ಹನೂರು: ಅಸಂಖ್ಯಾತಭಕ್ತರ ಪಾಲಿನ ದೈವ “ಮಾಯ್ಕರ” ಮಾದಪ್ಪನ ನೆಲದಲ್ಲಿ ಮುಗಿಲೆತ್ತರದಲ್ಲಿ 108 ಅಡಿ ಎತ್ತರದ ಮಾದಪ್ಪನ ಪ್ರತಿಮೆ ಸಿದ್ಧಗೊಂಡಿದ್ದು ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಲೆ ಮಾದಪ್ಪನ ಸನ್ನಿಧಿಯ ದಕ್ಷಿಣ ಭಾಗದಲ್ಲಿನ ದೀಪದಗಿರಿಒಡ್ಡು ಪ್ರದೇಶದಲ್ಲಿ ಮಹದೇಶ್ವರರ ಬೃಹತ್ ಪ್ರತಿಮೆ ತಲೆಯೆತ್ತಿದೆ. 2016ರ ಸೆಪ್ಟೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅನುದಾನ ಬಿಡುಗಡೆಗೊಳಿಸಿ ಪ್ರತಿಮೆ ಕಾಮಗಾರಿಗೆ ಚಾಲನೆ ನೀಲಾಗಿತ್ತು. ಬಳಿಕ ಪ್ರತಿಮೆಗೆ ಅಗತ್ಯವಾದ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿನ ತೊಡಕಿನಿಂದಾಗಿ ಪ್ರತಿಮೆ ನಿರ್ಮಾಣ ಕಾಮಗಾರಿ ನನೆಗುದಿಗೆ ಬಿದ್ದು, ಬರೋಬ್ಬರಿ ಎರಡೂವರೆ ವರ್ಷಗಳ ಬಳಿಕ ಮತ್ತೂಮ್ಮೆ 2019ರ ಫೆಬ್ರವರಿಯಲ್ಲಿ ಪ್ರಾಧಿಕಾರದ ಅಂದಿನ ಕಾರ್ಯದರ್ಶಿಗಳಾಗಿದ್ದ ಗಾಯಿತ್ರಿ ಅವರಿಂದ ಮತ್ತೂಮ್ಮೆ ಭೂಮಿಪೂಜೆ ನೆರವೇರಿಸಲಾಯಿತು. ಇದಾದ ಬಳಿಕ ಪ್ರತಿಮೆ ನಿರ್ಮಾಣ ಮತ್ತೂಮ್ಮೆ ನನೆಗುದಿಗೆ ಬಿದ್ದು ಒಂದು ವರ್ಷದ ಬಳಿಕ ಅಂದರೆ 2020ರ ಅಂತ್ಯದ ವೇಳೆಗೆ ಕಾಮಗಾರಿ ಪ್ರಾರಂಭಗೊಂಡು ಇದೀಗ ಪೂರ್ಣಗೊಂಡಿದ್ದು ಬರೋಬ್ಬರಿ 9 ವರ್ಷಗಳ ಬಳಿಕ ಭಕ್ತರಿಗೆ ದರ್ಶನ ನೀಡಲು ಮಾದಪ್ಪನ ಪ್ರತಿಮೆ ಸಿದ್ಧಗೊಂಡಿದೆ.
ಯಾವುದರಿಂದ ಪ್ರತಿಮೆ ನಿರ್ಮಾಣ
ಮಹದೇಶ್ವರರ ಪ್ರತಿಮೆ ನಿರ್ಮಾಣ ಸಂಪೂರ್ಣ ಕಾಂಕ್ರೀಟ್‌ನಿಂದ ನಿರ್ಮಾಣ ಗೊಂಡಿದ್ದು ನಿರ್ಮಾಣದ ಹೊಣೆಯನ್ನು ಬೆಂಗಳೂರಿನ ಪಿಎಸ್‌ಆರ್‌ಪಿ ಆರ್ಕಿಟೆಕ್ಟ್ ಕಂಪನಿ ಸಂಸ್ಥೆಗೆ ನೀಡಲಾಗಿತ್ತು. ಈ ಕಂಪನಿಯು ಹಿಂದೆಯೂ ಗದಗಿನಲ್ಲಿ 117 ಅಡಿ ಎತ್ತರದ ಬಸವೇಶ್ವರರ ಮೂರ್ತಿ ಮತ್ತು ರಾಮ್‌ದುರ್ಗದಲ್ಲಿ ಶಿವನ ಮೂರ್ತಿಯನ್ನು ಉತ್ತಮವಾಗಿ ನಿರ್ಮಾಣ ಮಾಡಿತ್ತು. ಈ ಹಿನ್ನೆಲೆ ಮಹದೇಶ್ವರರ ಪ್ರತಿಮೆಯ ನಿರ್ಮಾಣ ಹೊಣೆಯನ್ನೂ ನೀಡಲಾಗಿತ್ತು. ಒಟ್ಟು 24 ಕೋಟಿ ವೆಚ್ಚದ ಈ ಕಾಮಗಾರಿಗೆ ಇಲ್ಲಿವರೆಗೂ 16 ಕೋಟಿ ವೆಚ್ಚ ಮಾಡಲಾಗಿದ್ದು ಉಳಿದಿರುವ ಹಣದಲ್ಲಿ ಮ್ಯೂಸಿಯಂ ನಿರ್ಮಾಣ ಕಾಮಗಾರಿ ನಡೆಯಬೇಕಿದೆ. ಮಹದೇಶ್ವರರ ಪ್ರತಿಮೆ ನಿರ್ಮಾಣಕ್ಕೆ 3500 ಕ್ಯೂಬಿಕ್ ಮೀಟರ್ ಕಾಂಕ್ರೀಟ್, 500 ಟನ್‌ನಷ್ಟು ಕಬ್ಬಿಣ ಮತ್ತು 25-30 ಸಾವಿರ ಮೂಟೆಯಷ್ಟು ಸಿಮೆಂಟ್ ಬಳಸಲಾಗಿದೆ.
