Advertisement

“ಡಿಸಿಎಂ ಮಾಡಿದ್ರೂ ಒಪ್ಪಿಕೊಳ್ತಿರಲಿಲ್ಲ’

11:21 PM Aug 27, 2019 | Lakshmi GovindaRaj |

ಸಿ.ಟಿ.ರವಿಗೆ ಯಾವುದೇ ಅಸಮಾಧಾನ ಇಲ್ಲ: ಶೆಟ್ಟರ್‌
ಹುಬ್ಬಳ್ಳಿ: “ಉಪಮುಖ್ಯಮಂತ್ರಿ ಗೌರವ ಹುದ್ದೆಯೇ ಹೊರತು ಸಾಂವಿಧಾನಿಕ ಸ್ಥಾನವಲ್ಲ. ಡಿಸಿಎಂ ಹುದ್ದೆಯನ್ನು ನಾನು ಕೇಳಿಲ್ಲ. ಒಂದು ವೇಳೆ ನೀಡಿದ್ದರೂ ಒಪ್ಪಿಕೊಳ್ಳುತ್ತಿರಲಿಲ್ಲ’ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆ ಹಂಚಿಕೆ ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರ. ಆ ಮೇರೆಗೆ ನಾವು ನಡೆಯುತ್ತೇವೆ. ಕೆಲವರಲ್ಲಿನ ಅಸಮಾಧಾನ ಒಂದಿಷ್ಟು ದಿನ ಅಷ್ಟೇ ಇರುತ್ತದೆ. ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಮತ್ತು ಬಿಜೆಪಿ ಮೇಲೆ ಯಾಕೆ ಇಷ್ಟೊಂದು ಅನುಕಂಪ ಹುಟ್ಟಿದೆಯೋ ಗೊತ್ತಿಲ್ಲ. ಮೊದಲು ಅವರು ತಮ್ಮ ಪಕ್ಷದ ಪರಿಸ್ಥಿತಿ ನೋಡಿಕೊಳ್ಳಲಿ. ಕಾಂಗ್ರೆಸ್‌ ಪಕ್ಷಕ್ಕೆ ಹೇಳ್ಳೋರು, ಕೇಳ್ಳೋರು ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಬೇರೆ ಪಕ್ಷದ ಮತ್ತು ನಾಯಕರ ಬಗ್ಗೆ ವಿಚಾರ ಮಾಡುವ, ಅನುಕಂಪ ತೋರುವ ಅವಶ್ಯಕತೆಯಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ಪಕ್ಷದ ವ್ಯವಸ್ಥೆಯಲ್ಲಿ ವರಿಷ್ಠರು, ಮುಖ್ಯಮಂತ್ರಿ ಕೂಡಿಕೊಂಡು ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಸಿ.ಟಿ.ರವಿ ಎಲ್ಲೂ ತಮ್ಮ ಅಸಮಾಧಾನ ಹೇಳಿಕೊಂಡಿಲ್ಲ. ಅವರಿಗೆ ಅಸಮಾಧಾನ ಇದ್ದರೆ ನಾನು ಅವರೊಂದಿಗೆ ಮಾತನಾಡುವೆ. ನಮ್ಮದು ಶಿಸ್ತಿನ ಪಕ್ಷ. ಸಮ್ಮಿಶ್ರ ಸರ್ಕಾರ ಅಭದ್ರವಾಗಿದ್ದರೂ ವಿಶ್ವಾಸಮತ ಪಡೆಯಲು ಒಂದು ತಿಂಗಳ ಕಾಲಹರಣ ಮಾಡಿತು. ಅದಕ್ಕಾಗಿ ವಿಧಾನಸಭೆಯಲ್ಲಿ 5-6 ದಿನ ತೆಗೆದುಕೊಂಡರು. ಸಿದ್ದರಾಮಯ್ಯನವರು ಬಿಜೆಪಿ ಬಗ್ಗೆ ಮಾತನಾಡುವ ಮೊದಲು ತಮ್ಮ ಮನೆ ಸರಿ ಮಾಡಿಕೊಳ್ಳಲಿ. ನಂತರ, ಇನ್ನೊಬ್ಬರ ವಿಚಾರ ಮಾಡಲಿ ಎಂದರು.

