Advertisement

ಬಸವ ಉತ್ಸವ ಆಚರಣೆಗೆ ನಿರ್ಧಾರ

12:19 PM Jan 02, 2018 | Team Udayavani |

ಬಸವಕಲ್ಯಾಣ: ಬಸವವಾದಿ ಶರಣರ ಕಾರ್ಯ ಕ್ಷೇತ್ರ ಬಸವಕಲ್ಯಾಣದಲ್ಲಿ ರಾಜ್ಯ ಸರ್ಕಾರದಿಂದ ಫೆ.2ರಿಂದ ಮೂರು ದಿನಗಳ ಕಾಲ ಬಸವ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಣಯಿಸಲಾಯಿತು. ಉತ್ಸವ ನಿಮಿತ್ತ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಬಿಕೆಡಿಬಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

Advertisement

ಸಚಿವ ಈಶ್ವರ ಖಂಡ್ರೆ ಮಾತನಾಡಿ, ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ನಿಗದಿಪಡಿಸಿದ ದಿನಾಂಕಕ್ಕೆ ಸಿಎಂ ಸಮ್ಮತಿ ಸೂಚಿಸಿದಲ್ಲಿ ಈಗ ನಿಗದಿಪಡಿಸಿದ ದಿನಗಳಂದೇ ಉತ್ಸವ ನಡೆಯಲಿದೆ ಎಂದು ತಿಳಿಸಿದರು.

ಬಸವ ಭಕ್ತರ ಸಲಹೆ ಮತ್ತು ಶ್ರೀಗಳ ಮಾರ್ಗದರ್ಶನದೊಂದಿಗೆ ಉತ್ಸವದ ಸಿದ್ಧತೆ ನಡೆಸಲಾಗುವುದು. ಜಾತ್ಯತೀತ, ಪಕ್ಷಾತೀತವಾಗಿ ಎಲ್ಲರೂ ಸೇರಿ ಉತ್ಸವ ಆಚರಿಸಬೇಕು ಎನ್ನುವುದು ಎಲ್ಲರ ಉದ್ದೇಶವಾಗಿದೆ ಎಂದರು. 

ಮುಖಂಡ ವೈಜಿನಾಥ ಕಾಮಶೆಟ್ಟಿ ಮಾತನಾಡಿ, ಉತ್ಸವವನ್ನು ಯಾವುದೇ ಕಾರಣಕ್ಕೂ ಮುಂದೂಡಬಾರದು. ಫೆ.2ರಿಂದ ಮೂರು ದಿನಗಳ ಕಾಲ ಉತ್ಸವ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು. ಇದಕ್ಕೆ ಮುಖಂಡ ಕಾಶಪ್ಪ ಭಾಲಿಕಿಲೆ ಸೇರಿದಂತೆ ಇತರರು ಧ್ವನಿಗೂಡಿಸಿದರು.

ಬಸವಕಲ್ಯಾಣದಲ್ಲಿ ಪ್ರತಿ ವರ್ಷ ಉತ್ಸವ ನಡೆಯುವಂತಾಗಲು ಸರ್ಕಾರದಿಂದ ಅಧಿಕೃತ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖಂಡರಾದ ಕೇಶಪ್ಪ ಬಿರಾದಾರ, ಆನಂದ ದೇವಪ್ಪ, ವಿರುಪಾಕ್ಷ ಗಾದಗಿ ಅವರು ಸಲಹೆ ನೀಡಿದರು.

