Advertisement

ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತನ ತಂದೆಯನ್ನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

10:47 AM Jan 17, 2021 | Team Udayavani |

ಕನಕಪುರ: ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ತಂದೆಯನ್ನೇ ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ಅಪರಾಧಿ ಸುನೀಲ್‌ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

Advertisement

ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಮುಳ್ಳಹಳ್ಳಿ ವಾಸಿ ರಾಮಚಂದ್ರ (55) ಕೊಲೆಯಾಗಿದ್ದರು. 2018ರಲ್ಲಿ ರಾಮಚಂದ್ರ ಅವರ ಮಗನಾದ ನಾಗೇಶ್‌ ಮತ್ತು ಅದೇ ಗ್ರಾಮದ ಕೊಲೆ ಆರೋಪಿ ಸುನೀಲ್‌ ಇಬ್ಬರೂ ಸ್ನೇಹಿತರಾಗಿದ್ದರು. ಸುನೀಲ್‌ ತನ್ನ ಕಾರಿನ ಕಂತಿನ ಹಣ ಕಟ್ಟಲು ತನ್ನ ಸ್ನೇಹಿತ ನಾಗೇಶ್‌ನಿಂದ 10 ಸಾವಿರ ರೂ. ಸಾಲ ಪಡೆದಿದ್ದನು. ಹಣ ಹಿಂದಿರುಗಿಸುವ ವಿಚಾರದಲ್ಲಿ ನಾಗೇಶ್‌-ಸುನೀಲ್‌ ನಡುವೆ ಜಗಳ ನಡೆದಿತ್ತು. ಇದು ವಿಕೋಪಕ್ಕೆ ತಿರುಗಿದಾಗ ಸುನೀಲ್‌ ತನ್ನ ಸ್ನೇಹಿತ ನಾಗೇಶನನ್ನು ಕೊಲ್ಲಲು ಬೆಂಗಳೂರಿನಿಂದ ಡ್ಯಾಗರ್‌ (ಹರಿತವಾದ ಚೂರಿ) ಖರೀದಿಸಿ, 2018ರ ಅ.1ರಂದು ಸಂಜೆ 7ರ ಸಮಯದಲ್ಲಿ ಹಣದ ವಿಚಾರಕ್ಕೆ ವಿನಾಕಾರಣ ಗಲಾಟೆ ಆರಂಭಿಸಿದರು. ಇದೇ ವೇಳೆ ನಾಗೇಶನಿಗೆ ಚಾಕುವಿನಿಂದ ತಿವಿಯಲು ಯತ್ನಿಸಿದ್ದ ಈ ವಿಚಾರ ತಿಳಿದು ನಾಗೇಶ ಅಣ್ಣ ನಾಗೇಂದ್ರ ಮತ್ತು ತಂದೆ ರಾಮಚಂದ್ರ ತಡೆಯಲೆತ್ನಿಸಿದರು. ಆಗ ಸುನೀಲ್‌
ನಾಗೇಶನ ತಂದೆ ರಾಮಚಂದ್ರ ಅವರಿಗೆ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದರಿಂದ ಅವರು ಸಾವನ್ನಪ್ಪಿದ್ದರು.

ಇದನ್ನೂ ಓದಿ:ರಾಮನಗರದ ಆಟೋ ಚಾಲಕನ ಅಂತ್ಯಸಂಸ್ಕಾರಕ್ಕೆ ಕುಮಾರಸ್ವಾಮಿ, ನಿಖಿಲ್

ಈ ಸಂಬಂಧ ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ವೃತ್ತ ನಿರೀಕ್ಷಕರಾದ ಮಲ್ಲೇಶ್‌ ಮತ್ತು ಸಿಬ್ಬಂದಿ ಪ್ರಕರಣದ ಆರೋಪಿ ಸುನೀಲ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎರಡನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸರ್ಕಾರದ ಪರ ವಕೀಲರಾದ ರಘು ಮತ್ತು ಅನುರೇವು
ವಾದ ಮಂಡಿಸಿದರು. ವಾದ-ಪ್ರತಿವಾದಗಳ ನಂತರ ಸುನೀಲ್‌ ತಪಿತಸ್ಥನೆಂದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶಂಕ್ರಪ್ಪ ನಿಂಬಣ್ಣ ಕಲ್ಕಣಿ ಅವರು ಸುನೀಲ್‌ನಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಂದು ಕೊಲೆ ಪ್ರಕರಣದ ತನಿಖೆ ನಡೆಸಿದ ವೃತ್ತನಿರೀಕ್ಷಕ ಮಲ್ಲೇಶ್, ಪಿಎಸ್‌ಐ ಕೃಷ್ಣಕುಮಾರ್‌, ಸಹಾಯಕರಾದ ಮೋಹನ್‌ ಅವರನ್ನು ಜಿಲ್ಲಾ ಪೊಲೀಸ್‌ ಅಧೀಕ್ಷಕರು ಮತ್ತು ಪೊಲೀಸ್‌ ಉಪಾಧೀಕ್ಷಕರು ಪ್ರಸಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next