ಕೆಂಗೇರಿ: ರೈತರ ಸಾಲ ಮನ್ನಾ ಕ್ರಮದಿಂದ ಬೆಂಗಳೂರು ನಗರದ ಅಭಿವೃದ್ಧಿಗೆ ತೊಡಕಾಗಬಾರದು ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು. ಹೇರೋಹಳ್ಳಿಯ ಕೆಂಪೇಗೌಡ ಪಾಲಿಕೆ ಭವನದಲ್ಲಿ ಗುರುವಾರ ಶಾಸಕರ ನೂತನ ಕಚೇರಿ ಉದ್ಘಾಟಿಸಿದ ನಂತರ ಮಾತನಾಡಿದರು.
ಸಾಲ ಮನ್ನಾ ಕ್ರಮವನ್ನು ನಾವು ವಿರೋಧಿಸುವುದಿಲ್ಲ. ಆದರೆ ಸಾಲ ಮನ್ನಾ ಮಾಡಿರುವುದು ಬೆಂಗಳೂರು ನಗರದ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರಬಾರದು. ಬಿಬಿಎಂಪಿಯಿಂದ ಬರುವ ಆದಾಯವನ್ನು ನಗರದ ಅಭಿವೃದ್ಧಿಗೆ ವಿನಿಯೋಗಿಸಬೇಕು ಎಂದು ಸಲಹೆ ನೀಡಿದರು.
ಸಾಲ ಮನ್ನಾ ಯೋಜನೆಯ ನಿಜವಾದ ಪ್ರಯೋಜನ ಆಗಬೇಕಿರುವುದು, ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿರುವ ರೈತರಿಗೆ. ಆದರೆ ಬ್ಯಾಂಕ್‌ಗಳು, ಸಹಕಾರ ಸಂಘಗಳಿಂದ ಪಡೆದ ಸಾಲವನ್ನು ವರ್ಷಗಟ್ಟಲೆ ಮರು ಪಾವತಿ ಮಾಡದೆ ತಪ್ಪಿಸಿಕೊಳ್ಳುವ ರೈತರು ಇಂದು ಸಾಲ ಮನ್ನಾದ ನಿಜವಾದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಯಶವಂತಪುರ ಕ್ಷೇತ್ರದ ಎಲ್ಲ ವಾರ್ಡ್‌ಗಳಲ್ಲೂ ಶಾಸಕರ ಕಚೇರಿ ತೆರೆಯುವುದಾಗಿ ತಿಳಿಸಿದ ಸೋಮಶೇಖರ್, ಈಗಾಗಲೇ ಎಲ್ಲ ವಾರ್ಡ್‌ಗಳಲ್ಲಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದು, ಹಂತಹಂತವಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಎಲ್ಲ ವಾರ್ಡ್ ಕಚೇರಿಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಶಾಸಕರು, ದಿನೇಶ್ ಗುಂಡೂರಾವ್ ಅವರು ಅತ್ಯುತ್ತಮ ಪಕ್ಷ ಸಂಘಟಕರು. ಇದೇ ಉದ್ದೇಶದಿಂದ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದೆ. ಅವರ ನೇಮಕದಿಂದ ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಂತಸವಾಗಿದೆ ಎಂದರು. ಪಾಲಿಕೆ ಸದಸ್ಯರಾದ ಆರ್ಯ ಶ್ರೀನಿವಾಸ್, ರಾಜಣ್ಣ, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವಮಾದಯ್ಯ, ಕೆಪಿಸಿಸಿ ಕಾರ್ಯದರ್ಶಿ ಡಾ.ಎನ್.ನಂಜುಂಡೇಶ ಉಪಸಿœತ್ತರಿದ್ದರು.