Advertisement

ಋಣ

12:30 AM Feb 24, 2019 | |

ವಸಂತಣ್ಣ , ಒಂದು ಬಿಸಿ ಬಿಸಿ ಚಾ” ಆರ್ಡರ್‌ ಮಾಡಿದೆ. ಐದೇ ನಿಮಿಷಗಳಲ್ಲಿ ವಸಂತಣ್ಣ ಬಿಸಿಬಿಸಿ ಚಾ ತಂದು ನನ್ನ ಎದುರಿಟ್ಟ . ವಸಂತಣ್ಣ ನನಗೆ ಹದಿನೈದು ವರ್ಷಗಳಿಂದ ಪರಿಚಿತ. ಪರಿಚಿತ ಎನ್ನುವುದಕ್ಕಿಂತಲೂ ಸ್ನೇಹಿತ ಎಂದರೇ ಹೆಚ್ಚು ಸೂಕ್ತವಾಗಬಹುದೇನೋ. ಆತ ನನಗೆ ಪರಿಚಯವಾದದ್ದು ಆತನ ಹೊಟೇಲ್‌ಗೆ ನಾನು ಮೊದಲ ಬಾರಿ ಹೋದಾಗಲೇ. ತುಂಬ ತಮಾಷೆಯ ವ್ಯಕ್ತಿ. ತನ್ನ ಮಾತಿನ ಮೂಲಕ ಯಾರನ್ನಾದರೂ ಸೆಳೆಯಬಲ್ಲ ವ್ಯಕ್ತಿತ್ವ ಅವನದ್ದು. ಅವನ ಈ ಗುಣದಿಂದಲೇ ನನಗೆ ಆತ ಹೆಚ್ಚು ಇಷ್ಟವಾದದ್ದು. ದಿನಕ್ಕೊಮ್ಮೆಯಾದರೂ ಆತನ ಹೊಟೇಲ್‌ಗೆ ಹೋಗಿ ಚಾ ಕುಡಿದರೇ ನನಗೆ ನೆಮ್ಮದಿ. ಆತ ಮಾಡಿಕೊಡುವ ಚಹಾಕ್ಕಿಂತಲೂ ಹೆಚ್ಚು ನನ್ನನ್ನು ಸೆಳೆಯುತ್ತಿದ್ದದ್ದು ಆತನ ಮಾತುಗಳೇ. ಅವನ ಹೊಟೇಲ್‌ ಏನೂ ದೊಡ್ಡ ಮಟ್ಟದ್ದಲ್ಲ. ಮೂರು ಟೇಬಲ್‌, ಮೂರು ಬೆಂಚು ಇವಿಷ್ಟೇ ವ್ಯವಸ್ಥೆ.    ಚಹಾದ ಲೋಟವನ್ನು ಒಂದು ಬಾರಿ ಬಾಯಿಗಿಟ್ಟಾದ ಮೇಲೆಯೇ ನಾನು ವಸಂತಣ್ಣನ ಮುಖವನ್ನು ನೋಡಿದ್ದು. ಇಲ್ಲ , ಯಾವತ್ತಿನಂತಿಲ್ಲ. ಏನಾದರೂ ತಮಾಷೆಯ ಮಾತನಾಡದೆ ಚಹಾ ಕೊಡುವವನೇ ಅಲ್ಲ ನಮ್ಮ ವಸಂತಣ್ಣ. ಯಾಕೋ ಚಿಂತೆಯಿಂದ ಇದ್ದಾನೆ. 

Advertisement

“”ಏನು ವಸಂತಣ್ಣ ತುಂಬಾ ಡಲ್ಲಾಗಿದ್ದೀಯಾ? ಇವತ್ತು ವ್ಯಾಪಾರ ಕಡಿಮೆಯಾ?” ಅಂದೆ. ಆತ ಏನೂ ಮಾತನಾಡಲಿಲ್ಲ. 

“”ಸ್ವಲ್ಪ ಹೊತ್ತು ಬಿಟ್ಟು , ನಿನ್ನಿಂದ ಒಂದು ಉಪಕಾರ ಆಗಬೇಕಿತ್ತಲ್ಲ ರಮೇಶಣ್ಣ” ಅಂದ. 

