ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ರೀತಿಯಲ್ಲಿ ಗಣೇಶೋತ್ಸವ ಆಚರಿಸುವ ಸಂಬಂಧ ಆ.30ರಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಶನಿವಾರ ಮೈದಾನ ಪರಿಶೀಲಿಸಿ ಮಾತನಾಡಿದ ಅವರು, ಗಣೇಶೋತ್ಸವ ಕುರಿತು ಐದು ಅರ್ಜಿಗಳು ಬಂದಿದ್ದು, ಸಾರ್ವಜನಿಕರ ಭಾವನೆಗಳಿಗೆ ಸ್ಪಂದಿಸುವ ಬಗ್ಗೆ ಚರ್ಚಿಸಲಾಗುವುದು. ನಾವು ಚಕ್ರವ್ಯೂಹದ ನಡುವೆ ಇದ್ದೇವೆ ಎಂದು ಹೇಳಿದರು.
ಗಣೇಶೋತ್ಸವ ಸಂಬಂಧ ಕಂದಾಯ, ಬಿಬಿಎಂಪಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇನೆ. ನ್ಯಾಯಾಲಯದ ಆದೇಶವನ್ನೂ ಪರಿಶೀಲಿಸಲಾಗಿದೆ. ಬಂದೋಬಸ್ತ್ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಜತೆಯೂ ಚರ್ಚಿಸಲಾಗಿದೆ ಎಂದರು.
ಮೈದಾನದ ಮಾಲಕತ್ವ ವಿಚಾರ ವಾಗಿ ಮುಸ್ಲಿಂ ಸಂಘಟನೆಗಳು ಸುಪ್ರೀಂಕೋರ್ಟ್‌ಗೆ ಸೋಮವಾರ ಮೇಲ್ಮನವಿ ಸಲ್ಲಿಸದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು.ಮುಖ್ಯಮಂತ್ರಿಯವರು ಈ ಕುರಿತು ಸಭೆ ನಡೆಸಲು ಹೇಳಿದ್ದರು.
ಅದರಂತೆ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಗಣೇಶೋತ್ಸವ ಮಾಡುದಾದರೆ ಹೇಗೆ ಮಾಡಬೇಕು, ಏನೇನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಎಲ್ಲಿ ಕೂರಿಸಬೇಕು, ಮೆರವಣಿಗೆ ಎಲ್ಲಿಂದ ಸಾಗಬೇಕು ಪ್ರತಿಯೊಂದರ ಬಗ್ಗೆ ಸಮಾಲೋಚಿಸಲಾಗಿದೆ ಎಂದರು.