Advertisement

ಡಿಸಿ ಮನ್ನಾ ಭೂಮಿ ನೀಡಲು ಆಗ್ರಹ ಅರೆಬೆತ್ತಲೆ ಪ್ರತಿಭಟನೆ ಎಚ್ಚರಿಕೆ

08:30 AM Aug 08, 2017 | Team Udayavani |

ಪುತ್ತೂರು: ಪರಿಶಿಷ್ಟ ಜಾತಿ, ಪಂಗಡದ ಜನರಿಗಾಗಿ ಮೀಸಲಿಟ್ಟ ಡಿಸಿ ಮನ್ನಾ ಭೂಮಿಯನ್ನು ನೀಡುವವರೆಗೆ ಪ್ರತಿಭಟನೆ ಹಿಂದೆಗೆದುಕೊಳ್ಳುವುದಿಲ್ಲ. ಇದಕ್ಕೆ ಬಗ್ಗದೇ ಇದ್ದರೆ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್‌ ತಣ್ತೀರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ್‌ ನಾಯ್ಕ ಎಚ್ಚರಿಕೆ ನೀಡಿದರು. ಡಿಸಿ ಮನ್ನಾ ಭೂಮಿ ನೀಡುವಂತೆ ಆಗ್ರಹಿಸಿ
ಪುತ್ತೂರು ಮಿನಿ ವಿಧಾನಸೌಧ ಮುಂಭಾಗ ಸೋಮವಾರ ಆರಂಭಿಸಿದ ಅನಿರ್ದಿಷ್ಟಾವಧಿ ಪ್ರತಿಭಟನೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಇದುವರೆಗೆ ಹಲವು ಬಾರಿ ಆಶ್ವಾಸನೆ ನೀಡಲಾಗಿದೆ. ಈ ಬಾರಿ ಶಾಸಕರು ಬಂದು ಲಿಖೀತ ಹೇಳಿಕೆ ನೀಡುವವರೆಗೆ ಪ್ರತಿಭಟನೆ ಹಿಂದೆಗೆದುಕೊಳ್ಳುವುದಿಲ್ಲ. ಸತ್ತರೂ ಸ್ಥಳದಿಂದ ಕದಲುವುದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದ ದಲಿತ ಮುಖಂಡರು ನಮ್ಮ ಜತೆ ಸೇರಿಕೊಳ್ಳಲಿದ್ದಾರೆ ಎಂದರು.

ಜೆಡಿಎಸ್‌ ಬೆಂಬಲ
ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಜೆಡಿಎಸ್‌ ಮುಖಂಡ ಐ.ಸಿ. ಕೈಲಾಸ್‌, ಜಿಲ್ಲೆಯಲ್ಲಿ 2,400 ಎಕರೆ ಡಿಸಿ ಮನ್ನಾ ಭೂಮಿ ಇದೆ. ಇದನ್ನು ನೈಜ ಫಲಾನುಭವಿಗಳಿಗೇ ನೀಡಬೇಕು. ಹಾಗೆಂದು ಬಡವರು ಮನೆ ಕಟ್ಟಿ ಕುಳಿತಿದ್ದರೆ ಅವರನ್ನು ಬಿಟ್ಟು ಹೋಗಿ ಎಂದು ಹೇಳುವಂತಿಲ್ಲ. ಅವರ ಮನೆ ಜಾಗವನ್ನು ಬಿಟ್ಟು, ಉಳಿದ ಜಾಗವನ್ನು ದಲಿತರಿಗೆ ನೀಡಲೇಬೇಕು ಎಂದು ಆಗ್ರಹಿಸಿದರು.

ದಲಿತ ದಮನಿತ ಸ್ವಾಭಿಮಾನಿ ಹೋರಾಟ ಸಮಿತಿ ಉಪಾಧ್ಯಕ್ಷ ರಘುವೀರ್‌ ಪ್ರತಿಭಟನೆಯನ್ನು ಉದ್ಘಾಟಿಸಿದರು. ಮುಖಂಡರಾದ ಶೇಖರ್‌ ಲಾೖಲ, ಸೇಸಪ್ಪ ನೆಕ್ಕಿಲು ಮೊದಲಾದವರು ಮಾತನಾಡಿದರು.

ಅಹೋರಾತ್ರಿ ಪ್ರತಿಭಟನೆ
ಸೋಮವಾರ ಬೆಳಗ್ಗೆ ಆರಂಭವಾದ ಪ್ರತಿಭಟನೆ ರಾತ್ರಿಯೂ ಮುಂದುವರಿದಿದೆ. ಸಂಜೆ ಹೊತ್ತಿಗೆ ಮಹಿಳೆಯರನ್ನು ಕಳುಹಿಸಿ, ಪುರುಷರು ಮಾತ್ರ ಪ್ರತಿಭಟನೆಯಲ್ಲಿ ಕುಳಿತುಕೊಂಡರು. ಶಾಸಕಿ ಶಕುಂತಳಾ ಶೆಟ್ಟಿ ಬೆಂಗಳೂರಿಗೆ ತೆರಳಿರುವ ಹಿನ್ನೆಲೆಯಲ್ಲಿ, ಪ್ರತಿಭಟನ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಶಾಸಕಿ ಸ್ಥಳಕ್ಕೆ ಆಗಮಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next