“”ಸರಿ. ನನ್ನ ಕೈಲಾಗುವುದಾದರೆ ಮಾಡುತ್ತೇನೆ. ಏನು ಹೇಳು” ಅಂದೆ.

“”ನಿನ್ನೆ ನನ್ನ ಮಗಳನ್ನು ನೋಡುವುದಕ್ಕೆ ಹುಡುಗನ ಮನೆಯವರು ಬಂದಿದ್ದರು. ಮಗಳನ್ನು ಒಪ್ಪಿಕೊಂಡಿದ್ದಾರೆ ಕೂಡ
ಒಳ್ಳೆಯದಾಯಿತು. ನಮಗೆ ಸದ್ಯದಲ್ಲೇ ಒಂದು ಮದುವೆಯೂಟ ಹಾಕಿಸುತ್ತೀಯ ಬಿಡು” ನಗುತ್ತ ಅಂದೆ ನಾನು.

Advertisement

ಆತ ನಗಲಿಲ್ಲ. “”ಸುಮ್ಮನಿರು ರಮೇಶಣ್ಣ. ಒಳ್ಳೆಯ ಸಂಬಂಧವೇನೋ ಹೌದು. ಆದರೆ ಹುಡುಗನ ಮನೆಯವರು ಮೂರು ಲಕ್ಷ ವರದಕ್ಷಿಣೆ ಕೇಳಿದ್ದಾರೆ. ದಿನಕ್ಕೆ ಅಬ್ಬಬ್ಟಾ ಅಂದರೆ ಮುನ್ನೂರು ರೂಪಾಯಿ ಸಂಪಾದಿಸುವ ನಾನು ಮೂರು ಲಕ್ಷ ಕೊಡುವುದೆಲ್ಲಿಂದ? ನಿನ್ನಿಂದ ಒಂದು ಉಪಕಾರವಾಗಬೇಕಿತ್ತು ರಮೇಶಣ್ಣ. ನನ್ನ ಮಗಳ ಮದುವೆಗೆ ಒಂದು ಲಕ್ಷ ಸಾಲ ಕೊಡುತ್ತೀಯಾ? ಉಳಿದ ಎರಡು ಲಕ್ಷ ಬೇರೆ ಯಾರಲ್ಲಾದರೂ ಹೊಂದಿಸಿಕೊಳ್ಳುತ್ತೇನೆ” ವಸಂತಣ್ಣನಲ್ಲಿ ದೈನ್ಯಭಾವವಿತ್ತು.  
  
ನನಗೀಗ ಯೋಚನೆ ಶುರುವಾಗಿತ್ತು. ನನ್ನ ಕೈಲಾದರೆ ಉಪಕಾರ ಮಾಡುತ್ತೇನೆ ಎಂದು ನಾನು ಹೇಳಿಯಾಗಿದೆ. ಒಂದು ಲಕ್ಷ ಕೊಡುವುದು ನನ್ನ ಕೈಲಾಗದ ಕೆಲಸವೇನಲ್ಲ. ಅಪ್ಪ ಮಾಡಿಟ್ಟ ಆಸ್ತಿಯಿದೆ. ಸರ್ಕಾರಿ ಕೆಲಸವೂ ಇದೆ. ಆದರೆ ವಸಂತಣ್ಣನಿಗೆ ಸಾಲ ಕೊಟ್ಟರೆ ವಾಪಸು ಬರಬಹುದೆಂಬ ಗ್ಯಾರಂಟಿ ನನಗಿರಲಿಲ್ಲ. ಆದರೂ ಕೊಟ್ಟ ಮಾತು ಉಳಿಸಿಕೊಳ್ಳಬೇಕಲ್ಲ. ಸಾಲದ್ದಕ್ಕೆ ಊರವರ ಮುಂದೆ ಪ್ರತಿಷ್ಠೆ ಹೆಚ್ಚಿ ಸಿಕೊಳ್ಳುವ ಅವಕಾಶ ಇದು. ಅದಕ್ಕಾಗಿ, “”ಆಯಿತು ವಸಂತಣ್ಣ. ಇನ್ನು ಒಂದು ವಾರದೊಳಗೆ ಹೊಂದಿಸಿಕೊಡುತ್ತೇನೆ” ಅಂದೆ. ವಸಂತಣ್ಣನ ಮುಖದಲ್ಲಿ ಆ ದಿನದ ಮೊದಲ ನಗು ಮೂಡಿತ್ತು. 

