Advertisement

ಡೀಮ್ಡ್ ಫಾರೆಸ್ಟ್‌; ಸ್ಥಳ ಪರಿಶೀಲಿಸಿ ವರದಿ ನೀಡಲು ಸಚಿವ ಲಿಂಬಾವಳಿ ಸೂಚನೆ

09:04 PM Apr 23, 2021 | Team Udayavani |

ಮಂಗಳೂರು: ಅರಣ್ಯ ಇಲಾಖೆಯ ಮಂಗಳೂರು ವೃತ್ತದ ವ್ಯಾಪ್ತಿಗೆ ಬರುವ ಡೀಮ್ಡ್ ಫಾರೆಸ್ಟ್‌ ಕುರಿತಂತೆ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವಾಸ್ತವಿಕ ವರದಿ ನೀಡಿದಾಗ ಮಾತ್ರ ಸರಿಯಾದ ಕ್ರಮ ವಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಬೇಕು ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಶುಕ್ರವಾರ ಮಂಗಳೂರಿಗೆ ಭೇಟಿ ನೀಡಿದ ಅವರು ಮಂಗಳೂರು ವೃತ್ತದ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಸಮೃದ್ಧ ಅರಣ್ಯ ಪ್ರದೇಶ ಹೊಂದಿದ್ದು ಇಲ್ಲಿ ಅರಣ್ಯ ಅಭಿವೃದ್ಧಿಗೆ ಹೇರಳ ಅವಕಾಶವಿದೆ. ಮೂರು ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿಕೊಂಡ ಪ್ರಕರಣಗಳನ್ನು ಸಾಧ್ಯವಾದಷ್ಟು ಬೇಗ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು.

ಮಾನವ ವನ್ಯಜೀವಿ ಸಂಘರ್ಷದ ಪರಿಹಾರ ನೀಡುವ ಕ್ರಮ ನಿಧಾನಗತಿಯಲ್ಲಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಪರಿಹಾರನ್ನು ಶೀಘ್ರವಾಗಿ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ :ಅಕ್ರಮವಾಗಿ ರೆಮ್ ಡಿಸಿವಿಯರ್ ಇಂಜೆಕ್ಷನ್‌ ಮಾರಾಟ : ಸ್ಟಾಫ್ ನರ್ಸ್ ಸೇರಿ ಮೂವರ ಬಂಧನ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೀಸಲು ಅರಣ್ಯ ಪ್ರದೇಶದಲ್ಲಿ ಇರುವವರನ್ನು ಸ್ಥಳಾಂತರ ಮಾಡುವ ಬಗ್ಗೆ ಇಲಾಖೆ ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ಪಡೆದ ಸಚಿವ ಅರವಿಂದ ಲಿಂಬಾವಳಿ, ಜನರಿಗೆ ಪುನರ್ವಸತಿ ಕಲ್ಪಿಸಲು ಬೇಕಾದ ಹಣಕಾಸಿನ ಬಗ್ಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

Advertisement

ಗೇರು ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಚಟುವಟಿಕೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಮಂಗಳೂರು ವೃತ್ತ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಎಸ್‌. ನೆಟಾಲ್ಕರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ವಿ. ಕರಿಕಾಲನ್‌, ಮಂಗಳೂರು ರೇಂಜ್‌ ಫಾರೆಸ್ಟ್‌ ಆಫೀಸರ್‌ ಪಿ.ಶ್ರೀಧರ್‌, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್‌. ಸುಬ್ರಹ್ಮಣ್ಯ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next