Advertisement

ಅಧಿಕಾರಿ ಬೆವರಿಳಿಸಿದ ಡಿಸಿಎಂ ಗೋವಿಂದ ಕಾರಜೋಳ

04:22 PM Jan 25, 2021 | Team Udayavani |

ಹುಮನಾಬಾದ: ಪಟ್ಟಣದ ತಾಪಂ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬೀದರ ಲೋಕೋಪಯೋಗಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಶಾಂತಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೆವರಿಳಿಸಿದ ಪ್ರಸಂಗ ನಡೆಯಿತು.

Advertisement

ಸಭೆಯಲ್ಲಿ ಮಳೆ ಹಾನಿ ಹಾಗೂ ಪ್ರಕೃತಿ ವಿಕೋಪ ಸೇರಿದಂತೆ ವಿವಿಧ ಯೋಜನೆಗಳ ಕುರಿತು ಮಾಹಿತಿ ಕೇಳಿದ ಸಚಿವರಿಗೆ ಸಮಯಕ್ಕೆ ಉತ್ತರಿಸದೆ ಪ್ರಗತಿ ಪುಸ್ತಕದಲ್ಲಿ ಅಂಕಿ ಸಂಖ್ಯೆ ಹುಡುಕುತ್ತಿರುವುದು ಕಂಡ ಉಪ ಮುಖ್ಯಮಂತ್ರಿಗಳು ಅಧಿ ಕಾರಿಗೆ ಛೀಮಾರಿ ಹಾಕಿದರು. ನಿಮ್ಮ ಜಿಲ್ಲೆಯಲ್ಲಿ ಮಳೆ ಹಾನಿ ಹಾಗೂ ಪ್ರಕೃತಿ ವಿಕೋಪದಿಂದ ಎಷ್ಟು ಹಾನಿಯಾಗಿದೆ ಎಂಬ ಮಾಹಿತಿ ಪುಸ್ತಕದಲ್ಲಿ ಹುಡುಕಬೇಕಾ ಎಂದು ಪ್ರಶ್ನಿಸಿದರು. ಹಾನಿ ಸಂಭವಿಸಿದ ಸಂದರ್ಭದಲ್ಲಿ ಅ ಧಿಕಾರಿ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ.

ಅಲ್ಲದೆ, ತಾಲೂಕುವಾರು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುವ ಕೆಲಸ ಮಾಡಿಲ್ಲ ಎಂಬುವುದು ಈ ಮೂಲಕ ಸಾಬೀತಾಗುತ್ತಿದೆ. ರಾಜ್ಯದಲ್ಲಿಯೇ ಬೀದರ ಜಿಲ್ಲೆ ಅಭಿವೃದ್ಧಿ ಕಾರ್ಯದಲ್ಲಿ ಹಿಂದುಳಿದುಕೊಂಡಿದೆ. ಇದಕ್ಕೆ ಅ ಧಿಕಾರಿಗಳ ಕಾರ್ಯವೈಖರಿಯೇ ಮುಖ್ಯ ಕಾರಣ ಎಂಬುವುದು ಗೊತ್ತಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪ್ರತಿಫಲ ಪಡೆಯಬೇಕಾಗುತ್ತದೆ ಎಂದು ಅಧಿಕಾರಿಗೆ ಎಚ್ಚರಿಸಿದರು.

ಹುಮನಾಬಾದ ತಾಲೂಕಿನಲ್ಲಿ ಮಳೆ ಹಾನಿ ಹಾಗೂ ಪ್ರಕೃತಿ ವಿಕೋಪದ ಕುರಿತು ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಬೇಸರಗೊಂದು ಕಾರಜೋಳ, ಯಾಕೆ ಹುಮನಾಬಾದ ತಾಲೂಕಿನಲ್ಲಿ ಹಾನಿ ಸಂಭವಿಸಿಲ್ಲವೇ ಅಥವಾ ಈ ತಾಲೂಕಿನಲ್ಲಿ ಭಾರಿ ಮಳೆ ಸುರಿದಿಲ್ವಾ ಎಂದು ಪ್ರಶ್ನಿಸಿದರು. ಈ ಮಧ್ಯೆ ಮಾತನಾಡಿದ ಶಾಸಕ ಪಾಟೀಲ ಅಧಿಕಾರಿಗಳು ಸಭೆಗೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು. ತಾಲೂಕಿನ ವಿವಿಧೆಡೆ ಮಳೆ ಹಾನಿ ಸಂಭವಿಸಿದೆ. ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ವಿವರಿಸಿದರು. ಅಧಿಕಾರಿಗಳ ಕಾರ್ಯಕ್ಕೆ ಕಾರಜೋಳ ಬೇಸರ ವ್ಯಕ್ತಪಡಿಸಿದರು.