ರಾತ್ರಿ ಹಾಸಿಗೆಯಲ್ಲಿ ಮಲಗಿದ್ದೇನೆ. ನಿದ್ದೆ ಬಳಿಗೆ ಸುಳಿಯುತ್ತಿಲ್ಲ. ಹತ್ತಿಪ್ಪತ್ತು ಸಾವಿರವಾಗಿದ್ದರೆ ನಾನು ಇಷ್ಟು ಚಿಂತೆ ಮಾಡುತ್ತಿರಲಿಲ್ಲ. ಆದರೆ, ಇದು ಲಕ್ಷದ ಪ್ರಶ್ನೆ. ವಸಂತಣ್ಣನನ್ನು ನಂಬಿ ಒಂದು ಲಕ್ಷ ಕೊಡುವುದಾದರೂ ಹೇಗೆ? ಆತ ವಾಪಸು ಕೊಡಲಾರ ಎಂದಲ್ಲ. ಕೊಡುವ ಸಾಮರ್ಥ್ಯ ಆತನಿಗಿಲ್ಲ. ಮೂರು ಹೆಣ್ಣುಮಕ್ಕಳು. ಈಗ ಮೊದಲನೆಯ ಮಗಳು ರಂಜಿತಾಳನ್ನು ಮದುವೆ ಮಾಡಿಕೊಡುವ ಸಿದ್ಧತೆಯಲ್ಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ಆತ ಸಾಲ ತೀರಿಸಿಯಾನು ಎಂದು ನಾನು ಅಂದುಕೊಳ್ಳುವುದಾದರೂ ಹೇಗೆ? ಏನಾದರೂ ಆಗಲಿ. ಹಣ ಕೊಡದೆ ವಿಧಿಯಿಲ್ಲ ಎಂದು ನಿರ್ಧರಿಸಿದವನಿಗೆ ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ. 

ಮರುದಿನವೇ ಬ್ಯಾಂಕಿಗೆ ಹೋಗಿ, ಹಣ ಡ್ರಾ ಮಾಡಿಕೊಂಡು ಸೀದಾ ವಸಂತಣ್ಣನ ಹೊಟೇಲ್‌ಗೆ ಹೋದೆ. ವಸಂತಣ್ಣನ ಕೈಯಲ್ಲಿ ಹಣವನ್ನಿಟ್ಟೆ.

“”ತುಂಬಾ ಉಪಕಾರ ಆಯ್ತು ರಮೇಶಣ್ಣ. ನಿನ್ನ ಈ ಋಣವನ್ನು ನನ್ನ ಪ್ರಾಣ ತೆತ್ತಾದರೂ ತೀರಿಸುತ್ತೇನೆ” ಹೇಳುವಾಗ ವಸಂತಣ್ಣನ ಕಣ್ಣುಗಳು ತೇವವಾಗಿದ್ದವು. “”ಅಯ್ಯೋ! ಅಷ್ಟೆಲ್ಲಾ ದೊಡ್ಡ ಮಾತನಾಡಬೇಡ ವಸಂತಣ್ಣ. ನೀನೇನು ನನಗೆ ಹೊರಗಿನವನಾ?” ಎಂದು ಹೇಳಿದ ನಾನು ಯಾವತ್ತಿನಂತೆ ಚಹಾ ಕುಡಿದು ಮನೆಗೆ ಬಂದೆ.ಇದಾಗಿ ಮೂರು ತಿಂಗಳಲ್ಲಿ ರಂಜಿತಾಳ ಮದುವೆ ನಡೆದುಹೋಗಿತ್ತು. ಮದುವೆಗೆ ಹೋದ ನನ್ನನ್ನು ವಸಂತಣ್ಣನ ಮನೆಮಂದಿಯೆಲ್ಲ ದೇವರನ್ನೇ ಕಂಡಂತೆ ಸತ್ಕರಿಸಿದ್ದರು. ಹುಡುಗ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕ. ಆದರೂ ವರದಕ್ಷಿಣೆ ಪಡೆದು ಮದುವೆಯಾಗುತ್ತಿದ್ದಾನೆ. ವಿಪರ್ಯಾಸ ಎನಿಸಿತು ನನಗೆ.

