Advertisement

ನೈಸರ್ಗಿಕ ಉರುವಲುಗಳು ನಗರದ ಬಡವರನ್ನು ಹೇಗೆ ಅನಾರೋಗ್ಯಕ್ಕೆ ದೂಡುತ್ತಿದೆ?

08:11 PM Apr 26, 2020 | Nagendra Trasi |

ಬೆಂಗಳೂರು ಮಹಾನಗರದಲ್ಲಿ ಸದ್ಯದಲ್ಲೇ ಅಪಾರ್ಟ್ಮೆಂಟ್ ನಿವಾಸಿಗಳು ಕೊಳವೆ ಮೂಲಕ ಅಡುಗೆ ಅನಿಲ ಪಡೆಯಲು ಸಿದ್ಧರಾಗಿದ್ದಾರೆ. ಅದೇ ಸಮಯದಲ್ಲಿ ನಗರದ ಬಹುಪಾಲು ಬಡವರು ಇಂದಿಗೂ ಕಟ್ಟಿಗೆ ಹಾಗೂ ಹಸುವಿನ ಸೆಗಣಿಯನ್ನು ಉರುವಲಾಗಿ ಬಳಸುತ್ತಿದ್ದಾರೆ. ಕನಿಷ್ಠ ಖರ್ಚಿನ ಈ ಉರುವಲುಗಳನ್ನು ಅಲ್ಪಾವಧಿಯಲ್ಲಿ ತಯಾರಿಸಬಹುದಾಗಿದ್ದು, ಆದರೆ ಅದಕ್ಕಾಗಿ ಬಡವರು ಗಂಭೀರ ಅನಾರೋಗ್ಯ ಸಮಸ್ಯೆಗಳ ಬೆಲೆಯನ್ನು ತೆರುತ್ತಿದ್ದಾರೆ.

Advertisement

2018 ರಲ್ಲಿ ಕರೆಂಟ್ ಸೈನ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂಶೋಧನಾ ಬರೆಹವೊಂದರ ಪ್ರಕಾರ ಅನುಭವಿ ಶ್ವಾಸಕೋಶ ತಜ್ಞ ಮತ್ತು ಇಂಡಿಯನ್ ಇನ್ಸ್‍ಟಿಟ್ಯೂಟ್ ಅಫ್ ಸೈನ್ಸ್‍ನ ಸಂದರ್ಶಕ ಪ್ರಾಧ್ಯಾಪಕರಾಗಿರುವ ಡಾ. ಹೆಚ್. ಪರಮೇಶ್ ಅವರ ಪ್ರಕಾರ `ಕಟ್ಟಿಗೆ ಒಲೆಯಿಂದ ಗಂಟೆಯೊಂದರಲ್ಲಿ ಹೊರಬರುವ ಹೊಗೆಯ ಪ್ರಮಾಣ 400 ಸಿಗರೇಟಿಗೆ ಸಮಾನ’. ಇವರ ಅಧ್ಯಯನ ಪ್ರಕಾರ ಕಟ್ಟಿಗೆ ಹಾಗೂ ಇತರ ನೈಸರ್ಗಿಕ ಪದಾರ್ಥಗಳನ್ನು ಉರುವಲಾಗಿ ಬಳಸುವವರಲ್ಲಿ ಅಸ್ತಮಾ ರೋಗದ ವ್ಯಾಪಕತೆ 47 ಶೇಖಡಾಕ್ಕೂ ಅಧಿಕ ಇರುತ್ತದೆ. ಇದೇ ಸಂದರ್ಭದಲ್ಲಿ ಅಡುಗೆ ಅನಿಲ ಅಥವಾ ವಿದ್ಯುತ್ ಒಲೆಗಳನ್ನು ಬಳಸುವ ಮನೆಗಳಲ್ಲಿ ಈ ಪ್ರಮಾಣವು 3 ಶೇಖಡಾಕ್ಕಿಂತಲೂ ಕಡಿಮೆ ಪ್ರಮಾಣದ್ದು.