ಶಾಸಕ ರಾಜಶೇಖರ ಪಾಟೀಲ ಮಾತನಾಡಿ, ನನ್ನ ಕ್ಷೇತ್ರಕ್ಕೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಬೇರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ನನ್ನ ಕ್ಷೇತ್ರದಲ್ಲಿ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಮಹತ್ವ ನೀಡಲಾಗುತ್ತಿಲ್ಲ. ನಾನು ಕಾಂಗ್ರೆಸ್‌ ಪಕ್ಷದ ಶಾಸಕ ಎಂದು ಪರಿಗಣಿಸಿ ತಾರತಮ್ಯ ಮಾಡಲಾಗುತ್ತಿದೆಯೇ? ನಾನು ರಾಜೀನಾಮೆ ನೀಡಬೇಕಾ? ಈ ಕ್ಷೇತ್ರದಲ್ಲಿ 40 ಸಾವಿರಕ್ಕೂ ಅ ಧಿಕ ಜನರು ಬಿಜೆಪಿಗೆ ಮತ ಹಾಕಿದ್ದಾರೆ ಎಂಬುವುದು ಕೂಡ ತಿಳಿದುಕೊಳ್ಳಿ ಎಂದು ನೇರವಾಗಿ ಉಪ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದರು.

Advertisement

ಇದಕ್ಕೆ ಉತ್ತರಿಸಿದ ಕಾರಜೋಳ ಯಾರಿಗೂ ತಾರತಮ್ಯ ನೀತಿ ಅನುಸರಿಸುತ್ತಿಲ್ಲ. ಯಾವ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂಬುವುದು ಮನವಿ ಸಲ್ಲಿಸಿ ಕೂಡಲೇ ಸ್ಪಂದಿಸುವ ಕಾರ್ಯ ಮಾಡುತ್ತೇನೆ ಎಂದರು.

ಗುಣಮಟ್ಟಕ್ಕೆ ಮಹತ್ವ ನೀಡಿ: ಜಿಲ್ಲೆಯ ವಿವಿಧೆಡೆ ನಡೆಯುತ್ತಿರುವ ಕಾಮಗಾರಿಗಳಿಗೆ ಗುತ್ತಿಗೆದಾರರು ಕಡಿಮೆ ಮೊತ್ತದಲ್ಲಿ ಟೆಂಡರ್‌ ಪಡೆದುಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಗುಣಮಟ್ಟ ಕಾಮಗಾರಿ ಸೂಕ್ತವಾಗಿ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಗುತ್ತೆದಾರರು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ. ಕಡಿಮೆ ಹಣದಲ್ಲಿ ಗುಣಮಟ್ಟದ ಕಾಮಗಾರಿ ಹೇಗೆ ಮಾಡಲು ಸಾಧ್ಯ? ಈವರೆಗೆ ಒಬ್ಬ ಗುತ್ತೆದಾರರಿಗೂ ಕಪ್ಪುಪಟ್ಟಿಗೆ ಸೇರಿಸುವ ಕೆಲಸ ಅಧಿಕಾರಿಗಳು ಮಾಡಿಲ್ಲ ಎಂದು ಶಾಸಕ ರಾಜಶೇಖರ ಪಾಟೀಲ ಸಚಿವರಿಗೆ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ, ನಿಯಮ ಉಲ್ಲಂಘಿಸುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯರಾದ ಡಾ| ಚಂದ್ರಶೇಖರ ಪಾಟೀಲ, ರಘುನಾಥರಾವ ಮಲ್ಕಾಪುರೆ, ಅರವಿಂದ ಅರಳಿ, ಜಿಲ್ಲಾಧಿಕಾರಿ ರಾಮಚಂದ್ರನ್‌, ಜಿಪಂ ಸಿಇಒ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

‌ಕಡಿಮೆ ಹಣದಲ್ಲಿ ಗುತ್ತಿಗೆ ಪಡೆದುಕೊಂಡ ಕಾಮಗಾರಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕಡಿಮೆ ಅನುದಾನದಲ್ಲಿ ಸರ್ಕಾರದ ನಿಯಮಗಳ ಪ್ರಕಾರ ಕಾಮಗಾರಿ ನಡೆಯುತ್ತಿದೆಯೇ ಎಂದು ಖಾತರಿ ಪಡಿಸಿಕೊಳ್ಳಬೇಕು. ನಿಯಮ ಉಲ್ಲಂಘಿಸುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಪ್ಪುಪಟ್ಟಿಗೆ ಸೇರಿಸಬೇಕು.

ಗೋವಿಂದ ಕಾರಜೋಳ,
ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next