ವಸಂತಣ್ಣ ಚೆನ್ನಾಗಿಯೇ ಮದುವೆ ಮಾಡಿಕೊಟ್ಟಿದ್ದಾನೆ. ಅವನ ಕಣ್ಣುಗಳಲ್ಲಿ ನೂರು ನಕ್ಷತ್ರಗಳ ಹೊಳಪು. ಮದುವೆ ಸುಸೂತ್ರವಾಗಿ ನಡೆಯಿತೆಂಬ ನಿರಾಳತೆ ಅವನಲ್ಲಿ. ಅವನ ಸಂತೋಷ ಕಂಡು ನನಗೂ ಸಂತಸವಾಗಿತ್ತು.ಮೂರು ತಿಂಗಳು ಕಳೆದಿತ್ತೇನೋ.  
  
ಮನೆ ತಲುಪಿದ್ದೆನಷ್ಟೆ. ಹೆಂಡತಿ ನಾನು ಬರುವುದನ್ನೇ ಕಾದು ಕುಳಿತವಳಂತೆ ಮಾತು ಶುರುವಿಟ್ಟುಕೊಂಡಳು.”ರೀ, ವಸಂತಣ್ಣನ ಮಗಳು ರಂಜಿತಾ ಇದ್ದಾಳಲ್ಲಾ, ಅವಳ ಗಂಡನಿಗೆ ಏನೋ ತೀವ್ರ ಅನಾರೋಗ್ಯದಿಂದ ತೀರಿಕೊಂಡನಂತೆ” ನನಗೆ ನಂಬಲಾಗಲಿಲ್ಲ. “ಏನಾಗಿತ್ತಂತೆ ಅವನಿಗೆ?” ಅಂದೆ. “”ಮೊದಲೇ ಅವನಿಗೆ ಏನೋ ಹೃದಯದ ಸಮಸ್ಯೆ ಇತ್ತಂತೆ. ಮುಚ್ಚಿಟ್ಟು ಮದುವೆ ಮಾಡಿದ್ದಾರೆ” ಅಂದಳು.ಸರಿ, ನಾನು ಅವರ ಮನೆಗೆ ಹೋಗಿಬರುತ್ತೇನೆ ಅಂದ ನಾನು ಆತುರಾತುರವಾಗಿ ಹೊರಟು ರಂಜಿತಾಳ ಗಂಡನ ಮನೆಗೆ ಬಂದೆ.

ಸೊಸೆ ಕಾಲಿಟ್ಟದ್ದೇ ಮನೆ ಮಗನನ್ನು ನುಂಗಿಕೊಂಡಳು ಎಂಬ ಮಾತು ಕಿವಿಗೆ ಬಿತ್ತು. ಮೊದಲೇ ಆರೋಗ್ಯದ ಸಮಸ್ಯೆ ಇದ್ದವನು ಸಾಯುವುದಕ್ಕೂ, ಸೊಸೆ ಮನೆ ಪ್ರವೇಶಿಸುವುದಕ್ಕೂ ಏನು ಸಂಬಂಧ ಎಂದು ನನಗೆ ಅರ್ಥವಾಗಲಿಲ್ಲ. ವಸಂತಣ್ಣನಿಗೆ ನನಗೆ ಹೊಳೆದಂತೆ ಸಮಾಧಾನದ ಮಾತು ಹೇಳಿ ಮನೆಗೆ ಬಂದೆ.

