Advertisement

ಮೊಳವಾಡದಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ

12:21 PM Mar 20, 2022 | Team Udayavani |

ಬೆಳಗಾವಿ: ಕೃಷ್ಣಾ ಹೊಳೆದಂಡೆಯ ಕಾಗವಾಡ ತಾಲೂಕಿನ ಮೊಳವಾಡ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಶನಿವಾರ ಆಗಮಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಗ್ರಾಮಸ್ಥರು ಅಲಂಕೃತ ಎತ್ತಿನ ಬಂಡಿಯಲ್ಲಿ ಪ್ರೀತಿಯಿಂದ ಸ್ವಾಗತಿಸಿಕೊಂಡರು.

Advertisement

ಆಡಳಿತವನ್ನು ಜನರ ಮನೆಬಾಗಿಲಿಗೆ ತೆಗೆದುಕೊಂಡು ಹೋಗುವ ಸರ್ಕಾರದ ಆಶಯದಂತೆ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆಗೆ ಜಿಲ್ಲಾಧಿಕಾರಿ ಹಿರೇಮಠ ಹೆಜ್ಜೆ ಹಾಕಿದರು. ಗ್ರಾಮದ ಹಿರಿಯರು, ಪೂರ್ಣಕುಂಭ ಹೊತ್ತ ಮಹಿಳೆಯರು ಆತ್ಮೀಯವಾಗಿ ಬರಮಾಡಿಕೊಂಡರು.  ಮೊಳವಾಡದ ಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಜಿಲ್ಲಾಧಿಕಾರಿಗಳು ಗ್ರಾಮ ಸಂಚಾರ ಆರಂಭಿಸಿದರು.

ಅಹವಾಲು ಆಲಿಸಲು ಬಂದ ಜಿಲ್ಲಾಧಿಕಾರಿಗಳನ್ನು ಝಾಂಜ್‌, ಡೊಳ್ಳು, ಪೂರ್ಣಕುಂಭ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಮಹಾಲಕ್ಷ್ಮಿ ಮಂದಿರದವರೆಗೆ ಕರೆದೊಯ್ದರು. ಗ್ರಾಮದ ಮಹಾದೇವ ಮಂದಿರದ ಬಳಿ ಎತ್ತಿನ ಬಂಡಿಯಿಂದ ಕೆಳಗಿಳಿದ ಜಿಲ್ಲಾಧಿಕಾರಿಗಳು ಸ್ವತಃ ಡೊಳ್ಳು ಬಾರಿಸಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸಾಥ್‌ ನೀಡಿದರು.

ಗ್ರಾಮದ ಮಂದಿರಗಳಿಗೆ ಭೇಟಿ: ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪಕ್ಕದ ಬೀರದೇವರ ದರ್ಶನ ಪಡೆದುಕೊಂಡರು. ಇದಾದ ಬಳಿಕ ಜೈನ ಬಸದಿಗೆ ತೆರಳಿದರು. ನಂತರ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಬಳಿಕ ಗ್ರಾಮಸ್ಥರ ಅಹವಾಲು ಆಲಿಸಿದರು.

2019ರಲ್ಲಿ ಪ್ರವಾಹದ ವೇಳೆ ಮುಳುಗಡೆಯಾಗಿದ್ದ ಪ್ರದೇಶಗಳ ಕುರಿತು ಜನರಿಂದ ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಅಂಗವಿಕಲ ಬಾಲಕ ಪ್ರಜ್ವಲ್‌ ರಾಮು ಬಾಳಿಕಾಯಿ ಅವರ ಪಾಲಕರೊಂದಿಗೆ ಮಾತನಾಡಿದರು. ಮಗ ಬುದ್ಧಿಮಾಂಧ್ಯನಾಗಿದ್ದು, ತಂದೆ ಕ್ಯಾನ್ಸರ್‌ ಪೀಡಿತರಾಗಿದ್ದಾರೆ. ಕೂಡಲೇ ಮನೆಯನ್ನು ಕಟ್ಟಿಸಿಕೊಡುವಂತೆ ಬಾಲಕನ ತಂದೆ ಮನವಿ ಮಾಡಿಕೊಂಡರು.

Advertisement

ಹತ್ತಿರದಲ್ಲಿ ಪುನರ್ವಸತಿಗೆ ಮನವಿ: ಕೃಷ್ಣಾ ನದಿ ತೀರದಲ್ಲಿರುವ ಮೋಳವಾಡ ಗ್ರಾಮವನ್ನು ಮುಳುಗಡೆ ಗ್ರಾಮ ಎಂದು ಘೋಷಿಸಿ ಈಗಾಗಲೇ ಎಲ್ಲ ಕುಟುಂಬಗಳಿಗೂ ಸರ್ಕಾರ ಪರಿಹಾರ ಒದಗಿಸಿದೆ. ಆದರೆ ಪುನರ್ವಸತಿ ಕೇಂದ್ರವು ಮುಳುಗಡೆ ಗ್ರಾಮದಿಂದ ಎಂಟತ್ತು ಕಿ.ಮೀ. ದೂರವಿದೆ. ಇದರ ಬದಲಾಗಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸಮೀಪದಲ್ಲಿ ಪುನರ್ವಸತಿ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒಕ್ಕೋರಲಿನ ಮನವಿ ಮಾಡಿಕೊಂಡರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು, ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ. ಕೊಡ್ಲಿ, ತಹಶೀಲ್ದಾರ್‌ ಆರ್‌.ಆರ್‌. ಬುರ್ಲಿ, ತಾಲೂಕು ಆರೋಗ್ಯಾಧಿಕಾರಿ ಬಸಗೌಡ ಕಾಗೆ ಸೇರಿದಂತೆ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next