ಇನ್ನು, ಸರಿಯಾದ ಗಾಳಿ ಬೆಳಕು ಹರಡದಂತಹ ಗುಡಿಸಲುಗಳಲ್ಲಿ ಅಸ್ತಮಾ ಹರಡುವ ಪ್ರಮಾಣ 42.7 ಶೇಖಡಾದಷ್ಟಿದೆ ಎಂದು ಇನ್ನೊಂದು ಅಧ್ಯಯನ ಬಹಿರಂಗಪಡಿಸಿದೆ. ಮಹಾನಗರದ ಬಾಗ್ಮನೆ ಟೆಕ್‍ಪಾರ್ಕ್‍ನ ಹಿಂಬದಿಯಲ್ಲಿರುವ ಕೊಳಗೇರಿಗಳಲ್ಲಿ ಇಂತಹ ಅನೇಕ ಗುಡಿಸಲುಗಳಿವೆ. ಈ ಕೊಳಗೇರಿಯಲ್ಲಿ ವಾಸಿಸುವ ಅನೇಕ ಮಹಿಳೆಯರ ಪೈಕಿ ಭಾಗ್ಯಮ್ಮ ಕೂಡಾ ಒಬ್ಬಳು. ಭಾಗ್ಯಮ್ಮ ಪಾಲಿನ ಭಾಗ್ಯವಾಗಿ ಅಲ್ಲಿರುವುದು ಕೇವಲ 150 ಚದರಡಿಯ ಗುಡಿಸಲಷ್ಟೇ. ಆಕೆ ತನ್ನ ಗುಡಿಸಲಿನಲ್ಲಿ ಸಾಂಪ್ರದಾಯಿಕ ಒಲೆಯಲ್ಲಿಯೇ ಅಡುಗೆ ಮಾಡುತ್ತಿದ್ದು, ಒಲೆಯಿಂದ ಹೊರಬರುವ ಹೊಗೆ ಹೊರಹೋಗಲು ಇರುವ ಜಾಗವೆಂದರೆ ಆ ಗುಡಿಸಲಿನ ಒಂದು ಬಾಗಿಲು ಮಾತ್ರ.

