Advertisement

ಶಿವ ಮೂರ್ತಿ ಸ್ಥಾಪನೆ ಖಚಿತ: ಖಾಶೆಂಪುರ

10:16 AM Jan 10, 2019 | Team Udayavani |

ಬೀದರ: ರಾಮಾಯಣ ಕಾಲದಿಂದ ಪಾಪನಾಶ ಪ್ರದೇಶ ಇತಿಹಾಸ ಹೊಂದಿದೆ. ಇಲ್ಲಿನ ಕೆರೆ ಕೂಡ ಅಷ್ಟೇ ಮಹತ್ವ ಪಡೆದುಕೊಂಡಿದೆ. ಖಂಡಿತವಾಗಿಯೂ ಕೆರೆಯಲ್ಲಿ ಶಿವನ ಮೂರ್ತಿ ಸ್ಥಾಪನೆ ಮಾಡಲಾಗುವುದು ಎಂದು ಸಹಕಾರ ಖಾತೆ ಸಚಿವ ಬಂಡೆಪ್ಪ ಖಾಶೆಂಪುರ ಸ್ಪಷ್ಟಪಡಿಸಿದರು.

Advertisement

ಪಾಪನಾಶ ಕೆರೆ ಅಭಿವೃದ್ಧಿ ವಿಷಯದಲ್ಲಿ ವಿವಾದಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಕ್ರೀಡಾ ಸಚಿವ ರಹೀಂಖಾನ್‌, ಜಿಲ್ಲಾಧಿಕಾರಿ ಡಾ| ಎಚ್.ಆರ್‌. ಮಹಾದೇವ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಬರ ಎದುರಾಗಿದೆ. ಕೆರೆಯಲ್ಲಿನ ನೀರು ಖಾಲಿ ಮಾಡುವುದು ಬೇಡ ಎಂದು ಅನೇಕರು ಒತ್ತಾಯಿಸಿದ್ದಾರೆ. ಆದರೆ, ಕೆಲವರು ಕೆರೆಯಲ್ಲಿನ ನೀರು ಅಶುದ್ಧವಾಗಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದಾಗಿದ್ದು, ಸದ್ಯ ಕೆರೆಯಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ, ಯಾವ ಕಾರಣಕ್ಕೆ ಚಂರಡಿ ನೀರು ಕೆರೆಗೆ ಬರುತ್ತಿದೆ. ಕೆರೆಯಲ್ಲಿನ ನೀರು ಶುದ್ಧೀಕರಣ ಮಾಡುವ ಕುರಿತು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಕೆರೆಯಲ್ಲಿನ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಾಪನಾಶ ಕರೆ ಸುತ್ತಲಿನ ಪ್ರದೇಶದಲ್ಲಿ ಉತ್ತಮ ಅರಣ್ಯ ಪ್ರದೇಶ ಇದೆ. ಸೂಕ್ತ ಸೌಕರ್ಯ ಕಲ್ಪಿಸಿದರೆ ಪ್ರವಾಸಿಗರ ತಾಣವಾಗುತ್ತದೆ. ಅಲ್ಲದೆ, ಪಾಪನಾಶ ದೇವಸ್ಥಾನ ಹಾಗೂ ನಗರದ ಚೌಬಾರ ಅಭಿವೃದ್ಧಿಗಾಗಿ ಕ್ರಿಯಾ ಯೋಜನೆ ತಯಾರಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಎರಡು ಕೋಟಿ ರೂ, ವೆಚ್ಚದ ಕ್ರಿಯಾ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು. ಕ್ರೀಡಾ ಖಾತೆ ಸಚಿವ ರಹೀಂಖಾನ್‌ ಮಾತನಾಡಿ, ಪಾಪನಾಶ ಕೆರೆ ಹಾಗೂ ದೇವಸ್ಥಾನ ಅಭಿವೃದ್ಧಿಗೆ ಶ್ರಮೀಸುತ್ತೇನೆ. ಮೂಲ ಸೌಲಭ್ಯ ಒದಗಿಸುವ ಜತೆಗೆ ಬೇಕಾಗುವ ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.

