ಕಲಬುರಗಿ: ನಗರದಲ್ಲಿ ರೌಡಿ ಶೀಟರ್‌ಗಳು ಸುಮ್ಮನಿದ್ದರೆ ಓಕೆ. ಏನಾದರೂ ಅಪರಾಧ ಚಟುವಟಿಕೆ ನಡೆಸುವುದು, ಭಾಗಿಯಾಗುವುದು ಮಾಡಿದ್ದಲ್ಲಿ ಮುಲಾಜಿಲ್ಲದೆ ಗಡಿಪಾರು ಮಾಡಲಾಗುವುದು ಎಂದು ಡಿಸಿಪಿ ಅಡ್ಡೂರು ಶ್ರೀನಿವಾಸಲು ರೌಡಿಶೀಟರ್‌ಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ಮಿನಿ ವಿಧಾನಸೌಧ ಹಿಂಬದಿಯಲ್ಲಿರುವ ದಕ್ಷಿಣ ವಲಯ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಸ್ಟೇಷನ್ ಬಜಾರ್, ಬ್ರಹ್ಮಪುರ, ಅಶೋಕ ನಗರ ಹಾಗೂ ರಾಘವೇಂದ್ರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಪರೇಡ್‌ನಲ್ಲಿ ವೀಕ್ಷಣೆ ಮಾಡಿ ಅವರು ಮಾತನಾಡಿದರು.
ಮಹಾನಗರದಲ್ಲಿ ಏನು ನಡೆಯುತ್ತಿದೆ ಎಲ್ಲದರ ಮೇಲೆ ನಿಗಾ ಇಟ್ಟಿದ್ದೇವೆ. ಆಯ ಕಟ್ಟಿನಲ್ಲಿ ಸಿಸಿಕ್ಯಾಮರಾಗಳನ್ನು ಹಾಕಿದ್ದೇವೆ. ಸುತ್ತಲಿನ ಪ್ರದೇಶದಲ್ಲಿ ಎಲ್ಲ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ. 700 ಜನ ರೌಡಿಗಳ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿದ್ದೇವೆ. ಈಗಾಗಲೇ 10 ಜನರನ್ನು ಗಡಿಪಾರು ಮಾಡಲಾಗಿದೆ. ಇನ್ನೂ ಕೆಲವರನ್ನು ಮಾಡಲು ಸಂಬಂಧಿಸಿದ ಠಾಣೆಗಳಿಂದ ಶಿಫಾರಸ್ಸು ಬಂದಿವೆ. ಒಬ್ಬನನ್ನು ಗಡಿಪಾರು ಮಾಡಲು ಸಿದ್ದತೆಯಲ್ಲಿದ್ದೇವೆ. ಆದ್ದರಿಂದ ಉಳಿದವರು ತುಸು ಎಚ್ಚರಿಕೆಯಿಂದ ಇರಬೇಕು ಎಂದರು.
ದಕ್ಷಿಣ ಉಪವಿಭಾಗದ ಎಸಿಪಿ ಗಿರೀಶ್ ಎಸ್.ಬಿ. ಮಾತನಾಡಿ, ನಗರದಲ್ಲಿ ಅಪರಾಧ ಚಟುವಟಿಕೆಗಳಲ್ಲಿ ನಿಮ್ಮ ಪಾತ್ರ ಕಂಡು ಬಂದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು. ಗೂಂಡಾ ಕಾಯ್ದೆಯಡಿ ಬಂಧಿಸಲೂ ನಾವು ಹಿಂದೆ ಮುಂದೆ ನೋಡುವುದಿಲ್ಲ. ಉತ್ತಮ ನಡತೆ ತೋರಿದರೆ ರೌಡಿ ಪಟ್ಟಿಯಿಂದ ಕೈಬಿಡಲು ಪರಿಶೀಲಿಸಲಾಗುವುದು ಎಂದರು.
ಸ್ಟೇಶನ್ ಬಜಾರ್, ಬ್ರಹ್ಮಪುರ, ರಾಘವೇಂದ್ರ ನಗರ ಹಾಗೂ ಅಶೋಕ ನಗರ ಠಾಣೆಗಳ 115 ರೌಡಿಗಳು ಪರೇಡ್‌ನಲ್ಲಿ ಭಾಗವಹಿಸಿದ್ದರು. ರಾಘವೇಂದ್ರ ನಗರ ಠಾಣೆ ಪಿಐ ಶಿವಾನಂದ ಗಾಣಿಗೇರ, ಸ್ಟೇಶನ್ ಬಜಾರ್ ಠಾಣೆ ಪಿಐ ಸಿದ್ದರಾಮೇಶ ಗಡೇದ, ಅಶೋಕ ನಗರ ಠಾಣೆ ಪಿಐ ಪಂಡಿತ ಸಗರ, ಬ್ರಹ್ಮಪುರ ಠಾಣೆ ಪಿಐ ರಾಘವೇಂದ್ರ ಎಚ್.ಎಸ್. ಇದ್ದರು.
ಬಾಪುನಗರ, ಬಸವನಗರ, ಮಾಂಗರವಾಡಿ, ಸುಂದರ ನಗರ ರೌಡಿ ಶೀಟರ್‌ಗಳು ಹಲವಾರು ವಾಜ್ಯಗಳಲ್ಲಿ ಭಾಗವಹಿಸಿ ಜನರಿಗೆ ತೊಂದರೆ ಕೊಡುತ್ತಿರುವ ಮಾಹಿತಿ ಇದೆ. ಇದನ್ನು ಕೂಡಲೇ ಬಿಡಿ. ಇಲ್ಲದೆ ಹೋದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ತಿವಿ. ಈಗಾಗಲೇ ಅಕ್ರಮ ಶಸ್ತ್ರಾಸ್ತ್ರ ಮನೆಯಲ್ಲಿ ಇಟ್ಟುಕೊಂಡವನ್ನು ಬಂಧಿಸಲಾಗಿದೆ. ತುಸು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.
-ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕಲಬುರಗಿ