ಚಿಕ್ಕಮಗಳೂರು: ನಕ್ಸಲ್ ಪ್ರದೇಶಗಳೆಂದು ಗುರುತಿಸಿಕೊಂಡ ಪ್ರದೇಶಗಳಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸಿದ್ದು ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಸಂಖ್ಯೆಯಲ್ಲಿ ಕಡಿತಗೊಳಿಸಲು ಸರ್ಕಾರ ಮುಂದಾಗಿದ್ದು ನಕ್ಸಲ್ ನಿಗ್ರಹ ಪಡೆಯಲ್ಲಿದ್ದ ಸಿಬ್ಬಂದಿಗಳಲ್ಲಿ ಕೆಲವರು ಮಾತೃ ಇಲಾಖೆಗೆ ಮರಳಲು ಸಜ್ಜಾಗುತ್ತಿದ್ದಾರೆ.
ಈ ಹಿಂದೆ ಮಲೆನಾಡಿನ ಅರಣ್ಯದಂಚಿನಲ್ಲಿ ನಕ್ಸಲ್ ಚಟುವಟಿಕೆ ಕಾಣಿಸಿಕೊಂಡು ತೀವ್ರಗೊಳ್ಳುತ್ತಿದ್ದಂತೆ ಸರ್ಕಾರ 2005ರಲ್ಲಿ ನಕ್ಸಲ್ ನಿಗ್ರಹ ಪಡೆ ರಚಿಸಿತು. ಹಿರಿಯ ಐಪಿಎಸ್ ಅಧಿಕಾರಿ ಮಧುಕರ ಶೆಟ್ಟಿ ನಕ್ಸಲ್ ನಿಗ್ರಹ ಪಡೆಯ ಮೊದಲ ಎಸ್ಪಿಯಾಗಿ ನೇಮಕಗೊಂಡಿದ್ದರು.
ನಕ್ಸಲ್ ನಿಗ್ರಹ ಪಡೆಗೆ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡು ಅವರಿಗೆ ವಿಶೇಷ ತರಬೇತಿ ನೀಡಿ ಕಾಡಿನಲ್ಲಿ ಕೂಬಿಂಗ್ ಕಾರ್ಯಾಚರಣೆ ನಡೆಸಲಾಗಿತ್ತು. ನಕ್ಸಲ್ ಚಟುವಟಿಕೆಗೆ ಕಡಿವಾಣ ಹಾಕಲು ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯಲ್ಲಿ ಎಎನ್‌ಎಫ್ ತಂಡಗಳು ಕಾರ್ಯಾಚರಣೆ ಆರಂಭಿಸಿದವು.
ಮಲೆನಾಡಿನ ಕಾಡಂಚಿನಲ್ಲಿ ನಕ್ಸಲ್ ಚಟುವಟಿಕೆ ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ ಮೂರು ಜಿಲ್ಲೆಗಳಲ್ಲಿ 10 ಕ್ಯಾಂಪ್‌ಗ್ಳನ್ನು ತೆರೆಯಲಾಯಿತು. ಚಿಕ್ಕಮಗಳೂರು ಜಿಲ್ಲೆ ದ್ಯಾವಲಕೊಪ್ಪ, ಕಿಗ್ಗ, ಕೆರೆಕಟ್ಟೆ, ಜಯಪುರ, ಶಿವಮೊಗ್ಗ ಜಿಲ್ಲೆಯ ಆಗುಂಬೆ, ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಹೆಬ್ರಿ ಸೇರಿದಂತೆ ಇತರೆಡೆಗಳಲ್ಲಿ ಕ್ಯಾಂಪ್ ಆರಂಭಗೊಂಡಿತು. ಪ್ರತೀ ಕ್ಯಾಂಪ್‌ನಲ್ಲಿ 30 ರಿಂದ 35 ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿತ್ತು. ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಿಸಲಾಗುತ್ತಿತ್ತು. ನಕ್ಸಲ್ ನಿಗ್ರಹ ಪಡೆ ಮಲೆನಾಡಿನ ಕಾಡಂಚಿನಲ್ಲಿ ಕಾರ್ಯಾಚರಣೆಗೆ ಇಳಿದ ಮೇಲೆ ಹಲವೆಡೆ ನಕ್ಸಲರು ಮತ್ತು ಎಎನ್ ಎಫ್ ತಂಡಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಅನೇಕ ನಕ್ಸಲರು ನಕ್ಸಲ್ ನಿಗ್ರಹ ಪಡೆಯ ಗುಂಡೇಟಿಗೆ ಪ್ರಾಣ ಕಳೆದುಕೊಂಡಿದ್ದಾರೆ.
ಜಿಲ್ಲೆಯ ಮೆಣಸಿನಹಾಡ್ಯ ಒಡೆಯರ ಮಠದಲ್ಲಿ 2007ರ ಜು.10 ರಂದು ಓರ್ವ ನಕ್ಸಲ್ ಸೇರಿದಂತೆ ನಾಲ್ವರು ಎಎನ್ ಎಫ್ ತಂಡಕ್ಕೆ ಬಲಿಯಾದರು. 2008 ನ. 20 ರಂದು ಹೊರನಾಡು ಸಮೀಪದ ಮಾವಿನಹೊಲದಲ್ಲಿ ನಕ್ಸಲ್ ಹೊಸ ತಂಡ ರಚನೆಯಾಗಿದ್ದು, ಮೂವರು ಗುಂಡಿನ ಚಕಮಕಿಯಲ್ಲಿ ಪ್ರಾಣ ಕಳೆದುಕೊಂಡರು.
ದಿನದಿಂದ ದಿನಕ್ಕೆ ನಕ್ಸಲ್ ನಿಗ್ರಹ ದಳದ ಕೂಬಿಂಗ್ ಕಾರ್ಯಾಚರಣೆ ಬಿರುಸುಗೊಳ್ಳುತ್ತಿದ್ದಂತೆ ನಕ್ಸಲ್ ಚಟುವಟಿಕೆ ನಿಧಾನವಾಗಿ ಕ್ಷೀಣಿಸಲು ಆರಂಭಿಸಿದ್ದು, ಮಲೆನಾಡಿನ ಕಾಡಂಚಿನಲ್ಲಿದ್ದ ನಕ್ಸಲರು ಕೇರಳದತ್ತ ಮುಖ ಮಾಡಿದರು. ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆ ಕ್ಷೀಣಿಸುತ್ತಿದ್ದಂತೆ ನಕ್ಸಲ್ ನಿಗ್ರಹ ತಂಡದ ಸಂಖ್ಯೆಯನ್ನು ಕಡಿತಗೊಳಿಸಲು ಸರ್ಕಾರ ಚಿಂತಿಸಿದೆ. 10 ತಂಡಗಳ ಸಂಖ್ಯೆಯನ್ನು 5 ತಂಡಕ್ಕೆ ಇಳಿಸಲು ಮುಂದಾಗಿದ್ದು, ಸಿಬ್ಬಂದಿ ಮಾತೃ ಇಲಾಖೆಗೆ ಮರಳಲಾರಂಭಿಸಿದ್ದಾರೆ ಎನ್ನಲಾಗುತ್ತಿದೆ.