ಪುಣ್ಯ ಕ್ಷೇತ್ರವಾದ ಪಾಪನಾಶ ಕೆರೆಗೆ ವಿವಿಧ ಬಡಾವಣೆಗಳ ಚರಂಡಿ ನೀರು ಸೇರುತ್ತಿದೆ. ಕೆರೆ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಸಚಿವರು ಮುಂದಾಗಬೇಕು. ಕೆರೆ ಪಾಪ ನಾಶ ಮಾಡಬೇಕು ಎಂದು ಅನೇಕ ಜನರು ಒತ್ತಾಯಿಸಿದರು.

ಕೆರೆ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ಬಂಡೆಪ್ಪ ಖಾಶೆಂಪುರ ಕೆರೆ ಸಮೀಪದಲ್ಲಿ ನಿಂತು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಕೆರೆ ಸುತಲಿನ ಪ್ರದೇಶದಲ್ಲಿ ಕಸದ ರಾಶಿ ಹಾಗೂ ಗಬ್ಬು ವಾಸನೆ ಬರುತ್ತಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಮಾತನಾಡಿ, ಶಿವನ ಭಕ್ತರು ಅವರ ಹರಕೆ ಈಡೇರಿಸಿಕೊಳ್ಳಲು ವಿವಿಧ ಬಗೆಯ ಪೂಜೆ ಸಾಮಗ್ರಗಳನ್ನು ಕೆರೆಯಲ್ಲಿ ಹಾಕಿದ ಪರಿಣಾಮ ಕಸದ ರಾಶಿ ಹೆಚ್ಚಾಗಿದೆ ಎಂದು ಉತ್ತರಿಸಿದರು.

Advertisement

ಈ ಮಧ್ಯದಲ್ಲಿ ಶಿವಶರಣಪ್ಪ ವಾಲಿ ಮಾತನಾಡಿ, ವಿವಿಧ ಬಡಾವಣೆಗಳ ಕೊಳಚೆ ನೀರು ನೇರವಾಗಿ ಕೆರೆಗೆ ಬರುತ್ತಿದೆ. ಪುಣ್ಯ ಕರುಣಿಸಬೇಕಿರುವ ಕೆರೆ ಈಗ ಶಾಪ ನೀಡುವಂತಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಬಂಡೆಪ್ಪ ಖಾಶೆಂಪುರ, ಯಾವ ಕಾರಣಕ್ಕೆ ಚರಂಡಿ ನೀರು ಕೆರೆಗೆ ಬರುತ್ತಿದೆ. ಕೆರೆಯಲ್ಲಿನ ನೀರಿನ ಗುಣಮಟ್ಟ ಹೇಗಿದೆ. ನೀರಿನ ಪ್ರಮಾಣ ಎಷ್ಟೀದೆ ಎಂದು ಮುಂದಿನ 8 ದಿನಗಳಲ್ಲಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು.

ಚರಂಡಿ ನೀರು ಸ್ಥಳಾಂತರಿಸಿ ಕೆರೆಯಲ್ಲಿನ ನೀರಿನ ತಪಾಸಣೆ ನಡೆಸಿ ಅದರ ಆಧಾರದಲ್ಲಿ ತೀರ್ಮಾನ ತೆಗೆದುಕೊಂಡು ಕೆರೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜನರು ಆಗ್ರಹಿಸಿದರು. ಈಗಾಗಲೇ ಜಿಲ್ಲಾಡಳಿತ ತಯಾರಿಸಿದ ಕ್ರಿಯಾ ಯೋಜನೆ ಪ್ರಕಾರ ಇಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದರೆ ಪಾಪನಾಶ ಉತ್ತಮ ಪ್ರವಾಸಿ ತಾಣವಾಗಿ ಬೆಳೆಯುತ್ತದೆ. ಆದರೆ, ಬೇರೆ ಜಿಲ್ಲೆಯವರು ಬೀದರ ಅಭಿವೃದ್ಧಿಗೆ ಮಾರಕವಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆ ಉಂಟು ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಅಲ್ಲಿ ಕೇಳಿ ಬಂದವು.

Advertisement

Udayavani is now on Telegram. Click here to join our channel and stay updated with the latest news.

Next