ವರಿಷ್ಠರಿಂದ ಅಸಮಾಧಾನ ನಿವಾರಣೆ: ಪಾಟೀಲ
ಹುಬ್ಬಳ್ಳಿ: ಯಾವುದೇ ಸರ್ಕಾರದಲ್ಲಿ ಸಚಿವ ಸಂಪುಟ ರಚನೆಯಾದಾಗ ಕೆಲವರಲ್ಲಿ ಅಸಮಾಧಾನ ಇರುವುದು ಸಹಜ. ಒಂದೆರಡು ದಿನ ಅದು ಇರುತ್ತದೆ. ನಮ್ಮ ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಅದನ್ನು ಸರಿಪಡಿಸುತ್ತಾರೆ ಎಂದು ಗಣಿ, ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ. ಪಾಟೀಲ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಡಿಸಿಎಂ ಸ್ಥಾನದ ಆಕಾಂಕ್ಷಿಯಲ್ಲ. ಬಿಜೆಪಿಯ ಶಿಸ್ತಿನ ಸಿಪಾಯಿ. ನನಗೆ ಕೊಟ್ಟ ಖಾತೆಯನ್ನು ಪ್ರಾಮಾಣಿಕವಾಗಿ, ದಕ್ಷತೆ, ಸಮರ್ಥವಾಗಿ ನಿರ್ವಹಿಸುತ್ತೇನೆ.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ. ನಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದೆ ಹೊರತು ಹೈಕಮಾಂಡ್‌ ನಿರ್ಧಾರ ಪ್ರಶ್ನಿಸುವಂತಿಲ್ಲ’ ಎಂದರು. “ಪಕ್ಷದ ಅಧ್ಯಕ್ಷರ ಪದಗ್ರಹಣದ ವೇಳೆ ನಾವು ಯಾರೂ ದೂರ ಉಳಿದಿಲ್ಲ. ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರ ತಾಯಿ ವಿಧಿವಶರಾಗಿದ್ದು, ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ನಾನು, ಜಗದೀಶ ಶೆಟ್ಟರ ಹೋಗಿದ್ದೇವು’ ಎಂದರು.

Advertisement

ಕಚೇರಿಗಳಲ್ಲಿ ಪೂಜೆ, ಸಭೆ
ಬೆಂಗಳೂರು: ನೂತನ ಸರ್ಕಾರದಲ್ಲಿ ಖಾತೆ ಹಂಚಿಕೆ ಪ್ರಕ್ರಿಯೆ ಮುಗಿದ ಬೆನ್ನಲ್ಲೇ ಸಚಿವರು ವಿಧಾನಸೌಧದತ್ತ ಮುಖ ಮಾಡಿದ್ದು, ಮಂಗಳವಾರ ಪೂಜೆ, ಅಧಿಕಾರಿಗಳ ಸಭೆಯಲ್ಲಿ ನಿರತರಾಗಿದ್ದರು. ನೂತನ ಸಚಿವರು ವಿಧಾನಸೌಧಕ್ಕೆ ಬರುತ್ತಿದ್ದಂತೆ ಕೆಲವರು ಅವರ ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕ, ವಿಶೇಷ ಕರ್ತವ್ಯ ಅಧಿಕಾರಿಗಳಾಗಲು ಕಸರತ್ತು ನಡೆಸುತ್ತಿದ್ದರು. ಈ ಹಿಂದೆ ಸಚಿವರಾಗಿದ್ದಾಗ ಕೆಲಸ ಮಾಡಿದ, ಶಾಸಕರಾಗಿದ್ದಾಗಿನ ಸಂದರ್ಭದ ಪರಿಚಯ ಮತ್ತಿತರ ಸಂಪರ್ಕ ಸಾಧಿಸಿ ಸಚಿವರ ಕಚೇರಿಗಳಲ್ಲಿ ಪ್ರತಿ ಷ್ಠಾಪನೆಗೊಳ್ಳಲು ಬಯಸಿ ಶಿಫಾರಸು ಪತ್ರಕ್ಕೆ ಓಡಾಡುತ್ತಿದ್ದರು.

ಇದರ ನಡುವೆ, ಸಚಿವರು ವಿಧಾನಸೌಧಕ್ಕೆ ಬರುತ್ತಿದ್ದಂತೆ ಅವರ ಕ್ಷೇತ್ರಗಳ ಮತದಾರರು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಮುಖಂಡರು ಆಗಮಿಸಿ ಶುಭಾಶಯ ಕೋರಿದರು. ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ವಿಧಾನಸೌಧದ ಕಚೇರಿಯಲ್ಲಿ ಪೂಜೆ ನೆರವೇರಿಸಿ, “ತಮಗೆ ನೀಡಿರುವ ಖಾತೆ ಬಗ್ಗೆ ಸಮಾಧಾನ ಇದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಬೆಳೆಸಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌, ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಕಚೇರಿಗೆ ಆಗಮಿಸಿ ಅಧಿಕಾರಿಗಳ ಜತೆ ಚರ್ಚಿಸಿದರು. ಸಂಜೆ ಕೋಟ ಶ್ರೀನಿವಾಸ ಪೂಜಾರಿ ಅವರು ವಿಧಾನಸೌಧದಲ್ಲಿ, ಬಂದರು ಮತ್ತು ಒಳನಾಡು ಸಾರಿಗೆ, ಮೀನುಗಾರಿಕೆ ಹಾಗೂ ಮುಜರಾಯಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next