ಪ್ರತಿಮೆ ವಿಶೇಷವೇನು?
Related Articles
ಪ್ರತಿಮೆಯು 108 ಅಡಿ ಎತ್ತರದ್ದಾಗಿದ್ದು ಕೆಳಭಾಗದ 27 ಅಡಿಯಲ್ಲಿ ಬಂಡೆಯಾಕಾರದಲ್ಲಿ 2 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ 2 ಅಂತಸ್ತುಗಳಲ್ಲಿ ಮಲೆ ಮಹದೇಶ್ವರರ ಇತಿಹಾಸ ಮತ್ತು ಚರಿತ್ರೆಯನ್ನು ಸಾರುವಂತಹ ವಸ್ತು ಸಂಗ್ರಹಾಲಯ ತೆರೆಯಲು ನೀಲ ನಕ್ಷೆಗಳನ್ನು ಸಿದ್ಧಪಡಿಸಿದ್ದು ಕಾಮಗಾರಿ ಪ್ರಗತಿಯಲ್ಲಿದೆ. 27 ಅಂತಸಿನ ಬಂಡೆಯಾಕರದ ಮೇಲೆ 81 ಅಡಿ ಎತ್ತರದ ಹುಲಿಯ ಮೇಲೆ ಮಹದೇಶ್ವರರು ಕುಳಿತಿರುವಂತಹ ಸುಂದರವಾದ ಮೂರ್ತಿನಿರ್ಮಾಣವಾಗಿದೆ.
ಪ್ರತಿಮೆ ನಿರ್ಮಾಣ ಕಾಮಗಾರಿ ಮುಕ್ತಾಯವಾಗಿದ್ದು, ಮ್ಯೂಸಿಯಂ ನಿರ್ಮಾಣದ ಬಗ್ಗೆ ಸುತ್ತೂರು ಶ್ರೀಗಳ ನೇತೃತ್ವದ ಸಮಿತಿಯಲ್ಲಿ ಕೆಲವೊಂದು ಚರ್ಚೆಗಳು ನಡೆಯಬೇಕಿದ್ದು, ಮ್ಯೂಸಿಯಂ ಒಳಭಾಗದ ವಿನ್ಯಾಸದ ಬಗ್ಗೆ ಅಂತಿಮವಾದ ಒಂದು ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳಿಸಲಾಗುವುದು.
