟ್ಟೆ ಉತ್ಪನ್ನಗಳು ಹೆಚ್ಚಿನ ಸಂಖ್ಯೆಯಲ್ಲಿ ರಫ್ತಾಗುತ್ತದೆ. ಹಾಗೆಯೇ ಅಹಮದಾಬಾದ್‌ನಿಂದ ಚೂಡೀದಾರ್, ಸೂರತ್ ಮತ್ತು ಬನರಾಸ್ ನಿಂದ ಸ್ಯಾರೀಸ್, ಬ್ಲೌಸ್ , ಬಾಂಬೆಯಿಂದ ಬಟ್ಟೆಬರೆ ಉತ್ಪನ್ನಗಳು, ಹಾಗೆಯೇ ತಮಿಳುನಾಡಿನಿಂದ ಹ್ಯಾಂಡ್ ಲ್ಯೂಮ್ ಉತ್ಪನ್ನಗಳು ಚಿಕ್ಕಪೇಟೆ ಸೇರುತ್ತವೆ.
ಬೆಂಗಳೂರಿನಲ್ಲಿ ಸುಮಾರು 3 ಸಾವಿರ ಹೋಲ್ ಸೇಲ್ ಅಂಗಡಿಗಳಿವೆ.ದೀಪಾವಳಿ ಹಿನ್ನೆಲೆಯಲ್ಲಿ ಖರೀದಿ ಸಂಭ್ರಮ ಜೋರಾಗಿದ್ದು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಿದ್ದಾರೆ. ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಮಾರ್ಗ ಸೂಚಿ ಪ್ರಕಟಿಸಿದ್ದು, ಅದನ್ನು ಪಾಲನೆ ಮಾಡಿ ವ್ಯಾಪಾರ ಪ್ರಕ್ರಿಯೆ ನಡೆಯುತ್ತಿದೆ.
– ಪ್ರಕಾಶ್ ಪಿರ್ಗಲ್ ಹೋಲ್ ಸೇಲ್ ಕ್ಲಾತ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