Advertisement

ಸಮಗ್ರ ಪ್ರಗತಿಯತ್ತ ಭಾಲ್ಕಿ ತಾಲೂಕು: ಸಚಿವ ಖಂಡ್ರೆ

12:58 PM Jan 23, 2018 | Team Udayavani |

ಭಾಲ್ಕಿ: ನಾಲ್ಕೂವರೆ ವರ್ಷಗಳಲ್ಲಿ ತಾಲೂಕಿನ ನಾನಾ ಗ್ರಾಮಗಳ ರಸ್ತೆ ಡಾಂಬರೀಕರಣ, ಶುದ್ಧ ಕುಡಿವ ನೀರಿನ ಘಟಕ ಸ್ಥಾಪನೆ, ಸಿಸಿ ರಸ್ತೆ, ಶಾಲಾ-ಕಾಲೇಜು, ಆಸ್ಪತ್ರೆ ಕಟ್ಟಡ ನಿರ್ಮಾಣ, ಸಮುದಾಯ ಭವನಗಳು ಸೇರಿದಂತೆ ಹಲವು ಅಭಿವೃದ್ಧಿಪರ ಕೆಲಸಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಕೋನಮೇಳಕುಂದಾ ಗ್ರಾಮದಲ್ಲಿ ಬಸವ ಅನುಭವ ಮಂಟಪ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಪರ ಕೆಲಸಗಳನ್ನು ಕೈಗೊಳ್ಳುವ ಮೂಲಕ ಭಾಲ್ಕಿ ತಾಲೂಕನ್ನು ಸಮಗ್ರ ಪ್ರಗತಿಯತ್ತ ಕೊಂಡೊಯ್ಯುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. 

ಈ ಹಿಂದೆ ನನ್ನ ತಂದೆ ಭೀಮಣ್ಣ ಖಂಡ್ರೆ ಸೇರಿದಂತೆ ಸಹೋದರ ವಿಜಯಕುಮಾರ ಖಂಡ್ರೆ ಅವರಿಗೆ ಕ್ಷೇತ್ರದ ಜನತೆ ಕೈ ಹಿಡಿದಿದ್ದಾರೆ. ನನ್ನನ್ನು ಸತತ ಎರಡನೇ ಬಾರಿಗೆ ಕ್ಷೇತ್ರದ ಶಾಸಕನಾಗಿ ಆಯ್ಕೆ ಮಾಡಿದ್ದಾರೆ. ಜನರ ನೀರಿಕ್ಷೆಯಂತೆ ಕೆಲಸ ಮಾಡುತ್ತಿದ್ದೇನೆ. ಕಳೆದ ಚುನಾವಣೆಯಲ್ಲಿ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಲಾಗಿದೆ. ವಸತಿ ಯೋಜನೆಯಡಿ ತಾಲೂಕಿನಲ್ಲಿ ದಾಖಲೆ ಪ್ರಮಾಣದ ಮನೆಗಳನ್ನು ಹಂಚಿಕೆ ಮಾಡಲಾಗಿದೆ.

ನೀರಾವರಿ ಕ್ಷೇತ್ರ, ಕೃಷಿ ಇಲಾಖೆ, ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಕ್ಷೇತ್ರದ ನಾನಾ ಕಡೆಗಳಲ್ಲಿ ಕೈಗೊಂಡ ಅಭಿವೃದ್ಧಿಪರ ಕಾರ್ಯಗಳು ಎಲ್ಲರ ಎದುರಿವೆ. ಸುಳ್ಳು ವಂಚನೆ ನಡೆಯುವುದಿಲ್ಲ. ಜನರು ಜಾಗೃತರಾಗಿದ್ದು, ಎಲ್ಲವನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುತ್ತಾರೆ ಎಂದರು. ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಅನುಭವ ಮಂಟಪ ಚಿಂತನ- ಮಂಥನ, ವಚನ ಪ್ರವಚನ, ಅಧ್ಯಾತ್ಮಿಕ ಕಾರ್ಯಗಳಿಗೆ ಸದ್ಬಳಕೆಯಾಗಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷ ಶಶಿಧರ ಕೋಸಂಬೆ, ಜಿಪಂ ಸದಸ್ಯ ಉಷಾ ರಾಜೇಂದ್ರ ನಿಟ್ಟೂರಕರ್‌, ತಾಪಂ ಸದಸ್ಯ ಭೂದೇವಿ ಸುರೇಶ, ಬಸವ ಅನುಭವ ಮಂಟಪದ ಅಧ್ಯಕ್ಷ ಕೆ.ವಿ.ಪಾಟೀಲ, ಈಶ್ವರಪ್ಪ ಚಾಕೋತೆ, ಶ್ರೀದೇವಿ ಪ್ರಕಾಶ ಸುಕಾಲೆ, ತಾಲೂಕು ಮಹಿಳಾ ಮಂಡಳದ ಅಧ್ಯಕ್ಷೆ ಚಿನ್ನಮ್ಮ ಬಾವುಗೆ, ಎಪಿಎಂಸಿ ಸದಸ್ಯ ಶಿವರಾಜ ಹಂಪಾ, ಗ್ರಾಪಂ ಸದಸ್ಯ ದತ್ತಾತ್ರಿ ಹಂಪಾ, ಜ್ಯೋತಿಷಿ ಹಲಬರ್ಗೆ, ಸಿದ್ದು ತುಗಶೆಟ್ಟೆ ಇದ್ದರು. ಬಸವರಾಜ ಕೊಡಗೆ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next