ಹೊಸದಿಲ್ಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರಿಗೆ ಕೋವಿಡ್ ಸೋಂಕು ಅಂಟಿದೆ ಎಂಬುದೊಂದು ಆತಂಕದ ಸುದ್ದಿ. ಆದರೆ ಕೋವಿಡ್ ತಗಲಿದ್ದು ಯಾರಿಗೆ ಎಂಬುದು ಎಲ್ಲಿಯೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ದೀಪಕ್ ಚಹರ್ ಮತ್ತು ಋತುರಾಜ್ ಗಾಯಕ್ವಾಡ್ ಅವರಲ್ಲಿ ಪಾಸಿಟಿವ್ ಕಂಡುಬಂದಿದೆ ಎಂಬುದು ಅನೇಕರ ಊಹೆಯಾಗಿತ್ತು.
ಇದೀಗ ದೀಪಕ್ ಚಹರ್‌ಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಖಚಿತವಾಗಿದೆ. ಅವರ ಸೋದರ ಸಂಬಂಧಿ ರಾಹುಲ್ ಚಹರ್ ಮತ್ತು ಸಹೋದರಿ ಮಾಲತಿ ಚಹರ್ ಅವರ ಹಾರೈಕೆಗಳು ಎಲ್ಲರ ಊಹೆಯನ್ನು ನಿಜಮಾಡಿವೆ. ಕೋವಿಡನ್ನು ಗೆದ್ದು ಮೊದಲಿಗಿಂತ ಬಲಿಷ್ಠನಾಗಿ ಬಾ ಎಂದು ಇವರಿಬ್ಬರು ದೀಪಕ್ ಚಹರ್ ಅವರಿಗೆ ಹಾರೈಸಿದ್ದಾರೆ.
“ನೀನೋರ್ವ ನಿಜವಾದ ಸೇನಾನಿ. ಹೋರಾಡಲೆಂದೇ ಹುಟ್ಟಿದವ. ಗಾಡಾಂಧಕಾರದ ರಾತ್ರಿಯ ಬಳಿಕ ಯಾವಾಗಲೂ ಪ್ರಜ್ವಲಿಸುವ ಬೆಳಕಿರುತ್ತದೆ. ಮೊದಲಿಗಿಂತ ಹೆಚ್ಚು ಬಲಿಷ್ಠನಾಗಿ ಬಾ. ಪ್ರೀತಿಯೊಂದಿಗೆ…’ ಎಂದು ಮಾಲತಿ ಚಹರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Related Articles
ದೀಪಕ್ ಚಹರ್ ಅವರ ಸೋದರ ಸಂಬಂಧಿಯಾಗಿರುವ ರಾಹುಲ್ ಚಹರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಯುಎಇಯಲ್ಲೇ ಇದ್ದಾರೆ. ಅವರು “ಸ್ಟೇ ಸ್ಟ್ರಾಂಗ್ ಬ್ರದರ್. ಹೋಪಿಂಗ್ ಫಾರ್ ಯುವರ್ ಸ್ಪೀಡಿ ರಿಕವರಿ’ ಎಂದು ವೀಡಿಯೋ ಸಂದೇಶವೊಂದನ್ನು ರವಾನಿಸಿದ್ದಾರೆ.