101reporters ಜೊತೆ ಮಾತನಾಡಿದ 28 ವರ್ಷ ಪ್ರಾಯದ ಆಕೆ ಪ್ರತಿನಿತ್ಯ 4 ಗಂಟೆಗಳ ಕಾಲ ಅಡುಗೆ ಕೆಲಸದಲ್ಲಿ ತೊಡಗಿಕೊಂಡಿರುತ್ತಾಳೆ. ಹೀಗಾಗಿ ಆಕೆ ನಿರಂತರವಾಗಿ ಕೆಮ್ಮು, ಉಸಿರಾಟದ ಸಮಸ್ಯೆ, ಕಣ್ಣು ಉರಿ, ಕಣ್ಣಿನಲ್ಲಿ ನೀರು ಹರಿಯುವುದು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ. ಮೂವರು ಮಕ್ಕಳ ತಾಯಿಯಾಗಿರುವ ಆಕೆ `ತನ್ನ ಮಕ್ಕಳು ಕೂಡಾ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ’ ಎನ್ನುತ್ತಾಳೆ.
ಆಡಳಿತ ಹಾಗೂ ಇಂಧನ ನೀತಿಗಳ ಬಗ್ಗೆ ಸಂಶೋಧನಾ ಆಸಕ್ತಿ ಹೊಂದಿರುವ ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾಗಿರುವ ಮನು ವಿ. ಮಥಾಯ್ ಅವರ ಪ್ರಕಾರ `ಅಡುಗೆ ಒಲೆಗಾಗಿ ಸಾಂಪ್ರದಾಯಿಕ ಶೈಲಿಯ ಘನ ಇಂಧನಗಳನ್ನು ಸುಡುವುದರಿಂದ ಮಹಿಳೆಯವರು ಮತ್ತು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಸಂಶೋಧನೆಗಳ ಪ್ರಕಾರ ಭಾರತದಲ್ಲಿ ಕಟ್ಟಿಗೆ ಮುಂತಾದ ನೈಸರ್ಗಿಕ ಉತ್ಪನ್ನಗಳ ಇಂಧನಗಳು ಮಹಿಳೆಯರು ಹಾಗೂ ಮಕ್ಕಳಿಗೆ ಗುಣಪಡಿಸಲಾಗದ ಸ್ಥಿತಿಯ ಶ್ವಾಸಕೋಶ ಸಂಬಂಧಿ ಅನಾರೋಗ್ಯ ಮತ್ತು ಮುಂದೆ `ಕ್ರೋನಿಕ್ ಅಬ್‍ಸ್ಟ್ರಕ್ಟಿವ್ ಪಲ್ಮೊನರಿ ಡಿಸೀಸ್ (ಸಿಒಪಿಡಿ)’ ಎಂಬ ಖಾಯಿಲೆಗೂ ಕಾರಣವಾಗುತ್ತದೆ. ಈ ಖಾಯಿಲೆಯು ಎಷ್ಟೊಂದು ಭೀಕರವೆಂದರೆ ಶ್ವಾಸಕೋಶದ ಸಾಮಥ್ರ್ಯವನ್ನೇ ದುರ್ಬಲಗೊಳಿಸುತ್ತದೆ. ದೀರ್ಘಕಾಲದಲ್ಲಿ ಒಲೆಯಿಂದ ಬರುವ ಹೊಗೆ ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಹಾಗೂ ಹೃದ್ರೋಗದ ಸಾಧ್ಯತೆ ಅಧಿಕವಿರುತ್ತದೆ.
ದಿ ಬೆಂಗಳೂರು ಹಾಸ್ಪಿಟಲ್ಸ್‍ನ ಶ್ವಾಸಕೋಶಶಾಸ್ತಜ್ಞ ಡಾ. ಶ್ರೀಗಿರಿ ಎಸ್. ರೇವಾಡಿ ಅವರು ವಿವರಿಸುವಂತೆ `ಕಟ್ಟಿಗೆ ಉರುವಲುಗಳನ್ನು ಇಂಧನವಾಗಿ ಬಳಸುವುದರಿಂದ ಅದರಿಂದ ಬರುವ ಹಾನಿಕಾರಕ ಕಣಗಳಿಂದ ಉಸಿರಾಟದ ಕೊಳವೆಗಳಿಗೆ ಗಾಯಗಳಾಗುತ್ತದೆ. ಆ ಮೂಲಕ ಶ್ವಾಸಕೋಶದ ಪ್ರತಿರೋಧಕ ಶಕ್ತಿಯು ಕ್ಷೀಣಿಸುತ್ತದೆ. ಮಾಲಿನ್ಯಕಾರಕಗಳನ್ನು ತಡೆಯುವ ಶಕ್ತಿಯು ಸಾಮಾನ್ಯವಾಗಿ ಶ್ವಾಸಕೋಶಕ್ಕೆ ಇದೆಯಾದರೂ ಉರುವಲು ಸುಡುವಾಗ ಉಂಟಾಗುವ ಮೈಕ್ರೋಸ್ಕೋಪಿಂಗ್ ಪ್ರಮಾಣದ ಕಣಗಳಿಂದಾಗಿ ಸಂರಕ್ಷಣಾ ವ್ಯವಸ್ಥೆಯು ಕಾರ್ಯನಿರ್ವಹಿಸಲಾರದು. ಮೈಕ್ರೋಸ್ಕೋಪಿಂಗ್ ಪ್ರಮಾಣದ ಕಣವನ್ನು PM2.5 ಎಂದು ಗುರುತಿಸಲಾಗುತ್ತದೆ. ಕಟ್ಟಿಗೆ ಸುಡುವಾಗಿನ ಹೊಗೆಯಿಂದ ಗಾಳಿಯಲ್ಲಿ ಉಸಿರಾಟದ ಮೂಲಕ ಮಾನವ ದೇಹದ ಒಳಸೇರುವ ಕಣವು ಪಿಎಂ2.5 ಗಿಂತಲೂ ಸಣ್ಣ ಆಕಾರದ್ದಾಗಿದೆ ಅಥವಾ ಮನುಷ್ಯನ ಒಂದು ತಲೆಕೂದಲಿನ ಅಗಲದ ಶೇ.3ರಷ್ಟಿದೆ. ಅಷ್ಟೊಂದು ಸಣ್ಣ ಪ್ರಮಾಣದ ಕಣಗಳನ್ನು ತಡೆಯುವ ಶಕ್ತಿಯು ಮನುಷ್ಯನ ಶ್ವಾಸಕೋಶಗಳಿಗಿಲ್ಲ.
ಉಸಿರಾಟದ ರೋಗಗಳ ತಜ್ಞರ ಪ್ರಕಾರ ಪಿಎಂ2.5 ಗಿಂತಲೂ ಸಣ್ಣಕಣಗಳನ್ನು ಸದಾ ಸೇವಿಸುವುದರಿಂದ ಶ್ವಾಸಕೋಶದಲ್ಲಿ ಲೋಳೆಯ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಇದು ವೈರಲ್, ಬ್ಯಾಕ್ಟೀರಿಯಾ ಅಥವಾ ಸಿಒಪಿಡಿ ಸಮಸ್ಯೆಗಳನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಸಾವಿರಪಟ್ಟು ಹೆಚ್ಚು
ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಹೆಚ್‍ಒ) ವಾಯು ಗುಣಮಟ್ಟದ ಮಾರ್ಗಸೂಚಿಗಳ ಪ್ರಕಾರ ದಿನವೊಂದರಲ್ಲಿ ಪಿಎಂ2.5 ಇದರ ಸರಾಸರಿ ಸಾಂದ್ರತೆಯು ಪ್ರತಿ ಮೀಟರ್ ಘನಕ್ಕೆ 25 ಮೈಕ್ರೋಗ್ರಾಂಗಿಂತಲೂ (ಒಂದು ಗ್ರಾಮ್ ವಸ್ತುವನ್ನು ಹತ್ತುಲಕ್ಷದಿಂದ ಭಾಗಿಸಿದಾಗ ಬರುವ ಅಂಶ) ಹೆಚ್ಚು ಮೀರಬಾರದು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಕಾರ ವಾಯುಗುಣಮಟ್ಟದ ಮಾನದಂಡವು 24 ಗಂಟೆಗಳ ಅವಧಿಗೆ 60 µg/m3 ಗೆ ನಿರ್ಧಿಷ್ಟಪಡಿಸಿದೆ. ಆದರೆ ನಮ್ಮ ವರದಿಗಾರರು ಕಟ್ಟಿಗೆ ಒಲೆಯನ್ನು ಬಳಸುವ ಮನೆಯ ಪಿಎಂ2.5ನ ಸಾಂದ್ರತೆಯನ್ನು ಪರಿಶೀಲಿಸಿದಾಗ ಅಲ್ಲಿ ನಿರ್ಧಿಷ್ಟ ಆರೋಗ್ಯಕರ ಮಾನದಂಡಕ್ಕಿಂತ ಸಾವಿರಪಟ್ಟು ಅಧಿಕ ಅಪಾಯವಿರುವುದನ್ನು ಕಂಡುಕೊಂಡಿದ್ದಾರೆ.