ಇದಾಗಿ ಸುಮಾರು ಎಂಟು ತಿಂಗಳುಗಳೇ ಕಳೆದಿದ್ದವು. ವಸಂತಣ್ಣನಿಗೆ ಮೊದಲ ಉತ್ಸಾಹ ಇರಲಿಲ್ಲ. ಅವನ ಕಳೆಗುಂದಿದ ಮುಖ ಕಂಡು ಸಾಲ ವಾಪಸು ಕೇಳುವ ಮನಸ್ಸು ನನಗಾಗಲಿಲ್ಲ. ಆದರೆ, ಒಂದು ದಿನ ಇದ್ದಕ್ಕಿದ್ದಂತೆ ವಸಂತಣ್ಣ ಅವನಾಗಿಯೇ, “”ರಮೇಶಣ್ಣ, ನಿನ್ನಿಂದ ತೆಗೆದುಕೊಂಡ ಸಾಲವನ್ನು ಸದ್ಯದಲ್ಲಿಯೇ ತೀರಿಸುತ್ತೇನೆ” ಅಂದ. “”ಪರವಾಗಿಲ್ಲ ವಸಂತಣ್ಣ. ನಿನಗಾದಾಗ ತೀರಿಸುವಿಯಂತೆ” ಅಂದೆ ನಾನು.

ಒಂದು ತಿಂಗಳಾಗಿತ್ತು. ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಹೊರಟಿದ್ದೆ. ದಾರಿಯಲ್ಲಿ ಅಂಗಡಿಯ ಪ್ರಶಾಂತ ಸಿಕ್ಕಿದ. “”ರಮೇಶಣ್ಣ, ನಿನಗೆ ವಿಷಯ ಗೊತ್ತಾಗಲಿಲ್ಲವಾ? ಹೊಟೇಲ್‌ ವಸಂತಣ್ಣ ತೀರಿಕೊಂಡ” ಅಂದ.

ನನಗೆ ನಿಂತ ನೆಲವೇ ಕುಸಿದ ಅನುಭವ. “”ಯಾ…ರು? ಯಾ..ವ.. ವಸಂತಣ್ಣ? ನಿನಗೆ ಸರಿಯಾಗಿ ಗೊ..ತ್ತಿದೆಯಾ?” ನನ್ನ ನಾಲಗೆ ನನಗರಿವಿಲ್ಲದೆಯೇ ತಡವರಿಸತೊಡಗಿತ್ತು.

“”ಹೇ! ಹೌದು ರಮೇಶಣ್ಣ. ಕೆಲವರು ಕಿಡ್ನಿ ಪ್ರಾಬ್ಲಿಂ ಇತ್ತು ಅಂತ ಹೇಳ್ತಾರೆ. ಇನ್ನು ಕೆಲವರ ಪ್ರಕಾರ ಕಿಡ್ನಿ ಸರಿ ಇತ್ತಂತೆ. ಹಣದ ಸಮಸ್ಯೆಯಿಂದ ಮಾರಿದನಂತೆ. ಒಂದು ಕಿಡ್ನಿ ಮಾರಿದ ಮೇಲೆ ಮತ್ತೂಂದು ಕಿಡ್ನಿ ಕೆಲಸ ಮಾಡಲಿಲ್ಲವಂತೆ. ಹೀಗೆಲ್ಲ ಏನೆಲ್ಲ ಜನ ಹೇಳ್ತಾರೆ. ನಿಜ ಏನೇ ಇರಲಿ, ಅಂತೂ ವಸಂತಣ್ಣ ಹೋದ. ಮೊದಲೇ ಕಷ್ಟದಲ್ಲಿದ್ನಲ್ಲ, ಪಾಪ ! ನಾನೀಗ ಅಲ್ಲಿಗೇ ಹೋಗ್ತಿದ್ದೇನೆ” ಅಂದ. ನಾನೂ ಅವನೊಂದಿಗೆ ವಸಂತಣ್ಣನ ಮನೆಗೆ ಹೊರಟೆ. ವಸಂತಣ್ಣನಿಗೆ ದುರಭ್ಯಾಸಗಳಿರಲಿಲ್ಲ. ತೀರಿಕೊಂಡದ್ದು ಹೇಗೆ ಎಂಬ ಯೋಚನೆ ನನ್ನ ತಲೆ ಕೊರೆಯುತ್ತಿತ್ತು. ಅನಾಥರಾಗಿರುವ ವಸಂತಣ್ಣನ ಹೆಂಡತಿ, ಮಕ್ಕಳ ಮುಖ ನೋಡುವುದಕ್ಕೆ ಕಷ್ಟವಾಯಿತು.

ಇದಾಗಿ ಒಂದು ವಾರ ನನ್ನ ಮನಸ್ಸು ನೆಮ್ಮದಿ ಕಳೆದುಕೊಂಡಿತ್ತು. ವಸಂತಣ್ಣ ಆವಾಗಾವಾಗ ನೆನಪಾಗುತ್ತಿದ್ದ. ಅವನ ಮಾತು, ನಗು, ಅವನು ಮಾಡಿಕೊಡುತ್ತಿದ್ದ ಚಹಾ ಎಲ್ಲವೂ ನೆನಪಾಗುತ್ತಿದ್ದವು.

ಜೊತೆಗೆ ಒಂದು ಲಕ್ಷ ಸಾಲವೂ ಕೂಡಾ!ಅದೊಂದು ಭಾನುವಾರ, ಮನೆಯ ಅಂಗಳದಲ್ಲಿ ಕುಳಿತು ಪೇಪರ್‌ ಓದುತ್ತಿದ್ದೆ. ಗೇಟು ತೆರೆದ ಸದ್ದಾಯಿತು. ನೋಡಿದರೆ ವಸಂತಣ್ಣನ ಹೆಂಡತಿ. ಅವಳ ಮುಖದಲ್ಲಿನ್ನೂ ದುಃಖದ ಛಾಯೆ ಹಾಗೇ ಇತ್ತು.

“”ನಮ್ಮ ಯಜಮಾನರು ನಿಮಗೆ ಒಂದು ಲಕ್ಷ ಕೊಡಬೇಕಿತ್ತಲ್ಲ ವಸಂತಣ್ಣ, ಅದನ್ನು ಕೊಡುವುದಕ್ಕೇ ನಾನು ಬಂದದ್ದು” ನಾನು ಮಾತನಾಡುವುದಕ್ಕೂ ಮೊದಲು ಅವಳೇ ಆತುರಾತುರವಾಗಿ ನುಡಿದಳು.

“”ಅಲ್ಲಮ್ಮ, ಇಷ್ಟೊಂದು ಹಣ ನಿನ್ನಲ್ಲಿ ಹೇಗೆ ಬಂತು?” ಅಂದೆ.

“”ಆಸ್ಪತ್ರೆಯವರು ಕೊಟ್ಟರು. ಅದನ್ನು ನಿಮಗೆ ಕೊಡಬೇಕೆಂದು ಮೊದಲೇ ನಮ್ಮವರು ಹೇಳಿದ್ದರು” ಎಂದೇನೋ ಅಸ್ಪಷ್ಟವಾಗಿ ಹೇಳುತ್ತ, ಕಣ್ಣೀರನ್ನು ಸೆರಗಿನಲ್ಲಿ ಒರೆಸಿಕೊಳ್ಳುತ್ತ ಅವಳು ಹೊರಟುಹೋದಳು.

ನನಗೆ ಒಟ್ಟೂ ಗಲಿಬಿಲಿಯಾಯಿತು. ನನ್ನಿಂದ ಸಾಲ ಪಡೆದುಕೊಳ್ಳುವಾಗ ವಸಂತಣ್ಣ ಹೇಳಿದ ಮಾತು ಮತ್ತೆ ಕಿವಿಯಲ್ಲಿ ಮೊರೆಯತೊಡಗಿ, ಹಣದ ಕಟ್ಟಿನಿಂದ ನೋಟುಗಳು ಕೈ ಜಾರಿ ಗಾಳಿಯಲ್ಲಿ ಹಾರಾಡಿ ಹಾರಾಡಿ ಕೆಳಗೆ ಬೀಳತೊಡಗಿದವು !

– ವಿಶ್ವನಾಥ ಎನ್‌. 

Advertisement

Udayavani is now on Telegram. Click here to join our channel and stay updated with the latest news.

Next