ದೇವನಹಳ್ಳಿ: ಶ್ರೀಲಂಕಾ ಸ್ಫೋಟದಲ್ಲಿ ಸಾವನ್ನಪ್ಪಿದ ಕರ್ನಾಟಕದ 7 ಮಂದಿಯ ಮೃತದೇಹಗಳನ್ನು 3 ದಿನಗಳ ನಂತರ ತಾಯ್ನಾಡಿಗೆ ತರಲಾಗಿದೆ. ಮಂಗಳವಾರ ತಡರಾತ್ರಿ 2.30ಕ್ಕೆ 4 ಹಾಗೂ ಬುಧವಾರ ಮಧ್ಯಾಹ್ನ 3 ಮೃತದೇಹಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು.
ಏಳು ಮಂದಿ ಸ್ನೇಹಿತರು ಲೋಕಸಭಾ ಚುನಾವಣೆ ಮುಗಿಸಿಕೊಂಡು ಪ್ರವಾಸಕ್ಕಾಗಿ ಶ್ರೀಲಂಕಾಗೆ ತೆರಳಿದ್ದರು. ನೆಲಮಂಗಲ ಮೂಲದ ಹನುಮಂತರಾಯಪ್ಪ, ಶಿವಕುಮಾರ್, ಲಕ್ಷ್ಮೀನಾರಾಯಣ್, ರಂಗಣ್ಣ ಅವರ ಮೃತದೇಹಗಳನ್ನು ಮಂಗಳವಾರ ತಡರಾತ್ರಿ ತವರಿಗೆ ತರಲಾಯಿತು. ಈ ವೇಳೆ ಗೃಹ ಸಚಿವ ಎಂ.ಬಿ.ಪಾಟೀಲ್ ಮೃತದೇಹಗಳನ್ನು ಸ್ವೀಕರಿಸಿ ಅಂತಿಮ ನಮನ ಸಲ್ಲಿಸಿದರು.
ಬುಧವಾರ ಮಧ್ಯಾಹ್ನ 3 ಗಂಟೆಗೆ ತುಮಕೂರು ನಿವಾಸಿ ರಮೇಶ್, ನೆಲಮಂಗಲದ ಅಡಕಮಾರನಹಳ್ಳಿ ನಿವಾಸಿ ಮಾರೇಗೌಡ, ಹಾರೋ ಕ್ಯಾತನಹಳ್ಳಿ ನಿವಾಸಿ ಪುಟ್ಟರಾಜು ಅವರ ಪಾರ್ಥಿವ ಶರೀರಗಳು ಇಂಡಿಗೋ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದವು. ಈ ವೇಳೆ ಮೃತರ ಸಂಬಂಧಿಕರು ಮೃತ ದೇಹಗಳನ್ನು ಕಂಡು ಭಾವುಕರಾದರು.
ಶ್ರೀಲಂಕಾದ ಸ್ಫೋಟದಲ್ಲಿ ಗಾಯಗೊಂಡಿರುವ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಸಂಬಂಧಿ ಪುರುಷೋತ್ತಮ್ ಅವರನ್ನು ಕೊಲೊಂಬೋದಿಂದ ಏರ್ ಆ್ಯಂಬುಲೆನ್ಸ್ ಮೂಲಕ ಕೆಐಎಎಲ್ ವಿಮಾನ ನಿಲ್ದಾಣಕ್ಕೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಈಗಾಗಲೇ 7 ಮೃತದೇಹಗಳು ಬಂದಿವೆ.
ಮಂಗಳವಾರ ರಾತ್ರಿ 8.30ಕ್ಕೆ ಒಂದು ಮೃತದೇಹ, ಮಧ್ಯರಾತ್ರಿ 2.30ಕ್ಕೆ ಮತ್ತೂಂದು ಮೃತದೇಹ, ಮಧ್ಯರಾತ್ರಿ 4 ಮೃತದೇಹಗಳು ಹಾಗೂ ಬುಧವಾರ ಮಧ್ಯಾಹ್ನ 3 ಗಂಟೆಗೆ ಮೂರು ಮೃತದೇಹಗಳು ಬಂದಿವೆ. ಇದೊಂದು ಜಗತ್ತೇ ಬೆಚ್ಚಿ ಬೀಳುವ ಘಟನೆ. ಉಗ್ರರ ಕೃತ್ಯವನ್ನು ತೀವ್ರವಾಗಿ ಖಂಡಿಸಬೇಕು. ಮೃತರ ದೇಹಗಳನ್ನು ರಾಜ್ಯಕ್ಕೆ ತರಿಸಲು ಸರ್ಕಾರ ಎಲ್ಲ ರೀತಿಯ ಅಗತ್ಯ ಸಹಕಾರ ನೀಡುತ್ತಿದೆ ಎಂದು ಹೇಳಿದರು.
ಮೂರು ದಿನಗಳಿಂದ ಶ್ರೀಲಂಕದಲ್ಲೇ ಬೀಡುಬಿಟ್ಟಿದ್ದ ನೆಲಮಂಗಲ ಶಾಸಕ ಡಾ. ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಮತ್ತು ಇತರ 12 ಮಂದಿ ಬೆಂಗಳೂರು ಮೂಲದ ಪ್ರವಾಸಿಗರು ಸಹ ಬುಧವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.