Advertisement

ಸೋಮೇಶ್ವರ ಕಾಲನಿಯಲ್ಲಿ ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿರುವ 69 ವರ್ಷದ ಲಲಿತಾ ಬಾಯಿ ಎಂಬವರ ಪುಟ್ಟ ಗುಡಿಸಲಿಗೆ ಭೇಟಿ ಕೊಟ್ಟ ವರದಿಗಾರ `ಸೈಡ್‍ಪಾಕ್ ಆರೋಸಾಲ್ ಮಾನಿಟರ್’ ಎಂಬ ವಾಯುಗುಣಮಟ್ಟ ಶೋಧಿಸುವ ಯಂತ್ರದಿಂದ ಅಲ್ಲಿನ ಪರಿಸ್ಥಿಯನ್ನು ಕಂಡುಕೊಳ್ಳುತ್ತಾರೆ. ಆ ಪ್ರಕಾರ ಲಲಿತಾ ಬಾಯಿಯವರು ಅಡುಗೆ ಮಾಡುವ ಮೊದಲು ಅಲ್ಲಿನ ಪಿಎಂ2.5ನ ಸಾಂದ್ರತೆಯು 13 µg/m3 ಆಗಿತ್ತು. ಒಲೆ ಉರಿಸಿದ ಮೇಲೆ ನಿರಂತರವಾಗಿ ಏರುತ್ತಾ ಕನಿಷ್ಠ ಮಟ್ಟ 4,620 µg/m3 ಹಾಗೂ ಗರಿಷ್ಠ ಮಟ್ಟ 9,150 µg/m3 ಕ್ಕೆ ತಲುಪಿತು. ಈ ಪ್ರಕಾರ ಅಲ್ಲಿನ ಸರಾಸರಿ ಸಾಂದ್ರತೆಯು 7,440 µg/m3 ಆಗಿತ್ತು.

