ಉಡುಪಿ : ಸುರಕ್ಷತಾ ಅಂತರ, ಮಾಸ್ಕ್ನ ಕಡ್ಡಾಯ ಬಳಕೆ ಹಾಗೂ ಇತರ ಮುಂಜಾಗ್ರತಾ ಕ್ರಮಗಳೊಂದಿಗೆ ಮಲ್ಪೆ ಬಂದರಿನಲ್ಲಿ ಆಳಸಮುದ್ರ ಮೀನುಗಾರಿಕೆಯು ಪ್ರಾರಂಭಗೊಂಡಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಮಲ್ಪೆ ಮೀನುಗಾರಿಕಾ ಸಂಘದ ನೇತೃತ್ವದಲ್ಲಿ ಮೀನುಗಾರರ ವಿವಿಧ ಸಂಘಟನೆಯೊಂದಿಗೆ ಈ ಬಗ್ಗೆ ಚರ್ಚಿಸಿ ಆಳಸಮುದ್ರ ಮೀನುಗಾರಿಕೆ ಪ್ರಾರಂಭಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಅವರು ಸುದ್ದಿಗಾರ ರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಈಗಾಗಲೇ ಆಳಸಮುದ್ರ ಮೀನುಗಾರಿಕೆಯ ಬೋಟುಗಳು ಸಮುದ್ರಕ್ಕೆ ತೆರಳಿವೆ. ಮೀನುಗಾರಿಕೆಗಾಗಿ ಬಂದರಿನ ಬೇಸಿನ್‌ನ್ನು ಖಾಲಿ ಮಾಡಲಾಗಿದೆ. ಅಲ್ಲಿ 100 ಬೋಟುಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ 100 ಬೋಟುಗಳಿಗೆ ಮಾತ್ರ ಬಂದರಿಗೆ ಮರಳಿ ಮೀನು ಖಾಲಿ ಮಾಡಲು ಅವಕಾಶ ನೀಡಲಾಗುತ್ತದೆ ಎಂದರು.
ಮೀನು ಖಾಲಿ ಮಾಡುವ ವೇಳೆ ಸುರಕ್ಷತಾ ಅಂತರ ಕಾಪಾಡಲು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಆದರೆ ಬಂದರಿನೊಳಗೆ ಮೀನು ಹರಾಜು ನಡೆಸಲು ಹಾಗೂ ಮಾರಾಟ ಮಾಡಲು ಅವಕಾಶವಿಲ್ಲ. ಅದನ್ನು ಹೊರಗೆ ಮಾಡಬೇಕಾಗುತ್ತದೆ ಎಂದು ಶಾಸಕರು ತಿಳಿಸಿದರು.
ಈ ಮೊದಲು ಮೀನಿನ ವಿತರಣೆಗೆ ಬೆಳಗ್ಗೆ ಮಾತ್ರ ಅವಕಾಶವಿದ್ದು, ಈಗ ಅದನ್ನು ದಿನವಿಡೀ ವಿಸ್ತರಿಸಲಾಗಿದೆ. ಇದಕ್ಕಾಗಿ ನೂಕುನುಗ್ಗಲು ಆಗದಂತೆ ಹಾಗೂ ಸುರಕ್ಷತಾ ಅಂತರಕ್ಕೆ ಸಮಸ್ಯೆಯಾಗದಂತೆ ಈ ಕ್ರಮಕೈಗೊಳ್ಳಲಾಗಿದೆ. ಇದರ ಜವಾಬ್ದಾರಿಯನ್ನು ಮಲ್ಪೆ ಮೀನುಗಾರರ ಸಂಘಕ್ಕೆ ವಹಿಸಿದ್ದೇವೆ. ಅವರು ಪಾಳಿಯಲ್ಲಿ ಈ ಕರ್ತವ್ಯ ನಿಭಾಯಿಸಲಿದ್ದಾರೆ ಎಂದರು.
ಬಂದರಿನೊಳಗೆ ಪಾರ್ಕ್ ಮಾಡಿರುವ ಎಲ್ಲಾ ಬೋಟುಗಳನ್ನು ಖಾಲಿ ಮಾಡಲು ತಿಳಿಸಲಾಗಿದೆ. ಬಂದರಿನ ಒಳಗೆ ಬೇಸಿನ್‌ನಲ್ಲಿ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಬೋಟುಗಳು ಬಂದು ಮೀನು ಖಾಲಿ ಮಾಡಿ ತಕ್ಷಣ ನಿರ್ಗಮಿಸಲು, ಅನಂತರವೇ ಮತ್ತೂಂದು ಬೋಟು ಒಳಗೆ ಬರಲು ತಿಳಿಸಲಾಗಿದೆ.
ಬಂದರಿನಲ್ಲಿ ಸುರಕ್ಷಿತ ಅಂತರ, ಮಾಸ್ತ್, ಸ್ಯಾನಟೈಸರ್ ಕಡ್ಡಾಯ ಗೊಳಿಸಲಾಗಿದೆ. ಇದನ್ನು ಹೋಮ್‌ಗಾರ್ಡ್ಸ್ ಹಾಗೂ ಸಂಘದ ಸದಸ್ಯರು ನೋಡಿಕೊಳ್ಳಲಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು.