ಬೆಂಗಳೂರು: ಲಾಕ್‌ಡೌನ್ ಸಮಯದಲ್ಲಿ ಭರ್ಜರಿ ವಹಿವಾಟು ನಡೆಸಿದ್ದ ಹಾಪ್ ಕಾಮ್ಸ್‌ನ ವಹಿವಾಟಿನಲ್ಲಿ ಇದೀಗ ಇಳಿಕೆ ಕಂಡು ಬಂದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಹಾಪ್‌ಕಾಮ್ಸ್ ಪ್ರತಿ ನಿತ್ಯ 95 ರಿಂದ 100 ಟನ್‌ವರೆಗೂ ಹಣ್ಣು ಮತ್ತು ತರಕಾರಿ ಮಾರಾಟವಾಗುತ್ತಿತ್ತು. ಮೂರು ತಿಂಗಳಲ್ಲಿ ಸುಮಾರು 34 ಕೋಟಿ ರೂ. ವಹಿವಾಟು ನಡೆಸಿತ್ತು. ಆದರೆ ಲಾಕ್‌ಡೌನ್ ತೆರವುಗೊಂಡ ನಂತರ ಇದ್ದಕ್ಕಿದ್ದಂತೆ ಕಳೆದ ಒಂದು ತಿಂಗಳಿನಿಂದ ವಹಿವಾಟಿನಲ್ಲಿ ಕುಸಿತ ಕಂಡಿದೆ.
ಹಾಪ್‌ಕಾಮ್ಸ್‌ನಲ್ಲಿ ಪ್ರತಿ ನಿತ್ಯ ಸಾಮಾನ್ಯವಾಗಿ 20 ರಿಂದ 25 ಲಕ್ಷ ರೂ.ವಹಿವಾಟು ನಡೆಯುತ್ತಿತ್ತು.ಈಗ ಅದು 18 ಲಕ್ಷ ರೂ ನಿಂದ 20 ಲಕ್ಷ ರೂ.ಗೆ ತಲುಪಿದೆ. ಈ ಮಧ್ಯೆ, ಲಾಕ್‌ಡೌನ್‌ಗೂ ಮೊದಲು ಹಾಪ್‌ಕಾಮ್ಸ್ ಬೆಂಗಳೂರು ಸುತ್ತಮುತ್ತ ಇರುವ ಹಲವು ಕೈಗಾರಿಕೆಗಳಿಗೆ ಹಣ್ಣು ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಪ್ರತಿ ತಿಂಗಳು 1.6 ಕೋಟಿ ರೂ.ವಹಿವಾಟು ನಡೆಯುತ್ತಿತ್ತು. ಆದರೆ ಲಾಕ್ ಡೌನ್ ಸಂದರ್ಭದಲ್ಲಿ ಮುಚ್ಚಿದ್ದ ಕಾರ್ಖಾನೆಗಳು ಕೆಲವೆಡೆ ಇನ್ನೂ ಕಾರ್ಯಾರಂಭ ಮಾಡಿಲ್ಲ. ಹೀಗಾಗಿಯೇ ಅಲ್ಲಿಯೂ ವಹಿವಾಟು ಕಡಿಮೆಯಾಗಿದೆ.
ಈ ಹಿಂದೆ ಹಾಪ್‌ಕಾಮ್ಸ್ ಸಂಸ್ಥೆ ಇನ್ ಫೋಸಿಸ್ ಸೇರಿದಂತೆ ಹಲವು ಕಾರ್ಪೋರೆಟ್ ಸಂಸ್ಥೆಗಳಲ್ಲಿ ತನ್ನ ಮಾರಾಟ ಮಳಿಗೆಗಳನ್ನು ತೆರೆದಿತ್ತು. ಆದರೆ ಈಗ “ವರ್ಕ್ ಫ್ರಮ್ ಹೋಮ್’ ಆರಂಭವಾದ ಹಿನ್ನೆಲೆಯಲ್ಲಿ ಕಾರ್ಪೋರೆಟ್ ಸಂಸ್ಥೆಗಳಲ್ಲಿರುವ ಮಳಿಗೆಗಳೂ ಬಂದ್ ಆಗಿವೆ. ಅದೇ ರೀತಿ , ಲಾಕ್‌ಡೌನ್ ತೆರವು ನಂತರ ಕಬ್ಬನ್ ಪಾರ್ಕ್, ಲಾಲ್‌ಬಾಗ್ ಸೇರಿದಂತೆ ನಗರದ ಉದ್ಯಾನಗಳ ಸಮೀಪ ಇದ್ದ ಮಳಿಗೆಗಳು ಕಾರ್ಯಾರಂಭ ಮಾಡಿವೆ. ಆದರೆ ಕೋವಿಡ್ ಭಯದಿಂದ ಜನತೆ ಉದ್ಯಾನಗಳತ್ತ ಸುಳಿಯದ ಕಾರಣ ಹಣ್ಣು-ತರಕಾರಿ ಹೆಚ್ಚು ಮಾರಾಟವಗುತ್ತಿಲ್ಲ. ಮಳೆ ಹಿನ್ನೆಲೆಯಲ್ಲಿ ಜನ ಹೊರಗೆ ಬರುತ್ತಿಲ್ಲ. ಈ ಎಲ್ಲ ಕಾರಣಗಳಿಂದ ವಹಿವಾಟು ಇಳಿಕೆ ಕಂಡಿದೆ ಎಂದು ಹಾಪ್ ಕಾಮ್ಸ್‌ನ ಮಾರಾಟ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸುತ್ತಾರೆ.
ಮಳೆ ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ ಕಳೆದ ಒಂದು ತಿಂಗಳಿಂದ ಹಾಪ್‌ಕಾಮ್ಸ್ ವಹಿವಾಟಿನಲ್ಲಿ ತುಸು ಇಳಿಕೆ ಆಗಿದೆ. ನವೆಂಬರ್ ಮೊದಲ ವಾರದಲ್ಲಿ ಇದು ಸರಿದಾರಿಗೆ ಬರುವ ನಿರೀಕ್ಷೆಯಿದೆ.
–ಬಿ.ಎನ್.ಪ್ರಸಾದ್, ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