ಒಲೆಯ ಮುಂದೆ ಲಲಿತಾ ಬಾಯಿ ಕುಳಿತುಕೊಳ್ಳುತ್ತಲೇ ಆಕೆಯ ಕಣ್ಣುಗಳಲ್ಲಿ ನೀರು ಜಿಣುಗಲು ಆರಂಭಿಸಿತು. ಈ ಸಂದರ್ಭ ಆಕೆ ವರದಿಗಾರರ ಜೊತೆಗೆ ಮಾತನಾಡುತ್ತಾ `ಅಡುಗೆ ಮಾಡುವ ಅಷ್ಟೂ ಸಮಯದಲ್ಲೂ ಕಣ್ಣುಗಳು ಒಣಗಿ ಹೋಗುತ್ತವೆ ಮತ್ತು ನಿರಂತರವಾಗಿ ಕೆಮ್ಮು ಬರುತ್ತಿರುತ್ತದೆ’ ಎನ್ನುತ್ತಾಳೆ.
ನಗರದ ಎನ್‍ಜಿಒ ಒಂದರ ಸಹ ಸಂಸ್ಥಾಪಕಿಯಾಗಿರುವ ರಾಣಿ ದೇಸಾಯಿ ಅವರು `ಬೆಂಗಳೂರು ಮಹಾನಗರದ ವಿವಿಧ ಭಾಗಗಳಲ್ಲಿ ಉರುವಲು ಸುಡುವ ಮೂಲಕ ಜನರು ಅಡುಗೆ ತಯಾರಿಸುವುದು ನಡೆಯುತ್ತಲೇ ಇದೆ’ ಎನ್ನುತ್ತಾರೆ. ಈ ಎನ್‍ಜಿಒ ಬೆಂಗಳೂರಿನ ಕೊಳಗೇರಿಗಳಲ್ಲಿ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುತ್ತದೆ. ಮಾಗಡಿ ರಸ್ತೆಯಲ್ಲಿರುವ ಮಾಚೋಹಳ್ಳಿಯಲ್ಲಿ ನಿರಂತರವಾಗಿ ಕಟ್ಟಿಗೆ ಉರುವಲು ಬಳಸುವುದನ್ನು ತಮ್ಮ ತಂಡವು ಗಮನಿಸಿದೆ ಎನ್ನುವ ರಾಣಿ ದೇಸಾಯಿ ಅವರು `ಈ ಕಟ್ಟಿಗೆ ಅಥವಾ ನೈಸರ್ಗಿಕ ಉರುವಲುಗಳನ್ನು ಬಳಸುವುದರಿಂದ ಇಲ್ಲಿನ ಕೊಳಗೇರಿ ನಿವಾಸಿಗಳ ಮಕ್ಕಳು ನಿರಂತರವಾಗಿ ಶೀತ, ಅಲರ್ಜಿ, ಕೆಮ್ಮುಗಳಿಂದ ಬಳಲುತ್ತಿರುತ್ತಾರೆ. ಇದು ಕಟ್ಟಿಗೆ ಉರುವಲು ಬಳಸುವುದರಿಂದ ಉಂಟಾಗುತ್ತಿರುವ ಅಡ್ಡಪರಿಣಾಮವಾಗಿದೆ’ ಎನ್ನುತ್ತಾರೆ.

2016ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರಕಟಿಸಿದ `ಮಹಿಳೆಯರ ಮತ್ತು ಮಕ್ಕಳ ಯೋಗಕ್ಷೇಮ, ಸುಸ್ಥಿರ ಅಭಿವೃದ್ಧಿಗಾಗಿ ಆರೋಗ್ಯಕರ ಸ್ವಚ್ಛ ಇಂಧನಗಳ ಬಳಕೆ’ ಎಂಬ ಶೀರ್ಷಿಕೆಯ ವರದಿಯನ್ವಯ ಉರುವಲು ಒಲೆಯಿಂದಾಗಿ ಹೊರಡುವ ಹೊಗೆಯು ಅತಿಹೆಚ್ಚು ಮಹಿಳೆಯರು ಹಾಗೂ ಮಕ್ಕಳನ್ನು ಬಾಧಿಸುತ್ತಿದೆ.

