ಬೆಂಗಳೂರು: ಕೇಂದ್ರ ಸರಕಾರಿ ಸ್ವಾಮ್ಯದ ಹಿಂದೂಸ್ತಾನ್ ಎರೋನಾಟಿಕ್ ಲಿ.ನ (ಎಚ್‌ಎಲ್) “ರೋಲ್ ಛೇಂಜರ್’ ಎಂದೇ ಹೇಳಲಾಗುತ್ತಿರುವ ಸ್ವದೇಶಿ ನಿರ್ಮಿತ ಹಾಕ್ ಯುದ್ಧ ವಿಮಾನದ ಉನ್ನತೀಕರಿಸಿದ ಹಾಕ್- ಐ ಯುದ್ಧ ವಿಮಾನ ಮತ್ತು 5.8 ಟನ್ ಸಾಮರ್ಥ್ಯದ ತೈಟ್ ಕೋಂಬ್ಯಾಟ್ ಹೆಲಿಕಾಪ್ಟರ್‌ಗಳನ್ನು ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ ಶನಿವಾರ ಲೋಕಾರ್ಪಣೆ ಮಾಡಿದ್ದಾರೆ.
ಎಚ್‌ಎಎಲ್ ಆವರಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಅರುಣ್ ಜೇಟ್ಲಿ ಅವರು ಹಾಕ್- ಐ (ಹಾಕ್ ಇಂಡಿಯಾ) ಯುದ್ಧ ವಿಮಾನ ಲೋಕಾ ರ್ಪಣೆ ಮಾಡಿದ್ದು, ಇದು ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದ್ದು, ಹಾರ್ಡ್‌ವೇರ್ ಮತ್ತು ಸಾಫ್ಟ್ ವೇರ್‌ಗಳನ್ನೂ ದೇಶೀಯವಾಗಿಯೇ ಅಭಿವೃದ್ಧಿ ಪಡಿಸಲಾಗಿದೆ. ಜೆಟ್ ಟ್ರೈನರ್ ಆಗಿದ್ದ ಹಾಕ್ ಯುದ್ಧವಿಮಾನವನ್ನು ಯುದ್ಧಕ್ಕೆ ಸಿದ್ಧವಾದ ರೀತಿಯಲ್ಲಿ ಉನ್ನತೀಕರಿಸಲಾಗಿದೆ.
ಮೂಲ ಹಾಕ್ ವಿಮಾನದಲ್ಲಿ ಇಲ್ಲದ ಹೆಚ್ಚುವರಿ ಸಾಮರ್ಥ್ಯ ಹಾಕ್-ಐ ವಿಮಾನದಲ್ಲಿದೆ. ಹೆಚ್ಚು ಶಕ್ತಿಶಾಲಿ ಎಂಜಿನ್, ರಡಾರ್ ವ್ಯವಸ್ಥೆ, ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಇದು ಹೊಂದಿದೆ. ಗಾಳಿಯಿಂದ ಭೂಮಿಗೆ ಅತಿ ಹತ್ತಿರದಿಂದ ದಾಳಿ ಮಾಡುವ ಹಾಕ್- ಐ, ಸ್ವಯಂ ರಕ್ಷಣೆ ಸಾಧನವನ್ನೂ ಹೊಂದಿದೆ.ಈ ಸಂದರ್ಭ ಮಾತನಾಡಿದ ಅರುಣ್ ಜೇಟ್ಲಿ, ಕೇಂದ್ರದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರಕಾರ ಅಧಿ ಕಾರಕ್ಕೆ ಬಂದ ಮೇಲೆ ರಕ್ಷಣಾ ಕ್ಷೇತ್ರದ ಸಂಶೋಧನೆ, ತಂತ್ರಜ್ಞಾನದಲ್ಲಿ ಭಾರತ ಮುಂಚೂಣಿಯಲ್ಲಿದೆ. ಈ ಹಿಂದೆ ರಕ್ಷಣಾ ಸಾಮಗ್ರಿಗಳ ಖರೀದಿದಾರನಾಗಿದ್ದ ಭಾರತ ಈಗ ಅವುಗಳ ಉತ್ಪಾದಕ ರಾಷ್ಟ್ರವಾಗಿ ಬದ ಲಾಗಿದೆ. ದೇಶೀಯ ಬಳಕೆಗೆ ಮಾತ್ರವಲ್ಲದೆ, ಅವುಗಳನ್ನು ರಫ್ತು ಮಾಡುವಷ್ಟರ ಮಟ್ಟಿಗೆ ದೇಶದ ರಕ್ಷಣಾ ವ್ಯವಸ್ಥೆ ಸದೃಢವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ವಾಮ್ಯದ ಕಂಪೆನಿಗಳ ಸಾಧನೆ ಶ್ಲಾಘನೀಯ ಎಂದರು.
ನಮ್ಮ ಎಲ್ಲ ಸಂಪನ್ಮೂಲಗಳನ್ನು ಬಳಸಿ ದೇಶೀಯ ವಾಗಿಯೇ ರಕ್ಷಣಾ ಸಾಧನಗಳನ್ನು ಉತ್ಪಾದಿಸುವ ಸಂಪೂರ್ಣ ಸಾಮರ್ಥ್ಯ ಭಾರತಕ್ಕಿದೆ. ಈ ಕಾರಣಕ್ಕಾಗಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ರಕ್ಷಣಾ ಕ್ಷೇತ್ರದಲ್ಲಿ ಖಾಸಗಿಯವರಿಗೂ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಅವಕಾಶ ನೀಡಲಾಗಿದೆ. ಆ ಮೂಲಕ ದೇಶದ ಭದ್ರತೆಯ ವಿಚಾರದಲ್ಲಿ ಭಾರತ ಸ್ವಾಯತ್ತತೆ ಯತ್ತ ಹೆಜ್ಜೆ ಹಾಕುತ್ತಿದೆ ಎಂದರು.
ಪ್ರಸ್ತುತ ಭಾರತದ ಅಕ್ಕಪಕ್ಕದಲ್ಲಿರುವ ರಾಷ್ಟ್ರಗಳು ದೇಶದ ಮೇಲೆ ಆಕ್ರಮಣಶೀಲತೆಯ ಮಾತುಗಳನ್ನು ಆಡುವುದರ ಜತೆಗೆ ಅಂತಹ ಚಟುವಟಿಕೆಗಳಲ್ಲಿ ತೊಡಗಿವೆ. ಆದರೆ, ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯ ರಾಷ್ಟ್ರಕ್ಕೆ ಇದೆ. ಹೀಗಾಗಿ ದೇಶದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.