● ಪಾಟೀಲ್, ಪಿಎಸ್‌ಆರ್‌ಪಿ ಸಂಸ್ಥೆಯ ಮುಖ್ಯಸ್ಥ
ಪ್ರತಿಮೆ ಅನಾವರಣಕ್ಕೆ ಭಕ್ತರಿಂದ ವ್ಯಾಪಕ ವಿರೋಧ, ಆಕ್ರೋಶ
ಮಹದೇಶ್ವರರ ಪ್ರತಿಮೆ ಅನಾವರಣಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಸರ್ಕಾರ ರಾಜಕೀಯ ಲಾಭಕ್ಕಾಗಿ ಅಪೂರ್ಣ ಕಾಮಗಾರಿ ಲೋಕಾರ್ಪಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಭಕ್ತರು ಕಿಡಿಕಾರಿದ್ದಾರೆ. ಮಹದೇಶ್ವರರ ಪ್ರತಿಮೆ ಪೀಠದಲ್ಲಿ 2 ಅಂತಸ್ತಿನ ಬಂಡೆಯಾಕಾರದ ಕಟ್ಟಡವಿದ್ದು ಅದರಲ್ಲಿ ಮ್ಯಾಸಿಯಂ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕೂ ಮುನ್ನವೇ ಪ್ರತಿಮೆ ಅನಾವರಣಕ್ಕೆ ಮುಂದಾಗಿರುವುದು ರಾಜಕೀಯ ಲಾಭಕ್ಕಾಗಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಪ್ರತಿಮೆಯ ಸುತ್ತಲು ಭಕ್ತಾದಿಗಳ ಸುರಕ್ಷತೆಗಾಗಿ ಯಾವುದೇ ಕ್ರಮ ಕೈಗೊಂಡಿಲ್ಲ, ಈಗಾಗಲೇ ಪ್ರತಿಮೆಯ ಒಂದು ಬದಿಯಲ್ಲಿ ಮಣ್ಣು ಕುಸಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಲತಾಣದಲ್ಲಿ ಕೆಲವು ಭಕ್ತರು ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರೆ ಮಾದಪ್ಪನ ಹೆಸರು ರಾಷ್ಟ್ರೀಯ- ಅಂತಾರಾಷ್ಟೀಯ ಮಟ್ಟದಲ್ಲಿ ಪ್ರಜ್ವಲಿಸುತಿತ್ತು ಎಂದಿದ್ದಾರೆ. ಇನ್ನೂ ಕೆಲವು ಭಕ್ತರು ರಾಯಣ್ಣ, ದುಂಡಮ್ಮ, ಸರಗೂರಯ್ಯ ಅಥವಾ ಆಲಂಬಾಡಿ ಜುಂಜೇಗೌಡರ ವಂಶಸ್ಥರು, ಪ್ರತಿಮೆ ನಿರ್ಮಾಣಕ್ಕೆ ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ದಿ.ಮಹದೇವ ಪ್ರಸಾದ್ ಅವರ ಕುಟುಂಬಸ್ಥರನ್ನು ಆಹ್ವಾನಿಸಬೇಕಿತ್ತು ಎಂದಿದ್ದಾರೆ. ಇನ್ನು ಕೆಲವರು ಕಾರ್ಯಕ್ರಮ ಆಯೋಜನೆ ಮಾಡಿರುವ ದಿನದ ಬಗ್ಗೆ ವ್ಯಂಗ್ಯವಾಡಿದ್ದು ಮಹದೇಶ್ವರರ ಪ್ರಿಯವಾದ ಸೋಮವಾರ, ಶುಕ್ರವಾರ ಬಿಟ್ಟು ಶನಿವಾರ ಕಾರ್ಯಕ್ರಮ ಆಯೋಜನೆ ಮಾಡಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಭಕ್ತಾದಿಗಳ ದರ್ಶನಕ್ಕೆ ಅವಕಾಶ: ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳು ಮಲೆ ಮಹದೇಶ್ವರರ 108 ಅಡಿ ಎತ್ತರದ ಪ್ರತಿಮೆ ವೀಕ್ಷಣೆಗೆ ಈಗಾಗಲೇ ತೆರಳಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೆ ವೀಕ್ಷಣೆಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ಅಗತ್ಯ ಮೂಲ ಸೌಕರ್ಯವನ್ನು ಕಲ್ಪಿಸಿಲ್ಲ. ಶ್ರೀ ಕ್ಷೇತ್ರದ ದೇವಾಲಯದಿಂದ ಪ್ರತಿಮೆಯಿರುವ ಸ್ಥಳಕ್ಕೆ ಅಂದಾಜು 1.5 ಕಿ.ಮೀ ದೂರವಿದ್ದು ಮಹದೇಶ್ವರ ಬೆಟ್ಟ-ಪಾಲಾರ್‌ರಸ್ತೆಯಿಂದ 700 ಮೀಟರ್ ದೂರವಿದೆ. ಈ ಸುಂದರ ಸ್ಥಳವನ್ನು ತಲುಪಲು ಭಕ್ತಾದಿಗಳ ಅನುಕೂಲಕ್ಕಾಗಿ 8 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್‌ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು ಇದೀಗ ಪ್ರಾರಂಭದ ಹಂತದಲ್ಲಿ ಗ್ರಾಹೋಲ್ ರಸ್ತೆಯನ್ನು ಮಾತ್ರ ನಿರ್ಮಾಣ ಮಾಡಲಾಗಿದ್ದು ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ದಿವ್ಯಾಂಗರ ವೀಕ್ಷಣೆಗೆ ಅಗತ್ಯವಾದಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.
~ವಿನೋದ್. ಎಸ್. ಗೌಡ