Advertisement

ಪಂಚಮಸಾಲಿ ಮೀಸಲಿಗೆ ವಿರೋಧದ ಆರೋಪ: ಸ್ಪಷ್ಟನೆ ನೀಡಿದ ಡಿಸಿಎಂ ಸವದಿ

06:21 PM Feb 19, 2021 | Team Udayavani |

ಬೆಂಗಳೂರು : ನಿನ್ನೆ (ಫೆ.18) ನಡೆದ ಸಚಿವ ಸಂಪುಟದ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದೇನೆ ಎನ್ನುವ ಆರೋಪದ ಕುರಿತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದು ( ಫೆ.19) ಸ್ಪಷ್ಟನೆ ನೀಡಿದ್ದಾರೆ.

Advertisement

ತಮ್ಮ ವಿರುದ್ಧ ಕೇಳಿ ಬಂದಿದ್ದ ಆರೋಪಕ್ಕೆ ಮಾಧ್ಯಮ ಪ್ರಕಟನೆ ಮೂಲಕ ಸ್ಪಷ್ಟೀಕರಣ ನೀಡಿರುವ ಸವದಿ, ನನ್ನ ವಿರುದ್ಧ ಸಮಾಜದಲ್ಲಿ ತಪ್ಪು ಭಾವನೆ ಸೃಷ್ಟಿಸಬೇಕೆಂಬ ದುರುದ್ದೇಶದಿಂದ ಸತ್ಯಕ್ಕೆ ದೂರವಾದ ಈ ಸಂಗತಿಯನ್ನು ಮಾಧ್ಯಮಗಳಿಗೆ ನೀಡಿ ಅಪಪ್ರಚಾರ ಕೈಗೊಂಡಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ನಾನು ಮೊದಲಿನಿಂದಲೂ ಪಂಚಮಸಾಲಿಗೆ ಮೀಸಲು ನೀಡಬೇಕೆಂಬ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸುತ್ತಲೇ ಬಂದಿದ್ದೇನೆ. ಹಿಂದೆ ಬೆಳಗಾವಿಯ ಸುವರ್ಣಸೌಧದ ಎದುರು ಪಂಚಮಸಾಲಿಗೆ 2ಎ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಕೂಡಲಸಂಗಮದ ಪಂಚಮಸಾಲಿ ಪೀಠದ ಪರಮಪೂಜ್ಯ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯವರು ನಡೆಸಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ (ಕಳೆದ ಅಕ್ಟೋಬರ್‍ನಲ್ಲಿ) ನಾನೂ ಕೂಡ ಭೇಟಿ ನೀಡಿ, ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಅವರಿಗೆ ಬೆಂಬಲ ಸೂಚಿಸಿ ಆ ಉಪವಾಸ ಸತ್ಯಾಗ್ರಹ ಕೊನೆಗೊಳಿಸುವಂತೆ ಮನವಿ ಮಾಡಿದ್ದೆ. ಅದರಂತೆ ಶ್ರೀಗಳು ಅಂದು ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದರು ಎಂಬುದು ಎಲ್ಲಾ ಮಾಧ್ಯಮಗಳಲ್ಲೂ ವರದಿಯಾಗಿತ್ತು.

ವಾಸ್ತವ ಸ್ಥಿತಿ ಹೀಗಿರುವಾಗ ನಾನು ಇದಕ್ಕೆ ವ್ಯತಿರಿಕ್ತವಾಗಿ ಹೇಳಿಕೆ ನೀಡಲು ಹೇಗೆ ಸಾಧ್ಯ? ಮೊದಲಿನಿಂದಲೂ ನಾನು ಅನೇಕ ಸಂದರ್ಭಗಳಲ್ಲಿ ಪಂಚಮಸಾಲಿ ಸಮುದಾಯವು 2ಎ ಗೆ ಸೇರಬೇಕು ಎಂದು ಪ್ರತಿಪಾದಿಸುತ್ತಿದ್ದೇನೆ. ಅಷ್ಟೇಅಲ್ಲ, ನಮ್ಮ ಸರ್ಕಾರವೂ ಈ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಈ ದಿಶೆಯಲ್ಲಿ ಗಂಭೀರ ಪರಾಮರ್ಶೆ ನಡೆಸುತ್ತಿದೆ.  ಆದಾಗ್ಯೂ ನನ್ನ ವಿರುದ್ಧ ಅನವಶ್ಯಕವಾಗಿ ಇಲ್ಲಸಲ್ಲದ ಅಭಿಪ್ರಾಯಗಳನ್ನು ಸೃಷ್ಟಿಸಿ ಅಪಪ್ರಚಾರಕ್ಕೆ ಪ್ರಯತ್ನಿಸುತ್ತಿರುವ ಕಾಣದ ಕೈಗಳ ಕುತಂತ್ರವನ್ನು ನಂಬಬಾರದೆಂದು ತಮ್ಮ ಅವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next