ಕಲಬುರಗಿ: ಮುಂಬರುವ ನವೆಂಬರ್ ತಿಂಗಳಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹೈದ್ರಾಬಾದ್ ಕರ್ನಾಟಕ ವಿಮೋಚನೆ ಹೋರಾಟಗಾರ ಚನ್ನಬಸಪ್ಪ ಕುಳಗೇರಿ ಅವರ ಬದುಕು ಮತ್ತು ಹೋರಾಟದ ಕುರಿತು ಅಭಿನಂದನಾ ಗ್ರಂಥ ಹೊರ ತರಲು ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಸೇಡಂ ರಸ್ತೆಯಲ್ಲಿರುವ ಸಿದ್ಧಿಪ್ರಿಯ ಹೋಟೆಲ್‌ನಲ್ಲಿ ಶುಕ್ರವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸೊನ್ನದ ಡಾ|ಶಿವಾನಂದ ಮಹಾ ಸ್ವಾಮೀಜಿ, ಜೇವರ್ಗಿ ಶಾಸಕ ಡಾ|ಅಜಯಸಿಂಗ್ ನೇತೃತ್ವದಲ್ಲಿ ಈ ಕುರಿತು ಚರ್ಚಿಸಲಾಯಿತು.
ಚನ್ನಬಸಪ್ಪ ಅವರು ಸ್ವಾತಂತ್ರ್ಯ ಮತ್ತು ಹೈದ್ರಾಬಾದ್ ಕರ್ನಾಟಕದ ವಿಮೋಚನೆಯಲ್ಲಿ ಅನೇಕ ರೀತಿಯಲ್ಲಿ ಹೋರಾಟ ಮಾಡಿದ್ದರು. ಅವರ ನಿಲುವುಗಳಿಂದ ಈ ಭಾಗದಲ್ಲಿ ವಿಮೋಚನಾ ಹೋರಾಟ ಶಿಸ್ತುಬದ್ಧವಾಗಿ ಮತ್ತು ನಿರ್ಣಾಯಕವಾಗಿ ನಡೆಯಿತು. ಆದ್ದರಿಂದ ಅವರ ಜೀವನದ ರೋಚಕತೆ, ತಿಳಿವನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡುವ ನಿಟ್ಟಿನಲ್ಲಿ ಗ್ರಂಥ ಹೊರ ತರಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ನವೆಂಬರ್ ತಿಂಗಳಲ್ಲಿ ಗ್ರಂಥ ಬಿಡುಗಡೆ ಮಾಡಲು ಪಕ್ಷ ಬೇಧ ಮರೆತು ಶ್ರಮಿಸಲು ನಿರ್ಧರಿಸಲಾಯಿತು.
ಮಾಜಿ ಸಚಿವ ಎಸ್.ಕೆ. ಕಾಂತಾ, ಶಾಸಕರಾದ ಶರಣಬಸಪ್ಪ ದರ್ಶನಾಪೂರ, ಶಶೀಲ ನಮೋಶಿ, ಬಿ.ಜಿ. ಪಾಟೀಲ, ಮಾಜಿ ಶಾಸಕ ಅಲ್ಲಂ ಪ್ರಭು ಪಾಟೀಲ, ದೊಡ್ಡಪ್ಪಗೌಡ ನರಿಬೋಳಿ, ಹೋರಾಟಗಾರರಾದ ಲಕ್ಷ್ಮಣ ದಸ್ತಿ, ಶಿವನಗೌಡ ಪಾಟೀಲ ಹಂಗರಗಾ, ಮಕ್ಕಳ ಸಾಹಿತಿ ಏ.ಕೆ.ರಾಮೇಶ್ವರ, ಮರಲಿಂಗಪ್ಪ ಬಿಣ್ಣಿಕರೆ, ಎ.ಪಿ.ಎಮ್.ಸಿ, ನಿರ್ದೇಶಕ ಮಲ್ಲಿನಾಥ ಪಾಟೀಲ ಸೊಂತ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಶಿವಾನಂದ ಮಾನಕರ, ಕೈಲಾಸನಾಥ ದೀಕ್ಷಿತ್, ಸಾಹಿತಿ ಪತ್ರಕರ್ತರಾದ ಶ್ರೀನಿವಾಸ ಸಿರನೂರಕರ, ಕಾಂತಾಚಾರ್ಯ ಮಣೂರ, ಸಿರಾಜೊದ್ದೀನ ಆಂದೋಲಾ, ಅಶೋಕ ಗುರೂಜಿ ಲಿಂಗರಾಜಪ್ಪ, ಶರಣಬಸಪ್ಪ ಹರವಾಳ ಹಿರಿಯರಾದ ಬಸವರಾಜಪ್ಪ ಕಾಮರೆಡ್ಡಿ, ಎಂ.ಕೆ.ಪಾಟೀಲ ಕೆಲ್ಲೂರ, ಹಣಮಂತರಾಯ ಹೂಗಾರ, ಉಪನ್ಯಾಸಕರಾದ ವಿಜಯಕುಮಾರ ರೋಣದ, ಡಾ|ಕೆ.ಎಸ್.ಬಂಧು, ಡಾ|ಗಾಂ ಧೀಜಿ ಮೊಳಕೆರೆ, ಗಿರೀಶ ಗೌಡ ಇನಾಮದಾರ ಹಾಗೂ ಇನ್ನಿತರರು ಇದ್ದರು. ಕುಳಗೇರಿ ಅವರ ಪುತ್ರ ಅಮರನಾಥ ಕುಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎಸ್.ಪಾಟೀಲ ಸ್ವಾಗತಿಸಿ, ನಿರೂಪಿಸಿದರು, ಪಿ.ಎಸ್.ಪಾಟೀಲ ಬಳಬಟ್ಟಿ ವಂದಿಸಿದರು.