Advertisement

ಜನರಿಗೆ ನೀರು ಕೊಡ್ತೀವಿ ಅಂದರೆ ಡೀಸಿ ಬೇಡ ಅಂತಾರೆ !

03:45 AM Mar 24, 2017 | Team Udayavani |

ಗದಗ: ರಾಜ್ಯದಲ್ಲಿ ಭೀಕರ ಬರ ನಿರ್ವಹಿಸಲಾಗದೆ ಸರ್ಕಾರವೇ ಹೆಣಗಾಡುತ್ತಿದೆ. ಹೀಗಾಗಿ ಬರಪೀಡಿತ ಗ್ರಾಮಗಳಿಗೆ ಕುಡಿವ ನೀರು ಪೂರೈಸಲು ಹಲವು ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸುತ್ತಿವೆ. ಆದರೆ, ಗದಗ ಜಿಲ್ಲಾಡಳಿತದ ನಡೆ ಇದಕ್ಕೆ ತದ್ವಿರುದ್ಧ . ನೀರಿಗೆ ತತ್ವಾರವಿರುವ ಗ್ರಾಮಗಳಿಗೆ ನೀರೊದಗಿಸಲು ಮುಂದಾಗುವ ಸಂಸ್ಥೆಗಳಿಗೆ ಸ್ವತಃ ಜಿಲ್ಲಾಡಳಿತವೇ ಬ್ರೇಕ್‌ ಹಾಕುತ್ತಿದೆ!.

Advertisement

ಬರದಿಂದಾಗಿ ಗದಗ ಜಿಲ್ಲೆಯ ಜನರು ಅಕ್ಷರಶಃ ತತ್ತರಿಸುತ್ತಿದ್ದಾರೆ. ಈ ಬಾರಿಯೂ ಮುಂಗಾರು ಮತ್ತು ಹಿಂಗಾರು ಹಂಗಾಮು ವೈಫಲ್ಯದಿಂದ ಜಿಲ್ಲೆಯಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಿಸಿದೆ. ಪ್ರತಿ ತಾಲೂಕು ಕೇಂದ್ರದಲ್ಲಿ ಕೆರೆ, ಹಳ್ಳ-ಕೊಳ್ಳಗಳು ಬತ್ತಿದ್ದು, ಜನ, ಜಾನುವಾರು ಪರದಾಡುವಂತಾಗಿದೆ.

104 ಹಳ್ಳಿಯಲ್ಲಿ ಹಾಹಾಕಾರ:
ಮೇ ಅಂತ್ಯದವರೆಗೆ ಜಿಲ್ಲೆಯ 104 ಗ್ರಾಮಗಳನ್ನು ಕುಡಿವ ನೀರಿನ ಸಮಸ್ಯಾತ್ಮಕ ಹಳ್ಳಿಗಳೆಂದು ಜಿಲ್ಲಾಡಳಿತ ಗುರುತಿಸಿದೆ. ಈ ಪೈಕಿ ಇಂದಿಗೂ ಬಹುತೇಕ ಹಳ್ಳಿಗರಿಗೆ ಸಮರ್ಪಕವಾಗಿ ನೀರೊದಗಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇತ್ತೀಚೆಗೆ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆಗಳಲ್ಲಿ ಬಹುತೇಕರಿಂದ ಕುಡಿವ ನೀರಿನ ಸಮಸ್ಯೆಗಳೇ ಹೆಚ್ಚು ಕೇಳಿ ಬಂದಿರುವುದು, ಸಮಸ್ಯೆಗೆ ಹಿಡಿದ ಕೈಗನ್ನಡಿ.

ಸಂಘ- ಸಂಸ್ಥೆಗಳ ಸೇವೆ ನಿರಾಕರಣೆ?:
ಇನ್ಫೊಧೀಸಿಸ್‌ ಸಹಭಾಗಿತ್ವದಲ್ಲಿ ಕೋಟುಮಚಗಿಯ ಸಂಕಲ್ಪ ಎಂಬ ಸಂಸ್ಥೆ ಟ್ಯಾಂಕರ್‌ ಮೂಲಕ ಕುಡಿವ ನೀರು ಪೂರೈಸಲು ಮುಂದಾಗಿದೆ. ಗದಗ ತಾಲೂಕಿನ 10, ಮುಂಡರಗಿ ಮತ್ತು ರೋಣ ತಾಲೂಕಿನ ತಲಾ 8 ಸೇರಿ 26 ಗ್ರಾಮಗಳಿಗೆ ನೀರು ಸರಬರಾಜು ಮಾಡಲು ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಲಭ್ಯತೆ, ನೀರಿನ ಗುಣಮಟ್ಟವನ್ನೂ ಪರೀಕ್ಷಿಸಿ, ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಈ ಕುರಿತು ಅನುಮತಿ ಕೋರಿ, ಮಾ. 10 ರಂದು ಜಿಲ್ಲಾಧಿಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಮಾ. 17ರಂದು ಶಿರಸ್ತೇದಾರ್‌ ಹಾಗೂ ಅಪರ ಜಿಲ್ಲಾಧಿಧಿಕಾರಿ ಪ್ರಸ್ತಾವನೆ ಪರಿಶೀಲಿಸಿ, ಅನುಮೋದಿಸಬಹುದು ಎಂದು ಜಿಲ್ಲಾಧಿಧಿಕಾರಿಗೆ ಶಿಫಾರಸು ಮಾಡಿದ್ದಾರೆ.