ಸರ್ಕಾರದ ಯೋಜನೆ :
2016ರಲ್ಲಿ ಕೇಂದ್ರ ಸರಕಾರವು ಭಾರತದಲ್ಲಿನ ಬಡತನ ರೇಖೆಗಿಂತ ಕೆಳಗಿನ ಜನರು ಶುದ್ಧ ಅಡುಗೆ ಅನಿಲವನ್ನು ಬಳಸುವಂತಾಗಲು `ಪ್ರಧಾನ ಮಂತ್ರಿ ಉಜ್ವಲಾ’ ಯೋಜನೆಯನ್ನು ಪರಿಚಯಿಸಿತು. ಯೋಜನೆಯಡಿಯಲ್ಲಿ ಅರ್ಹ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಎಲ್‍ಪಿಜಿ ಅಡುಗೆ ಅನಿಲ ಸಂಪರ್ಕವನ್ನು ನೀಡುವುದು ಉದ್ದೇಶವಾಗಿತ್ತು. ಅಧ್ಯಯನದ ಪ್ರಕಾರ ಈ ಯೋಜನೆಯನ್ನು ಅಳವಡಿಸಿಯೂ ಕೋಲಾರ ಜಿಲ್ಲೆಯಲ್ಲಿ ಜನರು ಘನ ಇಂಧನಗಳನ್ನು ಬಳಸುವುದರಿಂದ ಇದುವರೆಗೂ ಮುಕ್ತರಾಗಿಲ್ಲ.

`ನೇಚರ್ ಎನರ್ಜಿ’ ಎಂಬ ಪತ್ರಿಕೆಯ ವರದಿಯಂತೆ ಅಧ್ಯಯನವೊಂದರ ಪ್ರಕಾರ ಸಮೀಕ್ಷೆಯೊಂದರಲ್ಲಿ ಭಾಗವಹಿಸಿದ 35 ಶೇಖಡಾ ಕುಟುಂಬಗಳು ತಮ್ಮ ಉಜ್ವಲಾ ಯೋಜನೆಯ ಸಿಲಿಂಡರ್‍ಗಳನ್ನು ಮೊದಲ ಒಂದು ಪೂರ್ತಿ ವರ್ಷದಲ್ಲಿ ಒಮ್ಮೆಯೂ ಮರುಪೂರಣ ಮಾಡಿಕೊಂಡಿಲ್ಲ. ಕೇವಲ 7 ಶೇಖಡಾ ಜನರು ಮಾತ್ರವೇ ಮೊದಲ ವರ್ಷದಲ್ಲಿ 3 ರಿಂದ ನಾಲ್ಕು ಮರುಪೂರಣ ಮಾಡಿಸಿಕೊಂಡಿದ್ದಾರೆ. ಅಧ್ಯಯನದ ಪ್ರಕಾರ ಒಂದು ಗ್ರಾಮೀಣ ಕುಟುಂಬಕ್ಕೆ ವರ್ಷವೊಂದರಲ್ಲಿ ಕನಿಷ್ಠ 10 ಸಿಲಿಂಡರ್‍ಗಳ ಮರುಪೂರಣದ ಅಗತ್ಯವಿದೆ. ಆದರೆ ಇಂದಿಗೂ ಕೋಲಾರ ಜಿಲ್ಲೆಯಲ್ಲಿ ಕೇವಲ 2 ಅಥವಾ 3 ಸಿಲಿಂಡರ್‍ಗಳನ್ನು ಪಡೆಯುತ್ತಿದ್ದಾರೆ.

