ಉಡುಪಿ/ಮಂಗಳೂರು: ಕರಾವಳಿಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದು ಶನಿವಾರದಿಂದ ಮಂಗಳವಾರದ ವರೆಗೂ ವಿವಿಧ ಪೂಜೆ, ಉತ್ಸವ ವಿಜೃಂಭಣೆಯಿಂದ ನಡೆಯಿತು.
ಹೂವಿನ ಅಲಂಕಾರದೊಂದಿಗೆ ಮನೆ, ಕಚೇರಿಗಳನ್ನು ಸಿಂಗರಿಸಿ ಜನ ಸಂಭ್ರಮಿಸಿದರು. ಮನೆ ಮುಂಭಾಗದಲ್ಲಿ ರಂಗೋಲಿ ಹಾಕಿ ದೀಪ ಹಚ್ಚಿ ದೀಪಾವಳಿಯನ್ನು ಆಚರಿಸಿದರು. ವಿವಿಧ ಕಚೇರಿ, ಮನೆಗಳಲ್ಲಿ ಲಕ್ಷ್ಮೀಪೂಜೆ, ದೇವಸ್ಥಾನ, ಸಂಘ- ಸಂಸ್ಥೆಗಳಿಂದ ಸಾಮೂಹಿಕ ಗೋ ಪೂಜೆ, ಲಕ್ಷ್ಮೀ ಪೂಜೆ ನೆರವೇರಿತು. ಸಾವಿರಾರು ಭಕ್ತರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಟಾಕಿ ಅಂಗಡಿ, ಮಾರುಕಟ್ಟೆ ಯಲ್ಲೂ ಹೂವು-ಹಣ್ಣಿನ ಖರೀದಿ ಜೋರಾಗಿತ್ತು. ಅನೇಕರು ವಾಹನ, ಅಂಗಡಿಗಳಿಗೂ ಪೂಜೆ ನೆರವೇರಿಸಿದರು. ವಿವಿಧ ಬಣ್ಣ ವಿನ್ಯಾಸಗಳ ಗೂಡುದೀಪಗಳು, ಆಕರ್ಷಕ ವಿದ್ಯುತ್ ದೀಪಗಳು ಹಬ್ಬದ ರಂಗು ಹೆಚ್ಚಿಸಿವೆ. ಮನೆಯ ಆವರಣದಲ್ಲಿ ಹಣತೆಗಳಲ್ಲಿ ದೀಪ ಬೆಳಗಿಸಿ, ಹೊಸ ಉಡುಪು ಧರಿಸಿ, ಹಸುರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ವಾರಾಂತ್ಯದ ರಜೆಯ ಜತೆಗೆ ದೀಪಾವಳಿ ಆಚರಣೆ ನಡೆದಿರುವುದರಿಂದ ಮನೆ ಮಂದಿ ಒಟ್ಟಿಗೆ ಇದ್ದು ಬೆಳಕಿನ ಹಬ್ಬದ ಸವಿಯನ್ನು ಸವಿದರು.
ಮಂಗಳವಾರ ಹಬ್ಬದ ಕೊನೇ ದಿನವಾಗಿದ್ದು, ಸಾರ್ವತ್ರಿಕ ರಜೆಯೂ ಇರುವುದರಿಂದ ಹಬ್ಬದ ಸಂಭ್ರಮ ಇನ್ನಷ್ಟು ಕಳೆಗಟ್ಟಲಿದೆ.