ನೀರಿನ ಮಾಫಿಯಾಗೆ ಮಣೆ?:
ಜಿಲ್ಲಾಧಿಧಿಕಾರಿ ಮನೋಜ ಜೈನ್‌ ಅವರು, “ಬರಪೀಡಿತ ಹಳ್ಳಿಗಳಿಗೆ ನೀರು ಪೂರೈಸಲು ಸರ್ಕಾರಕ್ಕೆ ಸಾಮರ್ಥ್ಯವಿದೆ. ಸ್ವಯಂ ಸೇವಾ ಸಂಸ್ಥೆಗಳ ನೆರವು ಅಗತ್ಯವಿಲ್ಲ’ ಎಂದು ಉಲ್ಲೇಖೀಸಿ, ಪ್ರಸ್ತಾವನೆಯನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ. ಇದು ಜಿಲ್ಲಾಡಳಿತದ ಉದ್ಧಟತನ ಎಂಬ ಆಕ್ಷೇಪ ಸಾರ್ವಜನಿಕರಿಂದ ವ್ಯಕ್ತವಾಗಿವೆ.

Advertisement

ಮೂಲಗಳ ಪ್ರಕಾರ ರೋಣ ತಾಲೂಕಿನ ಲಕ್ಕಲಕಟ್ಟಿ, ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಸರ್ಕಾರ ಗುತ್ತಿಗೆ ನೀಡಿದೆ. ಪ್ರತಿನಿತ್ಯ 40 -50 ಟ್ಯಾಂಕರ್‌ ನೀರು ಪೂರೈಸಲಾಗುತ್ತಿದ್ದು, ಬಳಿಕ ಕಾರ್ಯಪಡೆ ಮೂಲಕ ಗುತ್ತಿಗೆ ಸಂಸ್ಥೆಗೆ ಹಣ ಬಿಡುಗಡೆ ಮಾಡಲಾಗುತ್ತದೆ. ಅದರಂತೆ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದ ಟ್ಯಾಂಕರ್‌ ಮೂಲಕ ಸರಬರಾಜು ಮಾಡುವಂತೆ ಸೂಚಿಸುವ ಜಿಲ್ಲಾಡಳಿತ, ಉಚಿತವಾಗಿ ನೀರು ಪೂರೈಕೆಗೆ ಅನುಮತಿ ನಿರಾಕರಿಸಿದ್ದು, ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಗದಗ ಜಿಲ್ಲೆಯ 26 ಗ್ರಾಮಗಳಲ್ಲಿ ನಮ್ಮ ಸಂಸ್ಥೆಯಿಂದ ನೀರು ಪೂರೈಸಲು ಮೊದಲಿಗೆ ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿತ್ತು. ಎಲ್ಲ ಸಿದ್ಧತೆಗಳ ಬಳಿಕ ನಾವು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಆದರೆ, ಸ್ಥಳೀಯ ಗ್ರಾಪಂ ಹಾಗೂ ಜನರ ಮನವಿ ಮೇರೆಗೆ ಈಗಾಗಲೇ ಐದಾರು ಹಳ್ಳಿಗಳಲ್ಲಿ ಉಚಿತ ನೀರು ಪೂರೈಕೆ ಆರಂಭಿಸಿದ್ದೇವೆ.
– ಸಿಕಂದರ್‌ ಮೀರಾನಾಯಕ್‌, ಸಂಕಲ್ಪ ಕಾರ್ಯನಿರ್ವಾಹಕ ಅಧಿಕಾರಿ

ನೀರು ಪೂರೈಕೆಗೆ ಸರ್ಕಾರ ಸಾಕಷ್ಟು ಹಣ ನೀಡಿದೆ. ನಮ್ಮಲ್ಲಿ ಹಣದ ಕೊರತೆಯಿಲ್ಲ. ಹೀಗಾಗಿ ಜಿಲ್ಲಾಡಳಿತಕ್ಕೆ ಜನರಿಗೆ ನೀರು ಸರಬರಾಜು ಮಾಡುವ ಸಾಮರ್ಥ್ಯವಿದ್ದು ಸಂಘ-ಸಂಸ್ಥೆಗಳು 500 ರೂ.ಗಳಲ್ಲಿ ನೀರು ಸರಬರಾಜು ಮಾಡಿ, ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತವೆ. ನಿಸ್ವಾರ್ಥವಾಗಿದ್ದರೆ, ನೀರಿನ ಬದಲಿಗೆ ಟ್ಯಾಂಕರ್‌ ದೇಣಿಗೆ ನೀಡಲಿ.
– ಮನೋಜ ಜೈನ್‌, ಗದಗ ಜಿಲ್ಲಾಧಿಕಾರಿ

– ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next