ಲಲಿತಾ ಬಾಯಿ ಅವರು `ಉಜ್ವಲಾ’ ಯೋಜನೆಯ ಪ್ರಯೋಜನವನ್ನು ಪಡೆಯದೇ ಇದ್ದರೂ ಎಲ್‍ಪಿಜಿ ಸಿಲಿಂಡರ್ ಹಾಗೂ ಸ್ಟೌವ್ ಅನ್ನು ಹೊಂದಿದ್ದಾರೆ. ಅವರು ಅಡುಗೆ ಅನಿಲವನ್ನು ಇಂಧನವಾಗಿ ಬಳಸುತ್ತಿದ್ದರೂ ಅಗ್ಗವಾಗಿ ಲಭಿಸುವ ಕಟ್ಟಿಗೆ ಒಲೆಯನ್ನು ಬಳಸುವುದನ್ನು ನಿಲ್ಲಿಸಿಲ್ಲ. ಎಲ್‍ಪಿಜಿ ಸಿಲಿಂಡರ್ ಮರುಪೂರಣ ಮಾಡಿಸಲು 750 ರೂಪಾಯಿಂದ 800 ರೂ. ವೆಚ್ಚವಾಗುತ್ತದೆ. ಅದು ಆಕೆಗೆ ದುಬಾರಿಯಾಗಿದ್ದು, ಆಕೆಯ ಅಗ್ಗದ ಇಂಧನದ ಕಡೆಗೇ ಮಾರುಹೋಗಿದ್ದಾಳೆ. ಲಲಿತಾ ಬಾಯಿಯೇ ಹೇಳುವಂತೆ ಆಕೆ ಕೆಲವೊಮ್ಮೆ ಸಿಲಿಂಡರ್ ಖಾಲಿಯಾದ ಮೇಲೆ ತಿಂಗಳುಗಟ್ಟಲೆ ಕಟ್ಟಿಗೆಯನ್ನೇ ಉರುವಲಾಗಿ ಬಳಸಬೇಕಾಗುತ್ತದೆ.
ಮಥಾಯ್ ಅವರ ಪ್ರಕಾರ `ಸಿಲಿಂಡರ್ ಬಳಸುವಾಗ ಜನರು ವೆಚ್ಚದ ಕಡೆಗೇ ಗಮನ ಹರಿಸುತ್ತಾರೆ. ಗ್ಯಾಸ್ ಸಿಲಿಂಡರನ್ನು ಪುನಹ ತುಂಬಿಸುವುದಕ್ಕಿಂತಲೂ ಉರುವಲೇ ಅಗ್ಗವಾಗಿದ್ದರೆ ಜನರ ಮನೋಭಾವನೆಯಲ್ಲಿ ಬದಲಾವಣೆ ತರುವುದು ಕಷ್ಟವಾಗುತ್ತದೆ’ ಎನ್ನುತ್ತಾರೆ.

ಭಾಗ್ಯಮ್ಮಳ ನೆರೆಮನೆ ನಿವಾಸಿ 29 ವರ್ಷ ಪ್ರಾಯದ ರೇಣುಕಾ ಉರುವಲನ್ನೇ ಬಳಸಿ ಅಡುಗೆ ಮಾಡುತ್ತಾಳೆ. ಆಕೆಗೆ ಉಜ್ವಲಾ ಯೋಜನೆಯ ಬಗ್ಗೆ ಮತ್ತು ಅದರ ಅರ್ಹತಾ ಮಾನದಂಡಗಳ ಬಗ್ಗೆ ಮಾಹಿತಿಯಿಲ್ಲ. ರೇಣುಕಾಳಿಗೆ ಮೂವರು ಮಕ್ಕಳಿದ್ದು, ಅಡುಗೆ ಅನಿಲ ಬಳಸುವುದು ಎಷ್ಟು ಸುರಕ್ಷಿತ ಎಂಬ ಭಾವನೆಯನ್ನು ಹೊಂದಿದ್ದಾಳೆ. `ಸುರಕ್ಷತೆಗಾಗಿ’ ಎಂದು ಭಾಗ್ಯಮ್ಮ ಈ ವಿಷಯವನ್ನು ಸಮರ್ಥಿಸಿಕೊಂಡಳು.

ಬಡವರಿಗೆ ದುಬಾರಿಯಾಗಿರುವ ಗ್ಯಾಸ್ ಮರುಪೂರಣ ಹಾಗೂ ಕಟ್ಟಿಗೆ ಮತ್ತಿತರ ನೈಸರ್ಗಿಕ ಉರುವಲುಗಳ ಬಳಕೆಯಿಂದ ಆಗುವ ಅನಾರೋಗ್ಯದ ಬಗ್ಗೆ ಮಾಹಿತಿ ಇಲ್ಲದಿರುವುದು ಇಂತಹ ಅನೇಕ ಬಡವರನ್ನು ಶುದ್ಧ ಇಂಧನದಿಂದ ವಂಚಿತರನ್ನಾಗಿಸಿದೆ. ಅವರ ವಿಶ್ವಾಸವು ಉರುವಲುಗಳ ಮೇಲೆಯೇ ಇದ್ದು, ಕೊನೆಯಲ್ಲಿ ಅದುವೇ ಅವರ ಆರೋಗ್ಯವನ್ನು ಬಲಿಪಡೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next