Advertisement

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯದ ತಾಯಿಬೇರಾದ ವಚನ ಸಾಹಿತ್ಯದ ಉತ್ಸವಕ್ಕೆ ಕಡಿಮೆ ಹಣ ನೀಡುವುದು ಸಮಂಜಸವಲ್ಲ. ಉತ್ಸವ ಆಚರಣೆಗೆ ಹೆಚ್ಚು ಅನುದಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಭಾತಂಬ್ರಾದ ಶ್ರೀ ಶಿವಯೋಗೇಶ್ವರ ಮಹಾಸ್ವಾಮೀಜಿ, ಶ್ರೀ ಸಿದ್ಧರಾಮ ಶರಣರು ಬೆಲ್ದಾಳ, ಡಾ| ಗಂಗಾಂಬಿಕಾ ಪಾಟೀಲ ಅವರು, ಬಸವ ಉತ್ಸವಕ್ಕೆ ಕನಿಷ್ಠ 5 ಕೋಟಿ ರೂ.ಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಬಿ.ನಾರಾಯಣರಾವ್‌, ಅನುಭವ ಮಂಟಪದ ಡಾ. ಬಸವಲಿಂಗ ಪಟ್ಟದ್ದೇವರು, ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ ಅವರು ಸಲಹೆ ಸೂಚನೆ ನೀಡಿದರು. ಖಾಜಾ ಜಿಯಾವುಲ್ಲಾ ಹಸನ್‌ ಜಾಗೀರದಾರ ಸೇರಿದಂತೆ ಸಭೆಯಲ್ಲಿ ಭಾಗವಹಿಸಿದ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖರು ಉತ್ಸವ ಕುರಿತು ಸಲಹೆ ನೀಡಿದರು.

ತ್ರಿಪುರಾಂತ ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಬೇಲೂರಿನ ಪಂಚಾಕ್ಷರಿ ಸ್ವಾಮೀಜಿ, ಜಿಪಂ ಉಪಾಧ್ಯಕ್ಷ ಡಾ. ಪ್ರಕಾಶ ಪಾಟೀಲ, ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ, ಜಿಪಂ ಸಿಇಒ ಡಾ| ಸೆಲ್ವಮಣಿ ಆರ್‌., ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಶರಣ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು, ನಾನಾ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತ ಶರಣಬಸಪ್ಪ ಕೊಟಪ್ಪಗೋಳ ಸ್ವಾಗತಿಸಿ, ವಂದಿಸಿದರು.

ಸರ್ಕಾರದಿಂದ ಅಧಿಸೂಚನೆಗೆ ಕ್ರಮ ಬಸವಕಲ್ಯಾಣದಲ್ಲಿ ಪ್ರತಿವರ್ಷ ಬಸವ ಉತ್ಸವ ನಡೆಯುವಂತೆ ಸರ್ಕಾರದಿಂದ ಅಧಿಸೂಚನೆ ಹೊರಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಟಿಪ್ಪಣಿ ತಯಾರಿಸಿ, ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ಪಡೆಯಲಾಗುವುದು. ಬಸವ ಉತ್ಸವ ಆಚರಣೆಗೆ ಸರ್ಕಾರದಿಂದ 1.10 ಕೋಟಿ ರೂ. ಅನುದಾನ ಕಲ್ಪಿಸಲಾಗುವುದು. ಈಗಾಗಲೇ 60 ಲಕ್ಷ ರೂ. ಬಿಡುಗಡೆಯಾಗಿದ್ದು, ಇನ್ನು ಹೆಚ್ಚುವರಿಯಾಗಿ 50 ಲಕ್ಷ ರೂ. ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉತ್ಸವಕ್ಕೆ ಅನುದಾನ ಕೊರತೆಯಿಲ್ಲ. ಎಲ್ಲರೂ ಒಗ್ಗೂಡಿ ಉತ್ಸವ ಆಚರಿಸೋಣ ಎಂದರು. ಹಂಪಿ ಉತ್ಸವ, ಕದಂಬ ಉತ್ಸವದ ಮಾದರಿಯಲ್ಲೇ ಈ ಉತ್ಸವ ಕೂಡ ನಿರಂತರ ನಡೆಯುವಂತಾಗಬೇಕು ಎಂದು ಮಠಾಧಿಧೀಶರು ಹಾಗೂ ಮುಖಂಡರು ಸಚಿವರಿಗೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next